ಬೆಂಗಳೂರು: ರಾಜ್ಯದ ಮೂರು ಮಹಾನಗರ ಪಾಲಿಕೆ, ಒಂದು ನಗರಸಭೆ ಹಾಗೂ ಒಂದು ಪುರಸಭೆಗಳ ಚುನಾವಣೆ ವೇಳಾಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ.
ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮತ್ತು ಕಲಬುರಗಿ ಮಹಾನಗರ ಪಾಲಿಕೆ, ದೊಡ್ಡಬಳ್ಳಾಪುರ ನಗರಸಭೆ, ತೆರೀಕೆರೆ ಪುರಸಭೆಗೆ ಸೆ. 3ರಂದು ಮತದಾನ ನಡೆಯಲಿದೆ.
ಆ.16 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಆ. 23 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಆ. 24 ರಂದು ನಾಮಪತ್ರ ಪರಿಶೀಲನೆ, ಆ.26 ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಸೆ.3 ರಂದು ಮತದಾನ ನಡೆಯಲಿದೆ. ಮತಗಳ ಎಣಿಕೆಯು ಸೆ.6 ರಂದು ನಡೆಯಲಿದೆ.
ಬೆಳಗಾವಿಯ 58 ವಾರ್ಡ್, ಹುಬ್ಬಳ್ಳಿ-ಧಾರವಾಡದ 82 ವಾರ್ಡ್, ಕಲಬುರಗಿಯ 55 ವಾರ್ಡ್, ದೊಡ್ಡ ಬಳ್ಳಾಪುರದ 31 ವಾಡ್೯, ತೆರೀಕೆರೆ ಪುರಸಭೆ 23 ವಾಡ್೯, ಬೀದರ್ ನಗರ ಸಭೆಯ 26 ಮತ್ತು 32ನೇ ವಾಡ್೯, ಶಿವಮೊಗ್ಗ ನಗರಸಭೆಯ 29ನೇ ವಾಡ್೯, ಮೈಸೂರು ಮಹಾನಗರ ಪಾಲಿಕೆಯ 36ನೇ ವಾಡ್೯, ಮುಧೋಳ ನಗರಸಭೆಯ 18 ನೇ ವಾಡ್೯ ಸೇರಿ ನಗರ ಸ್ಥಳೀಯ ಸಂಸ್ಥೆಯ 273 ವಾಡ್೯ಗಳಿಗೆ ಚುನಾವಣೆ ನಡೆಯಲಿದೆ.
ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮಿತಿಯನ್ನು ಚುನಾವಣಾ ಆಯೋಗ ನಿರ್ಧರಿಸಿದ್ದು, ಅಭ್ಯರ್ಥಿಯು ಮಹಾನಗರ ಪಾಲಿಕೆ 3 ಲಕ್ಷ ರೂ., ನಗರ ಸಭೆ 2 ಲಕ್ಷ ರೂ., ಪುರಸಭೆ 1.5 ಲಕ್ಷ ರೂ., ಪಟ್ಟಣ ಪಂಚಾಯತ್ 1 ಲಕ್ಷ ರೂ., ವೆಚ್ಚ ಮಾಡಬಹುದು.