ಬೆಂಗಳೂರು,ಡಿ.16: ಸಾರ್ವಜನಿಕರ ಸುರಕ್ಷತೆಯ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಒಂದಿಲ್ಲೊಂದು ಹೊಸ ನಡೆಯನ್ನು ಕೈಗೊಳ್ಳುತ್ತಲೇ ಇದ್ದು, ಅವುಗಳ ಪೈಕಿ ಪ್ರಿಪೇಯ್ಡ್ ಆಟೋ ಸಹ ಒಂದಾಗಿದೆ. ಸುಗಮ ಹಾಗೂ ಸುರಕ್ಷಿತ ಸಂಚಾರ ಸಾರ್ವಜನಿಕರಿಗೆ ನೀಡುವ ಉದ್ದೇಶದೊಂದಿಗೆ ಈ ಸೇವೆ ಆರಂಭಿಸಿದ್ದರೂ ಪ್ರಿಪೇಯ್ಡ್ ಆಟೋ ನಿಲ್ದಾಣಗಳು ಹಲವೆಡೆ ಬಂದ್ ಆಗಿವೆ. ಇದರ ಪರಿಣಾಮವಾಗಿ ಪ್ರಯಾಣಿಕರು ಆಟೋ ಚಾಲಕರಿಂದ ತೀವ್ರ ಶೋಷಣೆಗೊಳಪಡುವಂತಾಗಿದೆ.
ಮೆಜೆಸ್ಟಿಕ್, ಗಾಂಧಿ ಬಜಾರ್‌ನಂತಹ ಜನ ನಿಬಿಡ ಸ್ಥಳಗಳಲ್ಲೂಪ್ರಿಪೇಯ್ಡ್ (ಮುಂಗಡ ಪಾವತಿ) ಆಟೊಗಳ ಸೇವೆ ಜನರಿಗೆ ಲಭ್ಯವಾಗುತ್ತಿಲ್ಲ. ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿರುವುದರಿಂದ ಆಟೊ ಚಾಲಕರು ಹೇಳಿದ್ದೇ ದರ ಎಂಬಂತಾಗಿದೆ.


ಪ್ರಿ-ಪೇಯ್ಡ್ ಆಟೋ ನಿಲ್ದಾಣಗಳು ಕಾರ್ಯಾಚರಿಸದ ಕಾರಣ ದೂರದ ಊರುಗಳಿಂದ ಆಗಮಿಸುವ ಪ್ರಯಾಣಿಕರನ್ನು ಮೆಜೆಸ್ಟಿಕ್ ಪ್ರದೇಶದಲ್ಲಿಆಟೋ ಚಾಲಕರು ಶೋಷಣೆ ನಡೆಸುವುದು ಸಾಮಾನ್ಯವಾಗಿದೆ. ಬಹುತೇಕ ಆಟೋ ಚಾಲಕರು ಮೀಟರ್ ಹಾಕಲು ನಿರಾಕರಿಸುತ್ತಿದ್ದು, ಅವರು ಹೇಳಿದಷ್ಟು ಹಣ ನೀಡಿ ಪ್ರಯಾಣಿಕರು ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಷ್ಟೆಲ್ಲಾಅವ್ಯವಸ್ಥೆಗಳು ಸೃಷ್ಟಿಯಾಗಿದ್ದರೂ ಪ್ರೀ ಪೇಯ್ಡ್ ಆಟೋ ನಿಲ್ದಾಣಗಳನ್ನು ಸುಧಾರಿಸುವ ಗೋಜಿಗೆ ಪೊಲೀಸ್ ಇಲಾಖೆ ಮುಂದಾಗಿಲ್ಲ. ಮಳೆ ಬಂದಾಗಲಂತೂ ಆಟೊಗಳು ಸಿಗದೆ ಪ್ರಯಾಣಿಕರು ಪರದಾಡುವಂತಾಗುತ್ತದೆ. ಈ ಸಂದರ್ಭದಲ್ಲಿಆ್ಯಪ್ ಆಧಾರಿತ ಆಟೊಗಳು ಕೂಡ ಸಿಗದಿರುವುದು ಸಮಸ್ಯೆ ಸೃಷ್ಟಿಸುತ್ತಿದೆ. ಒಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಇದೇ ರೀತಿಯ ಪರಿಸ್ಥಿತಿ ಕಂಡುಬಂದಲ್ಲಿ ಪ್ರಿ-ಪೇಯ್ಡ್ ಆಟೋ ಸಂಚಾರ ಪೂರ್ಣ ಸ್ಥಗಿತವಾಗೋದು ಗ್ಯಾರೆಂಟಿ..

