ಹುಬ್ಬಳ್ಳಿ : ಉತ್ತರ ಕರ್ನಾಟಕ ಭಾಗದ ಆರೋಗ್ಯ ವ್ಯವಸ್ಥೆಯ ಕೇಂದ್ರದಂತೆ ಕಾರ್ಯನಿರ್ವಹಿಸಬೇಕಿರುವ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ ಕೋವಿಡ್ ವಿಷಯದಲ್ಲಿ ನಿರೀಕ್ಷೆಗೆ ಅನುಗುಣವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಭೇಟಿ ಕೋವಿಡ್ ರೋಗಿಗಳಿಗೆ ನೀಡುತ್ತಿರುವ ಚಿಕಿತ್ಸೆ ಮತ್ತು ಸಂಸ್ಥೆಯ ಕಾರ್ಯ ನಿರ್ವಹಣೆಯನ್ನು ಪರಿಶೀಲಿಸಿದ ಬಳಿಕ ಸಂಸ್ಥೆಯ ಮುಖ್ಯಸ್ಥರು ಹಾಗೂ ನಾನಾ ವಿಭಾಗಗಳ ಮುಖ್ಯಸ್ಥರನ್ನು ಉದ್ದೇಶಿಸಿ ಶನಿವಾರ ಸಚಿವರು ಮಾತನಾಡಿದರು.
ಸಂಸ್ಥೆಯಲ್ಲಿ ಹೆಚ್ಚು ಕಡಿಮೆ ಒಂದು ಸಾವಿರ ಮಂದಿ ವೈದ್ಯರು ಇದ್ದಾರೆ. ೧೦೩೦ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಪ್ರಮಾಣದಲ್ಲಿ ವೈದ್ಯರು ರೋಗಿಗಳ ಅನುಪಾತ ಯಾವ ದೇಶದಲ್ಲೂ ಇಲ್ಲ. ಎಷ್ಟು ಪರಿಣಾಮಕಾರಿಯಾಗಿ ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದೇವೆ ಎಂಬುದನ್ನು ನೀವೆ ಪ್ರಶ್ನೆ ಮಾಡಿಕೊಳ್ಳಬೇಕು, ಇತರೆ ಸಿಬ್ಬಂದಿಯನ್ನು ಲೆಕ್ಕ ಹಾಕಿದರೆ ಒಟ್ಟು ಎರಡು ಸಾವಿರಕ್ಕೂ ಹೆಚ್ಚು ಮಂದಿ ಇದ್ದೀರಿ. ಆದರೆ ನಿರೀಕ್ಷಿತ ಪ್ರಮಾಣದ ಆರೋಗ್ಯ ಸೇವೆ ಏಕೆ ಲಭ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು.
ನ್ಯಾಯ ಸಮ್ಮತ ಬಳಕೆ ಆಗಲಿ
ಆಕ್ಸಿಜನ್ ಮತ್ತು ಸ್ಟಿರಾಯ್ಡ್‌ನ ನ್ಯಾಯ ಸಮ್ಮತ ಬಳಕೆ ಆಗಬೇಕು. ಅದಕ್ಕಾಗಿ ತಜ್ಞರ ಸಮಿತಿ ರಚನೆ ಮಾಡಬೇಕು. ಪ್ರತಿದಿನ ಇವುಗಳ ಆಡಿಟ್ ಮಾಡಬೇಕು. ಕೋವಿಡ್‌ಯೇತರ ರೋಗಿಗಳಿಗೆ ತುರ್ತು ಇದ್ದಲ್ಲಿ ಮಾತ್ರ ಚಿಕಿತ್ಸೆಗೆ ತೆಗೆದುಕೊಳ್ಳಬೇಕು. ಈ ಭಾಗದಲ್ಲಿ ಕೆಮ್ಸ್ ಪ್ರಾದೇಶಿಕ ಆರೋಗ್ಯ ಕೇಂದ್ರ ಆಗಿರುವುದರಿಂದ ಶೇಕಡಾ ೭೫ ರಷ್ಟು ಹಾಸಿಗೆ ಕೋವಿಡ್‌ಗೆ ಬಳಕೆ ಮಾಡಬೇಕು ಎಂದು ಸೂಚನೆ ನೀಡಿದರು.
ಹಿರಿಯ ವೈದ್ಯರು, ತಜ್ಞರು, ಬೇರೆ ಬೇರೆ ವಿಭಾಗಗಳ ಮುಖ್ಯಸ್ಥರು ಕೋವಿಡ್ ವಾರ್ಡುಗಳಿಗೆ ಭೇಟಿ ನೀಡುತ್ತಿಲ್ಲ ಎಂಬ ದೂರುಗಳು ಬಂದಿವೆ. ಅದು ನಿಜವೂ ಇದೆ ಎಂದು ತಿಳಿದುಬಂದಿದೆ. ಕೆಲವರು ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವವರು ಬಂದು ಸಹಿ ಮಾಡಿ ಹೋಗುತ್ತಿರುವುದು ಗಮನಕ್ಕೆ ಬಂದಿದೆ. ಇಂತಹ ಕೆಲವರಿಂದ ಇಡೀ ಸಂಸ್ಥೆಗೆ ಕೆಟ್ಟ ಹೆಸರು ಬರುತ್ತಿದೆ. ಇಂತವರ ಬಗ್ಗೆ ನಿರ್ದೇಶಕರು ತಕ್ಷಣ ಕ್ರಮ ಕೈಗೊಳ್ಳಬೇಕು. ಇವರಿಂದ ಕೆಲಸ ಮಾಡುವ ಇತರರ ಉತ್ಸಾಹ ಕುಗ್ಗುತ್ತದೆ. ಕೆಸಲ ಕದಿಯುತ್ತಿರುವ ಇಂತಹವರು ಎಷ್ಟೇ ದೊಡ್ಡವರಿದ್ದರೂ ಸರಿಯೇ ಮುಲಾಜಿಲ್ಲದೆ, ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಿ ಎಂದು ನಿರ್ದೇಶಕರಿಗೆ ಸೂಚನೆ ನೀಡಿದರು.
ವಿಭಾಗ ಮುಖ್ಯಸ್ಥರು ಹೊಣೆ
ಇನ್ನೊಂದು ತಿಂಗಳು ಕಷ್ಟಪಟ್ಟು ಕೆಲಸ ಮಾಡಿ. ಸಾವುಗಳನ್ನು ತಪ್ಪಿಸಿ. ಪ್ರತಿ ಜೀವಕ್ಕೂ ಬೆಲೆಯಿದೆ. ನಾವ್ಯಾರು ಬಲವಂತದಿಂದ ವೈದ್ಯ ವೃತ್ತಿಗೆ ಬಂದಿಲ್ಲ. ಇಷ್ಟಪಟ್ಟು ಬಂದಿರುವಾಗ ಲೋಪಗಳಿಲ್ಲದಂತೆ ಕೆಲಸ ಮಾಡಬೇಕು. ಆತ್ಮ ವಂಚನೆ ಮಾಡಿಕೊಳ್ಳದೆ ಕೆಲಸ ಮಾಡಿ. ಕೆಲವರು ಮಾಡುವ ತಪ್ಪಿಗೆ ಎಲ್ಲರೂ ತಲೆತಗ್ಗಿಸುವಂತೆ ಆಗಬಾರದು ಎಂದು ಕಿವಿಮಾತು ಹೇಳಿದರು.
ವಿಭಾಗಗಳು ಮುಖ್ಯಸ್ಥರು ತಮ್ಮ ತಮ್ಮ ವಿಭಾಗಗಳಲ್ಲಿ ಶಿಸ್ತು ರೂಢಿಸುವ ನಿಟ್ಟಿನಲ್ಲಿ ಕ್ರಿಯಾಶೀಲರಾಗಿ ಕೆಲಸ ಮಾಡಿ. ಅತ್ಯುತ್ತಮ ಗುಣಮಟ್ಟದ ಉಪಕರಣಗಳನ್ನು ನೀಡಲಾಗಿದೆ. ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಔಷಧಗಳನ್ನು ರವಾನಿಸಲಾಗಿದೆ. ಕೊರತೆ ಇರುವುದನ್ನೂ ಒಂದೆರಡು ದಿನದಲ್ಲಿ ಕೊಡಲಾಗುತ್ತದೆ. ಇವೆಲ್ಲವನ್ನೂ ಪರಿಣಾಮಕಾರಿಯಾಗಿ ಬಳಕೆ ಮಾಡಿ. ಏನೇ ಸಮಸ್ಯೆ ಇದ್ದರೂ ಸ್ಥಳೀಯ ಸಚಿವರು, ಚುನಾಯಿತ ಪ್ರತಿನಿಧಿಗಳ ಸಹಕಾರ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.