ಹುಬ್ಬಳ್ಳಿ: ಇಡೀ ಜಗತ್ತಿನಲ್ಲಿ ಉಚಿತ ಹಾಗೂ ಬೇರೆ ದೇಶಗಳಿಗಿಂತ ಹೆಚ್ಚು ಪಟ್ಟು ಲಸಿಕೆಯನ್ನು ಭಾರತದಲ್ಲಿ ನೀಡಿರುವುದು ಮೈಲುಗಲ್ಲಾಗಿದೆ. ಇನ್ನೂ ಉಳಿದವರಿಗೆ ವೇಗವಾಗಿ ಲಸಿಕೆ ನೀಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಶೇ.83 ಜನರಿಗೆ ಮೊದಲ ಡೋಸ್ ಹಾಗೂ ಶೇ.38 ಜನರಿಗೆ ಎರಡನೇ ಡೋಸ್ ನೀಡಲಾಗಿದೆ. ಭಾರತದಲ್ಲಿ ಅಮೆರಿಕದ ಎರಡೂವರೆ ಪಟ್ಟು, ಬ್ರೆಜಿಲ್ ನ 4 ಪಟ್ಟು, ಜಪಾನ್ ನ 8 ಪಟ್ಟು, ಇಂಗ್ಲೆಂಡ್ ನ 10 ಪಟ್ಟು, ಯುರೋಪ್ ದೇಶಗಳ 2 ಪಟ್ಟು ಅಧಿಕ ಜನರಿಗೆ ಲಸಿಕೆ ನೀಡಲಾಗಿದೆ. ದೇಶದಲ್ಲಿ ಎರಡೂ ಡೋಸ್ ಪಡೆದವರ ಸಂಖ್ಯೆ 27.4 ಕೋಟಿ. ಅನೇಕ ದೇಶಗಳಲ್ಲಿ ಹಣ ಕೊಟ್ಟು ಖರೀದಿ ಮಾಡುವ ವ್ಯವಸ್ಥೆ ಇದ್ದು, ಭಾರತದಲ್ಲಿ ಉಚಿತ ಲಸಿಕೆ ನೀಡಲಾಗಿದೆ. ಇದಕ್ಕಾಗಿ 35 ಸಾವಿರ ಕೋಟಿ ರೂ. ನೀಡಲಾಗಿದೆ. ಲಸಿಕೆ ಖರೀದಿಗೆ ರಾಜ್ಯ ಸರ್ಕಾರದಿಂದ ಒಂದು ರೂಪಾಯಿಯೂ ನೀಡಿಲ್ಲ. ಕರ್ನಾಟಕದಲ್ಲಿ ಅತಿ ಕಡಿಮೆ ಲಸಿಕೆಯನ್ನು ಮಾರ್ಚ್ ನಲ್ಲಿ ನೀಡಲಾಗಿತ್ತು. ಸೆಪ್ಟೆಂಬರ್ ನಲ್ಲಿ 1.48 ಕೋಟಿ ನೀಡಲಾಗಿತ್ತು. ಒಂದೇ ದಿನ 31.75 ಲಕ್ಷ ಲಸಿಕೆಯನ್ನು ಸೆಪ್ಟೆಂಬರ್ 17 ರಂದು ನೀಡಲಾಗಿತ್ತು ಎಂದರು.
100 ಕೋಟಿ ಕೋವಿಡ್ ಲಸಿಕೆಯ ದೊಡ್ಡ ಮೈಲಿಗಲ್ಲನ್ನು ದೇಶ ತಲುಪಿದೆ. ಲಸಿಕೆ ಆವಿಷ್ಕರಿಸಿದ ವಿಜ್ಞಾನಿಗಳು, ಆರೋಗ್ಯ ಸಿಬ್ಬಂದಿ, ಪೊಲೀಸ್ ಇಲಾಖೆ ಎಲ್ಲರೂ ಇದಕ್ಕಾಗಿ ಶ್ರಮಿಸಿದ್ದಾರೆ. ಇದಕ್ಕಾಗಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ರಾಜ್ಯಾಧ್ಯಕ್ಞರು, ಕಾರ್ಯಕರ್ತರು ಕೂಡ ಹಗಲಿರುಳು ಕೊರೊನಾ ನಿಯಂತ್ರಿಸಲು ಶ್ರಮಿಸಿದ್ದಾರೆ. ಎಲ್ಲರಿಗೂ ಧನ್ಯವಾದ ಸಮರ್ಪಿಸುತ್ತೇನೆ. ಬಿಸಿಜಿ ಲಸಿಕೆ ಆವಿಷ್ಕಾರವಾದ 24 ವರ್ಷಗಳ ಬಳಿಕ ಭಾರತಕ್ಕೆ ಬಂತು. ಹೆಪಟೈಟಿಸ್-ಬಿ 15 ವರ್ಷದ ಬಳಿಕ ಬಂದಿತ್ತು. 12 ರೋಗಗಳ ಲಸಿಕೆಗಳು ಬೇರೆ ದೇಶಗಳಿಂದ ಭಾರತಕ್ಕೆ ಬರಲು ಅನೇಕ ವರ್ಷ ಬೇಕಾಯಿತು. ಆದರೆ ಕೊರೊನಾ ಲಸಿಕೆಯನ್ನು 2021 ರ ಜನವರಿ 16 ರಂದು ಮೊದಲು ನೀಡಲಾಯಿತು. ಪ್ರಧಾನಿ ನರೇಂದ್ರ ಮೋದಿಯವರ ಬದ್ಧತೆ, ದೂರದೃಷ್ಟಿ, ನಾಯಕತ್ವದಿಂದ ಇದನ್ನು ಸಾಧಿಸಲು ಸಾಧ್ಯವಾಗಿದೆ ಎಂದರು.