ಬೆಂಗಳೂರು: ರಾಜ್ಯದ 15 ಜಿಲ್ಲೆಗಳ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯ 4ನೇ ಹಂತದಲ್ಲಿ 1519.43 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಿರುವ ವಿವಿಧ ಕಾಮಗಾರಿಗಳ ಕ್ರಿಯಾ ಯೋಜನೆಗಳಿಗೆ ಪೌರಾಡಳಿತ, ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಎಂ.ಟಿ.ಬಿ.ನಾಗರಾಜು ಅವರ ಅಧ್ಯಕ್ಷತೆಯ ರಾಜ್ಯ ಮಟ್ಟದ ಸಮಿತಿ ಅನುಮೋದನೆ ನೀಡಿದೆ.
ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ-4ನೇ ಹಂತದ ಯೋಜನೆಗಳ 19ನೇ ರಾಜ್ಯ ಮಟ್ಟದ ಸಮಿತಿ ಸಭೆ ವಿಧಾನಸೌಧದಲ್ಲಿ ಇಂದು ಸಚಿವ ಎಂ.ಟಿ.ಬಿ. ನಾಗರಾಜು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ವಿವಿಧ ಜಿಲ್ಲೆಗಳ ನಗರ ಸ್ಥಳೀಯ ಸಂಸ್ಥೆಗಳಲ್ಲಿ 2022-23 ರಿಂದ 2024-25ನೇ ಸಾಲಿನ ಆರ್ಥಿಕ ವರ್ಷದವರೆಗೆ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ ಕಾಮಗಾರಿಗಳನ್ನು ಕೈಗತ್ತಿಕೊಳ್ಳಲಾಗುತ್ತದೆ. ಈ ಕಾಮಗಾರಿಗಳ ಕ್ರಿಯಾ ಯೋಜನೆಗೆ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ
- ಬೆಂಗಳೂರು ಗ್ರಾಮಾಂತರ ಜಿಲ್ಲೆ: 80.34 ಕೋಟಿ ರೂ.,
- ಮಂಡ್ಯ ಜಿಲ್ಲೆ: 89.25 ಕೋಟಿ ರೂ.,
- ಕೋಲಾರ ಜಿಲ್ಲೆ: 123.25ಕೋಟಿ ರೂ.,
- ಚಿಕ್ಕಬಳ್ಳಾಪುರ ಜಿಲ್ಲೆ (ಚಿಕ್ಕಬಳ್ಳಾಪುರ ನಗರಸಭೆ ಹೊರತುಪಡಿಸಿ): 84.82 ಕೋಟಿ ರೂ,
- ದಕ್ಷಿಣ ಕನ್ನಡ ಜಿಲ್ಲೆ (ಉಳ್ಳಾಲ ನಗರಸಭೆ, ಸೋಮೇಶ್ವರ ಮತ್ತು ಕೋಟೆಕಾರು ಪಟ್ಟಣ ಪಂಚಾಯಿತಿ ಹೊರತುಪಡಿಸಿ): 72.25 ಕೋಟಿ ರೂ,
- ಧಾರವಾಡ ಜಿಲ್ಲೆ: 29.75 ಕೋಟಿ ರೂ,
- ಗದಗ ಜಿಲ್ಲೆ ( ಗದಗ-ಬೆಟಗೇರಿ ನಗರಸಭೆ ಹೊರತುಪಡಿಸಿ): 55.25 ಕೋಟಿ ರೂ,
- ಕೊಪ್ಪಳ: 106.25 ಕೋಟಿ ರೂ,
- ಹಾವೇರಿ ಜಿಲ್ಲೆ (ಶಿಗ್ಗಾಂವ, ಬಂಕಾಪುರ, ಸವಣೂರು ಪುರಸಭೆ ಹೊರತುಪಡಿಸಿ): 97.75 ಕೋಟಿ ರೂ,
- ರಾಯಚೂರು ಜಿಲ್ಲೆ (ಮಾನ್ವಿ, ಜಾಲಹಳ್ಳಿ ಪುರಸಭೆ ಮತ್ತು ಕವಿತಾಳ ಪಟ್ಟಣ ಪಂಚಾತಿಯಿ ಹೊರತುಪಡಿಸಿ): 110.50 ಕೋಟಿ ರೂ,
- ಯಾದಗಿರಿ ಜಿಲ್ಲೆ: 114.75 ಕೋಟಿ ರೂ,
- ಬೀದರ್ ಜಿಲ್ಲೆ: 97.75 ಕೋಟಿ ರೂ,
- ಶಿವಮೊಗ್ಗ ಜಿಲ್ಲೆ: 106.25 ಕೋಟಿ ರೂ,
- ಬಾಗಲಕೋಟೆ ಜಿಲ್ಲೆ: 208.25 ಕೋಟಿ ರೂ,
- ಉತ್ತರ ಕನ್ನಡ ಜಿಲ್ಲೆ: 143.02 ಕೋಟಿ ರೂ.
ರಾಜ್ಯದ 302 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ -4ನೇ ಹಂತದ ಯೋಜನೆಯಡಿ 3885.00ಕೋಟಿ ರೂ ಮೊತ್ತದ ಕ್ರಿಯಾ ಯೋಜನೆಗೆ ರಾಜ್ಯ ಸಚಿವ ಸಂಪುಟ ಕಳೆದ ಜನವರಿಯಲ್ಲಿ ಅನುಮೋದನೆ ನೀಡಿತ್ತು. ಅದಕ್ಕೆ ಪೂರಕವಾಗಿ ಈ ಬಾರಿಯ 15 ಜಿಲ್ಲೆಗಳು ಸೇರಿದಂತೆ ಈವರೆಗೆ 25 ಜಿಲ್ಲೆಗಳ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯ 2367.57 ಕೋಟಿ ರೂಪಾಯಿಗಳ ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡಿದಂತಾಗಿದೆ.
ಸಭೆಯಲ್ಲಿ ನಗರಾಭಿವೃದ್ಧಿ ಇಲಾಖಾ ಕಾರ್ಯದರ್ಶಿ ಡಾ. ಅಜಯ್ ನಾಗಭೂಷಣ್, ಪೌರಾಡಳಿತ ಇಲಾಖೆ ನಿರ್ದೇಶಕರಾದ ಶ್ರೀಮತಿ ಅರ್ಚನಾ, ಮುಖ್ಯ ಎಂಜಿನಿಯರ್ ಸತ್ಯನಾರಾಯಣ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.