ಬೆಂಗಳೂರು: ಕೆಪಿಸಿಸಿ ಪ್ರಚಾರ ಸಮಿತಿ ಸಹ ಅಧ್ಯಕ್ಷರಾಗಿ ಸುಧಾಮ್ ದಾಸ್ ನೇಮಕ ಮಾಡಲಾಗಿದೆ.
ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನಮ್ಮ ಆತ್ಮೀಯ ಮಿತ್ರ ಸುಧಾಮ್ ದಾಸ್ ಅವರು ಇಡಿ ಜಂಟಿ ಅಧಿಕಾರಿಯಾಗಿದ್ದರು. ಅವರು ಸಮಾಜದ ರಕ್ಷಣೆಗೆ ದೊಡ್ಡ ಬಳಗ ಕಟ್ಟಿಕೊಂಡು ಸಮುದಾಯ ರಕ್ಷಣೆ ಮಾಡುತ್ತಿದ್ದರು. ಇವರನ್ನು ಪಕ್ಷದಲ್ಲಿ ಬಳಸಿಕೊಳ್ಳಬೇಕು ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ಸಹ ಅಧ್ಯಕ್ಷರನ್ನಾಗಿ ನೇಮಕ ಮಾಡುತ್ತಿದೆ. ಎಂ.ಬಿ ಪಾಟೀಲ್ ಅವರು ಅಧ್ಯಕ್ಷರಾಗಿದ್ದೂ, ಅವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಹೆಚ್ಚಿನ ಒತ್ತಡ ಹಾಕಬಾರದು ಎಂದು ಸುಧಾಮ್ ದಾಸ್ ಅವರನ್ನು ನೇಮಕ ಮಾಡಲಾಗುತ್ತಿದೆ. ಸುಧಾಮ್ ದಾಸ್ ಅವರಿಗೆ ಆತ್ಮೀಯವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಯುವಕರಿಗೆ ಆದ್ಯತೆ ನೀಡುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಈ ತೀರ್ಮಾನ ಮಾಡಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಪರವಾಗಿ ನಮ್ಮ ಬದ್ಧತೆ ಅಚಲ. ಇಡೀ ರಾಷ್ಟ್ರದಲ್ಲಿ ಕರ್ನಾಟಕದಲ್ಲಿ ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ಹಾಗೂ ಅದಾನ ನೀಡುವ ಕಾನೂನು ತಂದಿರುವುದು. ಬಿಜೆಪಿ ಸರ್ಕಾರ ಮೀಸಲಾತಿ ಹೆಚ್ಚಳ ವಿಚಾರವಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಹೇಳುತ್ತಿದೆ. ಆದರೆ ಸಂಸತ್ತಿನಲ್ಲಿ ಅವರು ತರಲಿಲ್ಲ. ಕೇಂದ್ರ ಸಚಿವರು ನಮ್ಮ ಮುಂದೆ ಈ ವಿಚಾರವಾಗಿ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಆದರೂ ಅವರು ಈ ವಿಚಾರ ಪ್ರಸ್ತಾಪಿಸಿರುವುದೇಕೆ? ನಾವು ಈ ಸಮಾಜಗಳ ಜತೆ ನಿಲ್ಲಬೇಕು ಎಂದು ಅನೇಕ ಕಾರ್ಯಕ್ರಮ ರೂಪಿಸಿದೆ. ಅಲ್ಲದೇ ಈ ಸಮುದಾಯಗಳ ನಾಯಕರನ್ನು ಬೆಳೆಸಲು ಆದ್ಯತೆ ನೀಡುತ್ತಿದ್ದೇವೆ ಎಂದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ತೊಲಗಬೇಕು ಎಂದು ಎಲ್ಲರೂ ಕಾಯುತ್ತಿದ್ದಾರೆ. ಹೀಗಾಗಿ ಎಲ್ಲ ಅಧಿಕಾರಿ ವರ್ಗದವರು, ಸರ್ಕಾರಿ ನೌಕರರಿಗೆ ನಮ್ಮ ಸಾಮಾಜಿಕ ಬದ್ಧತೆ ಗಮನದಲ್ಲಿಟ್ಟುಕೊಂಡು ನಮಗೆ ಬೆಂಬಲ ನೀಡಬೇಕು ಎಂದು ಕೇಳುತ್ತೇನೆ ಎಂದವರು ಹೇಳಿದರು.