ಬೆಂಗಳೂರು:’ರಾಜ್ಯಪಾಲರ ಭಾಷಣದಲ್ಲಿ ಸರ್ಕಾರದ ಸಾಧನೆ, ರಾಜ್ಯದ ಜನರ ಸಮಸ್ಯೆಗಳಿಗೆ ಪರಿಹಾರದಂತಹ ಯಾವುದೇ ಅಂಶಗಳು ಇಲ್ಲ. ಸರ್ಕಾರದ ಯಾವುದೇ ಹೊಸ ಅಡುಗೆ ಇಲ್ಲ. ನಮ್ಮ ಅಡುಗೆಯನ್ನು ಅವರದು ಎಂದು ಹೇಳಿಕೊಂಡಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟೀಕಿಸಿದ್ದಾರೆ.
ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣದ ನಂತರ ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ‘ನಾನು 30 ವರ್ಷಗಳಿಂದ ಅನೇಕ ರಾಜ್ಯಪಾಲರ ಭಾಷಣ ಕೇಳಿದ್ದೇನೆ. ಇಂದಿನ ಭಾಷಣದಲ್ಲಿ ಕೇವಲ ಹಸಿಸುಳ್ಳುಗಳೇ ಇವೆ. ಕಾಂಗ್ರೆಸ್ ಸರ್ಕಾರದ ಕೆಲಸಗಳಿಗೆ ಬಿಜೆಪಿ ಸರ್ಟಿಫಿಕೇಟ್ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಉದಾಹರಣೆಗೆ, ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಹೆಚ್ಚಾಗಿ ಅದರ ಮಾರಾಟದಿಂದ 3500 ಕೋಟಿ ಆದಾಯ ಬಂದಿದೆ. ಆದರೆ ನವೀಕೃತ ಇಂಧನ ಕ್ಷೇತ್ರದಲ್ಲಿ 350 ಕೋಟಿಯಷ್ಟು ಸಾಧನೆ ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾರೆ. ನಾನು ಇಂಧನ ಸಚಿವನಾಗಿದ್ದಾಗ ಈ ಸಾಧನೆ ಮಾಡಿದ್ದು, ಬಿಜೆಪಿ ಸರ್ಕಾರ ಈಗ ತನ್ನದೆಂದು ಹೇಳಿಕೊಳ್ಳುತ್ತಿದೆ. ಎಂದರು
ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕರ್ನಾಟಕವನ್ನು ದೇಶದ ಭ್ರಷ್ಟಾಚಾರ ರಾಜಧಾನಿಯನ್ನಾಗಿ ಮಾಡಿದ್ದಾರೆ. ಸರ್ಕಾರದ ಭ್ರಷ್ಟಾಚಾರದ ಬಗ್ಗೆ ವಿರೋಧ ಪಕ್ಷದ ಟೀಕೆ ಒಂದು ಕಡೆಯಾದರೆ, ಮತ್ತೊಂದು ಕಡೆ ಬಿಜೆಪಿ ಶಾಸಕರುಗಳು ಮಾಡುತ್ತಿರುವ ಆರೋಪ. ಮಾಧ್ಯಮಗಳು ದಿನ ನಿತ್ಯ ಹಗರಣಗಳನ್ನು ಬಯಲಿಗೆಳೆಯುತ್ತಿವೆ. ವಿಧಾನಸೌಧದ ಗೋಡೆಗಳು ಲಂಚ, ಲಂಚ ಅಂತಾ ಕೂಗುತ್ತಿವೆ. ಎಲ್ಲ ಸರ್ಕಾರಿ ಅಧಿಕಾರಿಗಳು ಲಂಚ ಲಂಚ ಅನ್ನುತ್ತಿದ್ದಾರೆ. ಈ ಸರ್ಕಾರ ಕಳೆದ ಮೂರೂವರೆ ವರ್ಷಗಳ ಆಡಳಿತದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದ್ದಕ್ಕಿಂತ ಭ್ರಷ್ಟರನ್ನು ರಕ್ಷಿಸಿದ್ದೇ ಹೆಚ್ಚು. ಅಧಿಕಾರ ಕಳೆದುಕೊಳ್ಳುವಾಗಲಾದರೂ ಭ್ರಷ್ಟಾಚಾರ ನಿಯಂತ್ರಣದ ಬಗ್ಗೆ ಒಂದೇ ಒಂದು ಮಾತನಾಡದಿರುವುದು ದುರಂತ ಎಂದು ಪ್ರತಿಕ್ರಿಯಿಸಿದರು.
ರಾಜ್ಯದಲ್ಲಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ನೆರವಿಗೆ ನಿಲ್ಲುವ ಬಗ್ಗೆ ಯಾವುದೇ ಕಾರ್ಯಯೋಜನೆ ಇಲ್ಲ. ಅಡಿಕೆ, ತೆಂಗು, ಮೆಣಸು ಬೆಳೆಗಳಿಗೆ ಕೊಳೆ ರೋಗ ವ್ಯಾಪಕವಾಗಿ ಕಾಡುತ್ತಿವೆ. ಗೋವುಗಳು ಚರ್ಮಗಂಟು ಸೋಂಕಿಗೆ ಬಲಿಯಾಗುತ್ತಿವೆ. ಈ ವಿಚಾರದಲ್ಲಿ ರೈತರಿಗೆ ನೆರವಾಗುವ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ ಎಂದು ಟೀಕಿಸಿರುವ ಡಿಕೆಶಿ, ನಿರುದ್ಯೋಗ ಸಮಸ್ಯೆ ರಾಜ್ಯದಲ್ಲಿದೆ. ಇವರು ಉದ್ಯೋಗ ಸೃಷ್ಟಿ ಬಗ್ಗೆಯೂ ಮಾತನಾಡಿದ್ದಾರೆ. ಎಷ್ಟು ಉದ್ಯೋಗ ಸೃಷ್ಟಿ ಮಾಡಿದ್ದೇವೆ ಎಂದು ಹೇಳಬೇಕಲ್ಲವೇ? 1 ಲಕ್ಷ ಉದ್ಯೋಗ ಕೊಟ್ಟಿದ್ದೇವೆ ಎಂದಿದ್ದಾರೆ. ಯಾರಿಗೆ ಯಾವ ಕ್ಷೇತ್ರದಲ್ಲಿ ಉದ್ಯೋಗ ನೀಡಿದ್ದಾರೆ ಎಂದು ಹೇಳಬೇಕಲ್ಲವೆ. ರಾಜ್ಯದಲ್ಲಿ 2.80 ಲಕ್ಷ ಸರ್ಕಾರಿ ಹುದ್ದೆ ಖಾಲಿ ಇದ್ದರೂ ಅದನ್ನು ತುಂಬುವ ಕೆಲಸ ಈ ಸರ್ಕಾರದಿಂದ ಆಗಿಲ್ಲ. ಇನ್ನು ಖಾಸಗಿ ಉದ್ಯೋಗ ಸೃಷ್ಟಿ ಬಗ್ಗೆಯೂ ಯಾವುದೇ ಕಾರ್ಯಕ್ರಮ ಇಲ್ಲ. ಹೆಚ್ಚು ಉದ್ಯೋಗಾವಕಾಶ ಇರುವುದು ಕೃಷಿ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಯಲ್ಲಿ. ಈ ಕ್ಷೇತ್ರಗಳಿಗೆ ಉತ್ತೇಜನ ನೀಡಲು ಸರ್ಕಾರ ಕನಿಷ್ಠ ಚಿಂತನೆಯನ್ನು ಮಾಡಿಲ್ಲ ಎಂದಿದ್ದಾರೆ.
ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಮಾತನಾಡಿಲ್ಲ. ಎಂದಿರುವ ಡಿಕೆಶಿ, ಐಟಿ ಕ್ಯಾಪಿಟಲ್, ಸಿಲಿಕಾನ್ ಸಿಟಿ, ಉದ್ಯಾನ ನಗರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬೆಂಗಳೂರು ಒಂದೇ ಒಂದು ಮಳೆಗೆ ಪ್ರವಾಹ ಪೀಡಿತ ಪ್ರದೇಶವಾಗುವ ದುಸ್ಥಿತಿಗೆ ಬಂದಿದೆ. ರಾಜ್ಯ ಮಾತ್ರವಲ್ಲ ದೇಶಕ್ಕೆ ಆದಾಯ ನೀಡುವ ಬೆಂಗಳೂರು ನಗರದ ಸಮರ್ಪಕ ಅಭಿವೃದ್ಧಿ ಬಗ್ಗೆ ಬಿಜೆಪಿ ಸರ್ಕಾರ ಗಮನಹರಿಸಿಲ್ಲ ಎಂದಿದ್ದಾರೆ.
ಈ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿ ಆಗಿಲ್ಲ. ಹೀಗಾಗಿ ಕಟೀಲ್ ಸೇರಿದಂತೆ ಬಿಜೆಪಿ ನಾಯಕರು ಕೇವಲ ಭಾವನಾತ್ಮಕ ವಿಚಾರಗಳ ಬಗ್ಗೆ ಮಾತನಾಡುತ್ತಿದ್ದಾರೆ. ಈ ಸರ್ಕಾರದ ಆಯಸ್ಸು ಇನ್ನು 60 ದಿನಗಳು ಮಾತ್ರ. ನಂತರ ಹೊಸ ಸರ್ಕಾರ ರಚನೆ ಆಗಲಿದೆ. ನಂತರ ನಾವು ರಾಜ್ಯದ ಜನರ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ಕೆಲಸ ಮಾಡುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.