ಬೆಂಗಳೂರು: ಕಾರ್ಮಿಕರ ಭವನದಲ್ಲಿ ಕಾರ್ಮಿಕರಿಗೆ ಬೇಕಾದ ಎಲ್ಲ ಸವಲತ್ತುಗಳು ಒಂದೇ ಸೂರಿನಡಿ ಲಭ್ಯವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಹುಬ್ಬಳ್ಳಿಯ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಕಾರ್ಮಿಕ ಇಲಾಖೆ ಅದ್ಭುತವಾಗಿ ಕೆಲಸ ಮಾಡುತ್ತಿದ್ದು, ಕಾರ್ಮಿಕರಿಗೆ ಬೇಕಾದ ಎಲ್ಲ ಸವಲತ್ತುಗಳು ಒಂದೇ ಸೂರಿನಡಿ ದೊರಕಲು ಅನುಕೂಲವಾಗುವಂತೆ ಕಾರ್ಮಿಕ ಭವನವನ್ನು ನಿರ್ಮಿಸಲಾಗಿದೆ. ರಾಜ್ಯದಲ್ಲಿ ಈಗಾಗಲೇ 8 ಕಾರ್ಮಿಕ ಭವನಗಳನ್ನು ನಿರ್ಮಿಸಲಾಗಿದೆ. ಬರುವ ದಿನಗಳಲ್ಲಿ ಉಳಿದೆಲ್ಲ ಜಿಲ್ಲೆಗಳಲ್ಲಿಯೂ ಕಾರ್ಮಿಕ ಭವನವನ್ನು ನಿರ್ಮಿಸಲಾಗುವುದು. ವೈದ್ಯಕೀಯ ಸೌಲಭ್ಯಗಳನ್ನು ಪೂರೈಸುವ ಸಂಚಾರಿ ಚಿಕಿತ್ಸಾ ಘಟಕಕ್ಕೆ ಚಾಲನೆ ನೀಡಲಾಗಿದೆ. ಕಾರ್ಮಿಕ ರಕ್ಷಣೆ ಹಾಗೂ ಕಾರ್ಮಿಕ ಕಲ್ಯಾಣ, ಕೋವಿಡ್ ನ ಸಂದರ್ಭದಲ್ಲಿ ಕಾರ್ಮಿಕರಿಗೆ ಪರಿಹಾರ ನೀಡಲು ಶ್ರಮಿಸುತ್ತಿರುವ ಕಾರ್ಮಿಕ ಸಚಿವರ ಸೇವೆ ಶ್ಲಾಘನೀಯ ಎಂದು ತಿಳಿಸಿದರು.
ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಭಾಜಪದ ಕಾರ್ಯಕಾರಿಣಿ ಸಭೆ ನಡೆದಿದೆ. ಪಕ್ಷ ಬಲಿಷ್ಟವಾಗಿ ಬೆಳೆಯಬೇಕು, ಪಕ್ಷ ಮತ್ತು ಆಡಳಿತದಲ್ಲಿ ಸಂಯೋಜನೆ, ಪಕ್ಷ ಸಂಘಟನೆಯಿಂದ ಚುನಾವಣೆ, ರಾಜಕೀಯ ಬೆಳವಣಿಗೆ ಗಳನ್ನು ಒಗ್ಗಟ್ಟಿನಿಂದ ಎದುರಿಸಬೇಕೆನ್ನುವ ವರಿಷ್ಟರ ನಿರೀಕ್ಷೆಯನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ತಿಳಿಸಿದರು