ಬೆಂಗಳೂರು: ಲಾಕ್‌ಡೌನ್ ಕುರಿತು ರಾಜ್ಯ ಸರ್ಕಾರ ವೈಜ್ಞಾನಿಕ ನೆಲೆಗಟ್ಟಿನಲ್ಲಿ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಈ ಕುರಿತು ಮುಖ್ಯಮಂತ್ರಿಗಳು ತೀರ್ಮಾನ ಕೈಗೊಳ್ಳುತ್ತಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಸುದ್ದಗಾರರೊಂದಿಗೆ ಮಾತನಾಡಿದ ಸಚಿವರು, ಜನಪ್ರತಿನಿಧಿಗಳು ಜನರ ಜೀವನವನ್ನು ಬಹಳ ಹತ್ತಿರದಿಂದ ನೋಡುತ್ತಾರೆ. ಜನರ ಭಾವನೆಗಳಿಗೆ ಸ್ಪಂದಿಸಲು ಕೆಲ ಜನಪ್ರತಿನಿಧಿಗಳು ಲಾಕ್ ಡೌನ್ ಬಗ್ಗೆ ಹೇಳಿಕೆ ನೀಡಬಹುದು. ಆದರೆ ಸರ್ಕಾರವು ವೈಜ್ಞಾನಿಕ ನೆಲೆಗಟ್ಟಿನಲ್ಲೇ ಲಾಕ್ ಡೌನ್ ಕುರಿತು ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಎಂದರು.
ಲಾಕ್ ಡೌನ್ ಗೆ ಸಂಬಂಧಿಸಿದಂತೆ ತಜ್ಞರು ವರದಿ ಕುರಿತಂತೆ ಮುಖ್ಯಮಂತ್ರಿಗಳು ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.
ಲಾಕ್ ಡೌನ್ ಎನ್ನುವುದು ವೈದ್ಯಕೀಯ ಸಂಗತಿ. ಪ್ರಕರಣಗಳ ಸಂಖ್ಯೆ ಹೆಚ್ಚಾದಾಗ ಎಷ್ಟೆಲ್ಲ ಸಾವು ನೋವುಗಳಾಗಿದೆ ಎಂಬುದನ್ನು ಅರಿಯಬೇಕು. ಇದು ಸಾಂಕ್ರಾಮಿಕವಾಗಿರುವುದರಿಂದ ಬಹಳ ಎಚ್ಚರಿಕೆ ಬೇಕು. ಲಾಕ್ ಡೌನ್ ಅನ್ನು ತಾಂತ್ರಿಕವಾಗಿ ಅರ್ಥ ಮಾಡಿಕೊಳ್ಳದೆ, ವೈದ್ಯಕೀಯ ವಲಯದ ಪರಿಣತರ ಅಭಿಪ್ರಾಯ ಪಡೆಯದೆ ಅದರ ಬಗ್ಗೆ ಮಾತನಾಡುವುದು ಅಪ್ರಸ್ತುತ ಎಂದರು.
ಕೋವಿಡ್ ಸಂಬಂಧಿ ಕಾರ್ಯನಿರ್ವಹಿಸುವವರಿಗೆ ರಿಸ್ಕ್ ಭತ್ಯೆ ನೀಡಲಾಗುತ್ತಿದೆ. ಯಾವುದೇ ಸಿಬ್ಬಂದಿ ಕೋವಿಡ್ ಸಂಬಂಧಿ ಕೆಲಸ ಮಾಡಿ ಭತ್ಯೆ ನೀಡಿಲ್ಲವೆಂದರೆ ಪರಾಮರ್ಶಿಸಲಾಗುವುದು ಎಂದರು.