ರಾಮನಗರ: ಗುತ್ತಿಗೆದಾರ ಸಂತೋಷ್ ಸಾವಿನ ಹಿಂದೆ ಅನೇಕ ಅನುಮಾನಗಳು ಮನೆ ಮಾಡಿದ್ದು, ಸೂಕ್ತ ತನಿಖೆ ನಡೆಸುವ ಮೂಲಕ ಜನರ ಮುಂದೆ ಸತ್ಯಾಂಶವನ್ನು ಬಿಚ್ಚಿಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಒತ್ತಾಯಿಸಿದ್ದಾರೆ.
ಚನ್ನಪಟ್ಟಣದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; “ಸಚಿವ ಸ್ಥಾನಕ್ಕೆ ಕೆ.ಎಸ್.ಈಶ್ವರಪ್ಪ ರಾಜೀನಾಮೆ ನೀಡುವುದು ಉತ್ತಮ. ಅವರು ಇವತ್ತು ಅಥವಾ ನಾಳೆ ರಾಜೀನಾಮೆ ಕೊಡಬಹುದು. ಅವರ ಹೈಕಮಾಂಡ್ ಈ ಬಗ್ಗೆ ಹೇಳುತ್ತಾರೆ ಅನ್ನಿಸುತ್ತದೆ. ಈಗಿನ ಪರಿಸ್ಥಿತಿಯಲ್ಲಿ ಮೊದಲು ಅವರು ರಾಜೀನಾಮೆ ನೀಡುವುದು ಸೂಕ್ತ” ಎಂದರು.
ಸಂತೋಷ್ ಸಾವಿನ ಹಿಂದೆ ಹಲವಾರು ಸಂಶಯಗಳಿವೆ. ಜನರಲ್ಲಿ ಅನೇಕ ಪ್ರಶ್ನೆಗಳೂ ಇವೆ. ಸತ್ಯಾಂಶವನ್ನು ಹೊರ ತರಲು ತನಿಖೆಯಾಗಬೇಕು. ಇದು ಸರಕಾರದ ಜವಾಬ್ದಾರಿ ಎಂದು ಅವರು ಹೇಳಿದರು. ಮೃತ ವ್ಯಕ್ತಿ ನಾಲ್ಕು ಕೋಟಿ ರೂಪಾಯಿ ಕಾಮಗಾರಿ ಸರಕಾರದ ಕಾರ್ಯಾದೇಶ ಇಲ್ಲದೆ, ವರ್ಕ್ ಎಸ್ಟಿಮೇಟ್ ಇಲ್ಲದೇ ಕೆಲಸ ಮಾಡಿದ್ದು ಹೇಗೆ? ಅವರಿಗೆ ಕಾಮಗಾರಿ ಮಾಡಲು ಅನುಮತಿ ಕೊಟ್ಟವರು ಯಾರು? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.
ಯಾವ ಎಂಜಿನಿಯರ್ ಅಥವಾ ಸರಕಾರಿ ಸಂಸ್ಥೆ ಗಮನಕ್ಕೆ ಬಾರದೇ ಪೇಮೆಂಟ್ ನೀಡಬೇಕು ಎಂದರೆ ತಾಂತ್ರಿಕ ಸಮಸ್ಯೆ ಇದೆ. ಇದರ ನಡುವೆ ಪರ್ಸೆಂಟೆಜ್ ಮಾತುಗಳು ಕೇಳಿ ಬರುತ್ತಿವೆ. ಇವೆಲ್ಲದರ ಬಗ್ಗೆ ಸಮಗ್ರ ತನಿಖೆ ಆಗಬೇಕಿದೆ. ಈ ಕಾರಣಕ್ಕೆ ಸಂತೋಷ್ ಸಾವಿನ ಬಗ್ಗೆ ಹಲವು ಅನುಮಾನಗಳು ಕೂಡ ಇವೆ. ಅಲ್ಲದೆ, ಮೃತ ವ್ಯಕ್ತಿಯ ಜತೆ ಇಬ್ಬರು ಸ್ನೇಹಿತರು ಹೋಗಿದ್ದರು ಎಂದ ಅವರು; ಸಂತೋಷ್ ಮಾತ್ರ ಒಂದು ಕೊಠಡಿಗೆ ಹೋಗಿದ್ದಾರೆ, ಉಳಿದ ಇಬ್ಬರು ಒಂದು ಕೊಠಡಿಗೆ ಏಕೆ ಹೋಗಿದ್ದರು? ಇವರೆಲ್ಲ ಉಡುಪಿಗೆ ಏಕೆ ಹೋಗಿದ್ದರು? ಸರಕಾರವು ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಗಳನ್ನು ನೇಮಿಸಿ ಹಾಕಿ ತನಿಖೆ ನಡೆಸಿದರೆ ಸತ್ಯಾಸತ್ಯತೆ ಹೊರಬರುತ್ತದೆ ಎಂದರು.
ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಕೊಲೆಯಾದ ಸಂದರ್ಭದಲ್ಲಿ ಬಿಜೆಪಿ ದಂಡೇ ಅಲ್ಲಿಗೆ ಹೋಯಿತು. ಅದಕ್ಕೆ ನಾವೇನು ಕಡಿಮೆ ಎಂದು ಸಾವಿನ ರಾಜಕಾರಣ ಮಾಡಲಿಕ್ಕೆ ಕಾಂಗ್ರೆಸ್‌ನ ನಾಯಕರ ದಂಡೇ ಈಗ ಸಂತೋಷ ಅವರ ಮನೆಗೆ ದಾಂಗುಡಿ ಇಟ್ಟಿದೆ. ಸಾವಿನ ಮನೆಯಲ್ಲಿ ರಾಜಕೀಯ ಮಾಡಲು ಹೊರಟಿದ್ದಾರೆ. ಇವತ್ತು ನಾಯಕರೆಲ್ಲ ಕೈಕಟ್ಟಿ ಆ ಸಂತ್ರಸ್ತ ಹೆಣ್ಣುಮಗಳ ಮುಂದೆ ಕುಳಿತ ದೃಶ್ಯಗಳನ್ನು ನೋಡಿದರೆ ರಾಜಕೀಯ ಲಾಭ ಮಾಡಿಕೊಳ್ಳುವ ಉದ್ದೇಶ ಬಿಟ್ಟರೆ ಬೇರೇನೂ ಕಾಣದು ಎಂದು ಕುಮಾರಸ್ವಾಮಿ ಅವರು ಸಂಶಯ ವ್ಯಕ್ತಪಡಿಸಿದರು.
ಈಶ್ವರಪ್ಪರ ಬಗ್ಗೆ ನಾನೇಕೆ ಸಾಪ್ಟ್ ಆಗಲಿ. ನನಗೆ ಯಾವ ರೀತಿಯ ಸಾಫ್ಟ್ ಕಾರ್ನರ್ ಇಲ್ಲ. ಅವರ ಮೇಲೆ ಆರೋಪ ಬಂದಿದೆ. ಮೊದಲು ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದರು.