ಬೆಂಗಳೂರು: ಕೊರೋನಾ ನಿರ್ವಹಣೆ ಹೆಸರಲ್ಲಿ ರಾಜ್ಯಸರ್ಕಾರ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆಸಿದೆ ಎಂದು ಪ್ರದೇಶ ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಹಂಟಿ ಸುದ್ದಿಗೋಷ್ಠಿ ನಡೆಸಿದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಕೇಂದ್ರ ಸರ್ಕಾರ ರಸಗೊಬ್ಬರ ಬೆಲೆಯನ್ನು ಎದ್ವಾತದ್ವಾ ಏರಿಕೆ ಮಾಡಿದೆ. ಯುಗಾದಿ ಸಿಹಿ – ಕಹಿಗಳ ಹಬ್ಬ, ಆದರೆ ಕೇಂದ್ರ ಸರ್ಕಾರ ಜನರಿಗೆ ಬರೀ ಕಹಿಯನ್ನು ನೀಡಿದೆ. ಒಂದು ಚೀಲ ಗೊಬ್ಬರದ ಮೇಲೆ ರೂ. 150 ಏರಿಕೆಯಾಗಿದೆ. ಇದರಿಂದ ಒಂದು ಚೀಲ ಗೊಬ್ಬರದ ಬೆಲೆ ಈಗ ರೂ. 1,350 ಆಗಿದೆ. ದೇಶದ ರೈತರು ವರ್ಷದಲ್ಲಿ 1 ಕೋಟಿ 20 ಲಕ್ಷ ಟನ್ ಗೊಬ್ಬರ ಬಳಕೆ ಮಾಡುತ್ತಾರೆ. ಕೇಂದ್ರ ಸರ್ಕಾರ ರೂ. 3,600 ಕೋಟಿಯನ್ನು ರೈತರಿಂದ ಹೆಚ್ಚುವರಿ ಹಣ ಸುಲಿಗೆ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು 2022 ಕ್ಕೆ ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದಿದ್ದರು, ಅದನ್ನು ಮಾಡುವ ಬದಲು ರೈತರ ರಕ್ತ ಕುಡಿಯಲು ಆರಂಭ ಮಾಡಿದ್ದಾರೆ. ಕೃಷಿಗೆ ಬಳಕೆಯಾಗುವ ಕೀಟನಾಶಕಗಳ ಮೇಲೆ 18%, ಕೃಷಿ ಯಂತ್ರೋಪಕರಣಗಳ ಮೇಲೆ 12%, ರಸಗೊಬ್ಬರದ ಮೇಲೆ 5% ಜಿಎಸ್‌ಟಿ ವಿಧಿಸಲಾಗುತ್ತಿದೆ. ಈ ರೀತಿ ರೈತರಿಂದ ಸುಲಿಗೆ ಮಾಡಿ ಅವರ ಬದುಕನ್ನು ಕಸಿಯಲಾಗುತ್ತಿದೆ ಎಂದು ದೂರಿದರು.
ಇದೇ ವೇಳೆ ಕೊರೋನಾ ನಿರ್ವಹಣೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು. ನನ್ನ ಪ್ರಕಾರ ರಾಜ್ಯ ಸರ್ಕಾರ ಕೊರೊನಾ ನಿರ್ವಹಣೆಗೆ ಖರ್ಚು ಮಾಡಿರುವುದು ರೂ. 8,300 ಕೋಟಿ, ಮುಖ್ಯಮಂತ್ರಿಗಳು ನಾವು ರೂ. 15,000 ಕೋಟಿ ಖರ್ಚು ಮಾಡಿದ್ದೇವೆ ಎನ್ನುತ್ತಿದ್ದಾರೆ. ಸರಿ ಅವರ ಮಾತನ್ನೇ ನಂಬೋಣ, ಕೇರಳ ಎರಡು ವರ್ಷಗಳಲ್ಲಿ ಕೊರೊನಾ ನಿರ್ವಹಣೆಗೆ ರೂ. 40,000 ಕೋಟಿ ಖರ್ಚು ಮಾಡಿದ್ದಾರೆ, ತಮಿಳುನಾಡಿನವರು ರೂ. 30,000 ಕೋಟಿ ಖರ್ಚು ಮಾಡಿದ್ದಾರೆ. ಆ ರಾಜ್ಯಗಳೆಲ್ಲಾ ಹಾಳಾಗಿ ಹೋಗಿವೆಯಾ? ಕೇರಳದ ಬಜೆಟ್ ಗಾತ್ರ ನಮಗಿಂತ ಚಿಕ್ಕದು. ಇವೆಲ್ಲ ಆಧಾರ ರಹಿತ ಹೇಳಿಕೆಗಳು, ಕಳೆದ ವರ್ಷ ರಾಜ್ಯದ ಬಜೆಟ್ 2.42 ಲಕ್ಷ ಕೋಟಿ ರೂಪಾಯಿ, ಈ ಸಾಲಿನ ಬಜೆಟ್ ಗಾತ್ರ ರೂ. 2.65 ಕೋಟಿ. ಇದರಲ್ಲಿ ರೂ. 15,000 ಕೋಟಿ ಹೋದರೆ ಎಷ್ಟು ಉಳಿಯುತ್ತೆ? ಈ ಹಣದಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆ. ಇವರ ಯೋಗ್ಯತೆಗೆ ಒಂದು ಮನೆ ಕಟ್ಟಿಕೊಡೋಕೆ ಆಗಿಲ್ಲ, ರಸ್ತೆ ಗುಂಡಿ ಮುಚ್ಚೋಕೆ ಆಗಿಲ್ಲ. ಈ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಸಿದ್ದರಾಮಯ್ಯ ಅವರು ತರಾಾಟೆಗೆ ತೆಗೆದುಕೊಂಡರು.