ಕಲ್ಬುರ್ಗಿ :ಪಿಎಸ್ಐ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಅಫಜಲ್ ಪುರದ ಶಾಸಕ ಎಂ.ವೈ.ಪಾಟೀಲ್ ಅವರ ಗನ್ ಮ್ಯಾನ್ ಅಯ್ಯಾಳಿ ದೇಸಾಯಿ ಹಾಗೂ ರುದ್ರಗೌಡ ಎಂಬುವರನ್ನು ಬಂಧಿಸಲಾಗಿದೆ. ಈ ಪ್ರಕರಣದ ಮೂಲಕ್ಕೆ ಹೋಗಿ ತನಿಖೆ ಮಾಡಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕಲ್ಬುರ್ಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಯುಪಿಎಸ್ಸಿ ಮಾದರಿಯಲ್ಲಿ ನೇಮಕಾತಿ ಪರೀಕ್ಷೆ ನಡೆಸುವ ವ್ಯವಸ್ಥೆ ಮಾಡಲಾಗಿತ್ತು. ಈ ಭದ್ರತೆಯ ವ್ಯವಸ್ಥೆ, ಪಾರದರ್ಶಕತೆಯ ನಡುವೆಯೂ ಲೋಪವೆಸಗಿ ವಾಮಮಾರ್ಗದಲ್ಲಿ ಅಕ್ರಮ ಕಾರ್ಯಾಚರಣೆ ಮಾಡಿರುವುದಕ್ಕೆ ಪೂರ್ಣವಿರಾಮ ಹಾಕಬೇಕೆಂದು ಸರ್ಕಾರದ ಚಿಂತನೆಯಾಗಿದೆ ಎಂದು ತಿಳಿಸಿದರು.
ಪಿಎಸ್ ಐ ಪರೀಕ್ಷೆ ಅಕ್ರಮದ ಬಗ್ಗೆ ದೂರು ಬಂದ ತಕ್ಷಣವೇ ಪ್ರಾಥಮಿಕ ತನಿಖೆ ಕೂಲಂಕುಷವಾಗಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಉತ್ತರಪತ್ರಿಕೆಗಳಲ್ಲಿ ವ್ಯತ್ಯಾಸ ಕಂಡುಬಂದ ಮೇಲೆ ಪ್ರಕರಣವನ್ನು ಸಿಐಡಿಗೆ ವಹಿಸಲು ತೀರ್ಮಾನಿಸಲಾಗಿದೆ. ನೇಮಕಾತಿಯಲ್ಲಿ ಪಾರದರ್ಶಕತೆ ಇರಬೇಕು ಹಾಗೂ ಸಮಯ ವ್ಯರ್ಥವಾಗದೇ ಕಾರ್ಯಾಚರಣೆ ಮಾಡಲು ಸೂಚನೆ ನೀಡಲಾಗಿದೆ. ಕಲ್ಬುರ್ಗಿಯಲ್ಲಿ ಶಿಕ್ಷಣ ಸಂಸ್ಥೆಗಳ ಮಾಲೀಕರನ್ನು ಈಗಾಗಲೇ ವಿಚಾರಣೆಗೆ ಒಳಪಡಿಸಲಾಗಿದೆ. ಜ್ಞಾನಜ್ಯೋತಿ ಶಾಲೆಯ ಮುಖ್ಯಸ್ಥರು ತಲೆಮರೆಸಿಕೊಂಡಿದ್ದು, ಶೋಧನಾ ಕಾರ್ಯ ಮುಂದುವರೆದಿದೆ. ಈಗ ಕಾಂಗ್ರೆಸ್ ಪಕ್ಷದ ಶಾಸಕ ಎಂ ವೈ ಪಾಟೀಲ್ ಅವರ ಗನ್ ಮ್ಯಾನ್ ಅಯ್ಯಾಳಿ ದೇಸಾಯಿ ಹಾಗೂ ರುದ್ರಗೌಡ ಅವರನ್ನು ಬಂಧಿಸಲಾಗಿದೆ. ಪರೀಕ್ಷೆಯನ್ನು ಬರೆದು ಉತ್ತೀರ್ಣರಾದ ಅಭ್ಯರ್ಥಿಗಳ ವಿಚಾರಣೆಯೂ ನಡೆಸಿ, ಸಮಗ್ರ ತನಿಖೆ ಮಾಡಲಾಗುವುದು ಎಂದು ಸಿಎಂ ಹೇಳಿದರು.
ದಿವ್ಯಾ ಹಾಗರಗಿಯವರು ಭಾರತೀಯ ಜನತಾ ಪಕ್ಷದಲ್ಲಿ ಯಾವುದೇ ಜವಾಬ್ದಾರಿಯನ್ನು ಹೊಂದಿಲ್ಲ. ಈ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ಮೇಲೆ ಕಠಿಣ ಕಾನೂನ ಕ್ರಮ ತೆಗೆದುಕೊಳ್ಳಲಾಗುವುದು. ಸರ್ಕಾರವೇ ಸಿಐಡಿ ತನಿಖೆಗೆ ಅನುಮತಿ ನೀಡಿದೆ. ತನಿಖೆ ಮುಕ್ತವಾಗಿ ನಡೆಸಲು ಸೂಚನೆ ನೀಡಿದೆ. ಬೇರೆ ಪಕ್ಷಗಳು ಈ ರೀತಿಯ ಪ್ರಕರಣವನ್ನೇ ಮುಚ್ಚಿಹಾಕಿರುವ ಇತಿಹಾಸ ಇದೆ. ಹಿಂದೆ ಪಿಎಸ್ಐ ಪರೀಕ್ಷೆಗಳು 3-4 ಬಾರಿ ಮಾಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಉತ್ತೀರ್ಣರಾದ ಅಭ್ಯರ್ಥಿಗಳ ವಿಚಾರಣೆ ನಡೆಯುತ್ತಿದ್ದು, ಮಧ್ಯಂತರ ವರದಿ ಬಂದ ನಂತರ ಮರುಪರೀಕ್ಷೆಯ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಸಿಐಡಿ ತನಿಖೆ ನಡೆಯುತ್ತಿರುವುದರಿಂದ ಎಲ್ಲಾ ಮಾಹಿತಿಗಳನ್ನು ಬಹಿರಂಗಗೊಳಿಸಲು ಸಾಧ್ಯವಿಲ್ಲ ಎಂದರು.
ಪಿಎಸ್ ಐ ನೇಮಕಾತಿ ಅಕ್ರಮದ ತನಿಖೆಯನ್ನು ನ್ಯಾಯಾಲಯದ ನೇತೃತ್ವದಲ್ಲಿ ತನಿಖೆ ಅಥವಾ ಸಿಬಿಐಗೆ ವಹಿಸಬೇಕೆಂದು ಬೇರೆ ಪಕ್ಷಗಳು ಆಗ್ರಹಿಸುತ್ತಿರುವ ಬಗ್ಗೆ ಪ್ರತಿಕ್ರಯಿಸಿ, ತನಿಖೆಯ ಮಧ್ಯಂತರ ವರದಿ ಬಂದ ನಂತರ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ, ತನಿಖೆಯಲ್ಲಿ ಎಲ್ಲ ಅಂಶಗಳು ತಿಳಿಯುತ್ತದೆ. ಎಲ್ಲ ಸಾಕ್ಷ್ಯಾಧಾರಗಳು, ಪ್ರತ್ಯಕ್ಷದರ್ಶಿಗಳ ಹೇಳಿಕೆಗಳ ಆಧಾರದ ಮೇಲೆ ಸಮಗ್ರ ತನಿಖೆ ಆಗುತ್ತಿದೆ ಎಂದು ತಿಳಿಸಿದರು.