ಬೆಂಗಳೂರು: ಕಾಂಗ್ರೆಸ್ ಸರ್ಕಾರವಿರುವ ರಾಜ್ಯಗಳಲ್ಲಿ ಪೆಟ್ರೋಲ್ ಡೀಸೆಲ್ ದರ ಇಳಿಕೆ ಮಾಡಿಲ್ಲ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ವ್ಯಂಗ್ಯವಾಡಿದ್ದಾರೆ. ರಾಜ್ಯ ಕೇಂದ್ರ ಸರ್ಕಾರಗಳು ಕಡಿಮೆ ಪ್ರಮಾಣದಲ್ಲಿ ತೈಲ ದರ ಇಳಿಸಿದೆ ಎಂಬ ಕಾಂಗ್ರೆಸ್ ನಾಯಕರ ಟೀಕೆಗೆ ಸುಧಾಕರ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರ ಹಿತಕ್ಕಾಗಿ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಇಳಿಸಿದೆ. ಆರ್ಥಿಕ ಸಚಿವರು ಬಹಳ ಹಿಂದೆಯೇ ಈ ಬಗ್ಗೆ ಹೇಳಿಕೊಂಡಿದ್ದರು.ಕಾಂಗ್ರೆಸ್ ನವರು ಪೆಟ್ರೋಲ್ ಬೆಲೆ ಬಗ್ಗೆ ಬಾಯಿ ಬಡಿದುಕೊಳ್ಳುತ್ತಿದ್ದರು. ಆದರೆ ಬಿಜೆಪಿ ಆಡಳಿತ ಇರುವ ರಾಜ್ಯ ಸರ್ಕಾರಗಳು ಮಾತ್ರ ತೈಲ ತೆರಿಗೆ ಇಳಿಸಿವೆ ಎಂದರು.
ಕಾಂಗ್ರೆಸ್ ಸರ್ಕಾರಗಳು ತಮ್ಮ ರಾಜ್ಯಗಳಲ್ಲಿ ತೆರಿಗೆ ಇಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಆದೇಶವನ್ನೇ ಮಾಡಿಲ್ಲ. ರಾಜಕೀಯ ದುರುದ್ದೇಶಕ್ಕೆ ಕಾಂಗ್ರೆಸ್ ನವರು ರಸ್ತೆಗೆ ಇಳಿಯುತ್ತಾರೆಯೇ ಹೊರತು ಅವರಿಗೆ ಜನರ ಹಿತ ಬೇಕಿಲ್ಲ. ಪೆಟ್ರೋಲ್ ಬೆಲೆ ಇಳಿಕೆಗೂ ಉಪಚುನಾವಣೆಗೂ ಸಂಬಂಧವೇ ಇಲ್ಲ. ಕಾಂಗ್ರೆಸ್ ಗೆ ರಚನಾತ್ಮಕ ಚಿಂತನೆ ಇಲ್ಲ. ರಾಜಕೀಯ ದಿವಾಳಿತನ ಪ್ರದರ್ಶಿಸುತ್ತಿದ್ದಾರೆ ಎಂದು ಸುಧಾಕರ್ ಹೇಳಿದರು.