ಸ್ಯಾಂಡಲ್ ವುಡ್ ನ ಬಹು ಬೇಡಿಕೆಯ ನಟ, ಅಭಿಮಾನಿಗಳ ನೆಚ್ಚಿನ ನಾಯಕ ಡಿ ಬಾಸ್ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ ಎನ್ನುವ ಮಾತು ಅನೇಕ ದಿನಗಳಿಂದ ಕೇಳಿ ಬರುತ್ತಿದೆ. ದರ್ಶನ್ ಸಿನಿಮಾ ಬಿಟ್ಟರೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳುವುದು ತೀರಾ ಅಪರೂಪ. ಇದುವರೆಗೂ ದರ್ಶನ್ ಯಾವ ಕಿರುತೆರೆಯ ಶೋಗಳನ್ನು ನಡೆಸಿಕೊಟ್ಟಿಲ್ಲ. ಆದರೆ ದಿಢೀರನೆ ದರ್ಶನ್ ಎಂಟ್ರಿ ಕೊಡುತ್ತಿದ್ದಾರೆ, ಹಾಲಿವುಡ್ ಶೋವೊಂದನ್ನು ಕನ್ನಡದಲ್ಲಿ ನಡೆಸಿಕೊಡಲಿದ್ದಾರೆ, ಯಾವ ಚಾನೆಲ್, ಯವ ಶೋ ಹೀಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿತ್ತು. ಆದರೆ ಈವರೆಗೂ ದರ್ಶನ್ ಈ ಊಹಾಪೋಹಗಳಿಗೆ ಉತ್ತರ ನೀಡಿರಲಿಲ್ಲ..ಇತ್ತೀಚೆಗಷ್ಟೇ ಇಂಗ್ಲೀಷ್ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಭಿಮಾನಿಗಳ ಈ ಪ್ರಶ್ನೆಗೆ ಸ್ಪಷ್ಟಪಡಿಸಿದ್ದಾರೆ.
“ನನಗೆ ಎರಡು ಕಡೆ ಅಭಿನಯಿಸಲು ಬರಲ್ಲ” ಎಂದು ಹೇಳಿದ್ದಾರೆ. ಜೊತೆಗೆ “ನಾನೀಗ ಸದ್ಯ ಬೆಳ್ಳಿ ತೆರೆಮೇಲೆ ಅಭಿನಯಿಸುವುದನ್ನು ಎಂಜಾಯ್ ಮಾಡುತ್ತಿದ್ದೀನಿ. ನಾನು ಕಿರುತೆರೆಗೆ ಬರುವ ಬಗ್ಗೆ ಯೋಚನೆ ಕೂಡ ಮಾಡಿಲ್ಲ” ಎಂದು ಹೇಳುವ ಮೂಲಕ ಕಿರುತೆರೆ ಎಂಟ್ರಿ ಬಗ್ಗೆ ಇದ್ದ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.
‘ಒಡೆಯ’ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಇದೆ ತಿಂಗಳು 12ಕ್ಕೆ ಒಡೆಯ ತೆರೆಗೆ ಬರಲು ಸಿದ್ಧವಾಗಿದೆ. ಇನ್ನು ರಾಬರ್ಟ್ ಸಿನಿಮಾದ ಚಿತ್ರೀಕರಣ ಕೂಡ ನಡೆಯುತ್ತಿದೆ. ‘ಗಂಡುಗಲಿ ಮದಕರಿ ನಾಯಕ’ ಈಗಾಗಲೆ ಸೆಟ್ಟೇರಿದೆ. ಚಿತ್ರದುರ್ಗದಲ್ಲಿ ಮುಹೂರ್ತ ಮಾಡಿಕೊಂಡಿರುವ ಇದೆ ತಿಂಗಳು 6ಕ್ಕೆ ಬೆಂಗಳೂರಿನಲ್ಲಿ ಅಧಿಕೃತವಾಗಿ ಲಾಂಚ್ ಆಗಲಿದೆ. ಅಲ್ಲದೆ ದರ್ಶನ್ ಬಳಿ ಸಾಲು ಸಾಲು ಸಿನಿಮಾಗಳಿವೆ. ಇದರ ನಡುವೆಯೂ ದರ್ಶನ್ ಕಿರುತೆರೆಗೆ ಬರುವುದು ಅನುಮಾನ. ಒಟ್ನಲ್ಲಿ ಖುದ್ದು ದರ್ಶನ್ ಅಭಿಮಾನಿಗಳ ಡೌಟ್ ಕ್ಲಿಯರ್ ಮಾಡಿದ್ದು, ಇದು ಕೆಲವರಿಗೆ ಸಂತಸದ ವಿಚಾರವಾದ್ರೆ ಮತ್ತೆ ಹಲವರಿಗೆ ಬೇಸರದ ಸಂಗತಿಯಾಗಿದೆ.