ಹಾಸನ: ಕಾಂಗ್ರೆಸ್ ನಾಯಕರು ಮುಸ್ಲಿಮರ ಮತಗಳ ಋಣದಲ್ಲಿ ಇರುವುದರಿಂದ ಗಲಭೆ ವಿಚಾರದಲ್ಲಿ ಗಲಭೆಕೋರರ ಪರ ಹೇಳಿಕೆ ನೀಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಟೀಕಿಸಿದ್ದಾರೆ.
ಆದಿಚುಂಚನಗಿರಿ ಮಠದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯದಲ್ಲಿ ಸಕಲೇಶಪುರ ಪಟ್ಟಣದಲ್ಲಿ ನಡೆದ, ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್,, ಮೈಸೂರಿನಲ್ಲಿ ನಡೆದ ಗಲಭೆಯ ವಿಚಾರದಲ್ಲಿ ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ ಎಂದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಂದು ದಾರಿ ಹಿಡಿದರೆ, ಸಿಎಂ ಸಿದ್ದರಾಮಯ್ಯ ಮತ್ತೊಂದು ದಾರಿ ಹಿಡಿದಿದ್ದಾರೆ. ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿ, ಪೊಲೀಸರನ್ನು ಗಾಯಗೊಳಿಸುವುದು ಹೊಸತಲ್ಲ. ಮೈಸೂರಿನ ಪೊಲೀಸರು ಮುಂಜಾಗ್ರತಾ ಕ್ರಮ ವಹಿಸದೇ ಇದ್ದಲ್ಲಿ ಇಡೀ ಪೊಲೀಸ್ ಠಾಣೆ ಧ್ವಂಸವಾಗುತ್ತಿತ್ತು. ಪೊಲೀಸರು ಬಹಳ ಮುನ್ನೆಚ್ಚರಿಕೆ ಕ್ರಮ ವಹಿಸಿದ್ದಾರೆ. ಮುಸ್ಲಿಮರ ಮತಗಳ ಭಿಕ್ಷೆಯ ಋಣದಲ್ಲಿ ಕಾಂಗ್ರೆಸ್ ಇರುವುದರಿಂದ, ಸಚಿವರು, ಮುಖ್ಯಮಂತ್ರಿ ಈ ರೀತಿ ವರ್ತಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಬೆಂಕಿ ಹಚ್ಚಲು ಏನೇನು ಹೇಳಬೇಕೋ ಅದನ್ನು ಹೇಳಿದ್ದಾರೆ. ಸಚಿವರು ಪೊಲೀಸರಿಗೆ ನಿಂದಿಸಿದ್ದಾರೆ ಎಂದು ಅಶೋಕ್ ದೂರಿದರು.