ಚಿಕ್ಕಬಳ್ಳಾಪುರ,; ರಾಷ್ಟ್ರೀಯ ಹೆದ್ದಾರಿ 234 ರ ಗೌರಿಬಿದನೂರಿನಿಂದ ಚಿಕ್ಕಬಳ್ಳಾಪುರವರೆಗಿನ 50.66 ಕಿ.ಮೀ. ಉದ್ದದ ರಸ್ತೆ ಕಾಮಗಾರಿಯನ್ನು ಮೇ ತಿಂಗಳೊಳಗಾಗಿ ಪೂರ್ಣಗೊಳಿಸಬೇಕು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.
106.50 ಕೋಟಿ ರೂ. ಮೊತ್ತದ ರಸ್ತೆ ನಿರ್ಮಾಣ ಕಾಮಗಾರಿಯನ್ನು ಸೆಲ್ ಅಸೈನಿಯ ಎಂಬ ಕಂಪನಿಗೆ ಗುತ್ತಿಗೆ ನೀಡಿದ್ದು, 2015ರ ಜುಲೈ ನಲ್ಲಿ ಕಾಮಗಾರಿ ಆರಂಭವಾಗಿ 2017ರ ಜುಲೈ ನಲ್ಲಿ ಪೂರ್ಣಗೊಳ್ಳಬೇಕಿತ್ತು. ಈ ಕಂಪನಿಯು ಕಾಮಗಾರಿಯನ್ನು ಅಸಮರ್ಪಕವಾಗಿ ಮಾಡಿ 2018ರ ಜುಲೈನಲ್ಲಿ ಕೈ ಬಿಟ್ಟಿತ್ತು. 2018 ರ ಜುಲೈ ನಿಂದ 2019 ರವರೆಗೆ ರಸ್ತೆ ಕಾಮಗಾರಿ ನಡೆದಿರಲಿಲ್ಲ. ಇದರಿಂದಾಗಿ ಸುತ್ತಮುತ್ತಲಿನ ಹಳ್ಳಿಗಳ ಜನರು ಸಂಚರಿಸಲು ಸಾಧ್ಯವಾಗದೆ ಪರದಾಡುತ್ತಿದ್ದರು. ಈ ಭಾಗದ ರೈತರು, ಕಾರ್ಮಿಕರು ನಿತ್ಯದ ಚಟುವಟಿಕೆಗಳಿಗೆ ಸಂಚಾರ ಮಾಡಬೇಕಿದ್ದು, ಅಪೂರ್ಣ ಕಾಮಗಾರಿಯಿಂದಾಗಿ ಸಂಚಾರ ಕಷ್ಟವಾಗಿತ್ತು.
2020ರ ಫೆಬ್ರವರಿಯಲ್ಲಿ ಉಪ ಗುತ್ತಿಗೆದಾರರನ್ನು ನಿಯೋಜಿಸುವಂತೆ ಕ್ರಮ ಕೈಗೊಂಡಿದ್ದರು. ನಂತರ 2020 ರ ಜೂನ್ ನಲ್ಲಿ ಕಾಮಗಾರಿ ಪುನರಾರಂಭಗೊಂಡು ಮಂದಗತಿಯಲ್ಲಿ ನಡೆಯುತ್ತಿದೆ.
ಈ ಹಿನ್ನೆಲೆಯಲ್ಲಿ ಕಾಮಗಾರಿ ಪರಿಶೀಲಿಸಿದ ಸಚಿವ ಡಾ.ಕೆ.ಸುಧಾಕರ್, ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಶನಿವಾರ ಪರಿಶೀಲನೆ ನಡೆಸಿದ ಸಚಿವ ಡಾ.ಕೆ.ಸುಧಾಕರ್, ಕಾಮಗಾರಿಗೆ ಚುರುಕು ನೀಡಿ ವೇಗವಾಗಿ ಮುಗಿಸಬೇಕು ಎಂದು ಅಧಿಕಾರಿಗಳಿಗೆ ಚುರುಕು ಮೂಡಿಸಿದರು. ಪರಿಶೀಲನೆ ವೇಳೆ ಚಿಕ್ಕಬಳ್ಳಾಪುರ ರಾಷ್ಟ್ರೀಯ ಹೆದ್ದಾರಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಲ್ಲಿಕಾರ್ಜುನ ಕಾಮಗಾರಿ ಪ್ರಗತಿ ಕುರಿತು ಸಚಿವರಿಗೆ ಮಾಹಿತಿ ನೀಡಿದರು.
ಇದಲ್ಲದೆ, ಚಿಕ್ಕಬಳ್ಳಾಪುರ ನಗರದ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿ ಕಚೇರಿವರೆಗಿನ ರಸ್ತೆಯನ್ನು ನಾಲ್ಕು ಪಥದ ರಸ್ತೆಯಾಗಿ ನಿರ್ಮಿಸಬೇಕು. ಹಾಗೆಯೇ ಎರಡೂ ಬದಿ ಚರಂಡಿ ನಿರ್ಮಿಸಬೇಕು. ಬಾಕಿ ಉಳಿದ ಯಾವುದೇ ಕಾಮಗಾರಿಗಳನ್ನು ಗುಣಮಟ್ಟದಿಂದ ಮಾಡಬೇಕು ಎಂದು ಸಚಿವ ಡಾ.ಕೆ.ಸುಧಾಕರ್ ಕಟ್ಟುನಿಟ್ಟಿನ ಸೂಚನೆ ನೀಡಿದರು.