ಕೆಆರ್‌ಐಡಿಎಲ್ ಕಾಮಗಾರಿ ಬಗ್ಗೆ ಮಾಧುಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದರು. ಶೆಟ್ಟರ್ ಕೂಡಾ ರಣಕಹಳೆ ಮೊಳಗಿಸಿದ್ದರು. ಇದೀಗ ಹೊಸ ಪ್ರಕ್ರಿಯೆಯಿಂದಾಗಿ ಈ ನಾಯಕರೇ ಗಲಿಬಿಲಿಗೊಂಡಂತಿದೆ..
ಬೆಂಗಳೂರು: ಕಾಂಗ್ರೆಸ್ ನೇತೃತ್ವದಲ್ಲಿ ಕಳೆದ ಆರು ದಶಕಗಳಲ್ಲಿ ದೇಶವನ್ನು ಕೊಳ್ಳೆಹೊಡೆಯಲಾಗಿದೆ ಎಂದು ಆರೋಪಿಸುತ್ತಾ, ಭ್ರಷ್ಟಾಚಾರ ಮುಕ್ತದ ಮಂತ್ರ ಪಠಿಸುತ್ತಾ ಕೇಂದ್ರ ರಾಜ್ಯಗಳಲ್ಲಿ ಬಿಜೆಪಿ ಸರ್ಕಾಗಳು ಅಸ್ತಿತ್ವಕ್ಕೆ ಬಂದಿದ್ದು ಕೆಆರ್‌ಐಡಿಎಲ್ ವಿಚಾರದಲ್ಲಿ ಈ ಮಂತ್ರವನ್ನು ಬಿಜೆಪಿ ಮರೆತಿದೆಯೇ ಎಂಬ ಪ್ರಶ್ನೆ ಎದುರಾಗಿದೆ.
ಕರ್ನಾಟಕ ಪಾರದರ್ಶಕ ಕಾಯ್ದೆಯ ಆಶಯಗಳನ್ನೇ ಕೆಆರ್‌ಐಡಿಎಲ್ ಮೂಲಕ ಗಾಳಿಗೆ ತೂರಲಾಗುತ್ತಿದೆ. ಹೀಗಿರುವಾಗ ಕೆಟಿಪಿಪಿ ಅಧಿನಿಯಮಕ್ಕೆ ತಿದ್ದುಪಡಿ ತರುವುದಾಗಲೀ ಅಥವಾ 4(ಜಿ)ಗೆ ಪರ್ಯಾಯವಾಗಿ ಬೇರೊಂದು ನಿಯಮ ರೂಪಿಸುವ ಪ್ರಯತ್ನ ಸರಿಯೇ ಎಂಬ ಪ್ರಶ್ನೆಯೂ ಇದೀಗ ಕೇಳಿಬರುತ್ತಿದೆ.
ಪ್ರಸ್ತುತ ಕೆಆರ್‌ಐಡಿಎಲ್‌ಗೆ ಕಾಯಕಲ್ಪ ನೀಡುವ ಸಂಬಂಧ ನಿಯಮಾವಳಿಗಳಿಗೆ ತಿದ್ದುಪಡಿ ತರುವ ಪ್ರಯತ್ನ ಸಾಗಿದೆ. ವಿಧಾನಮಂಡಲದಲ್ಲಿ ಇದಕ್ಕೆ ಅನುಮೋದನೆ ತರಬೇಕಿದ್ದು ಈ ಪ್ರಕ್ರಿಯೆ ಸಚಿವಾರಾದ ಮಾಧುಸ್ವಾಮಿ ಹಾಗೂ ಜಗದೀಶ್ ಶೆಟ್ಟರ್ ಅವರಲ್ಲಿ ಗಲಿಬಿಲಿ ಉಂಟು ಮಾಡಿದೆ.
ಈ ಹಿಂದೆ ಇದೇ ವಿಧಾನಸಭಾ ಕಲಾಪದಲ್ಲಿ ಕೆಆರ್‌ಐಡಿಎಲ್ ಸಂಸ್ಥೆಯ ಕರ್ಮಕಾಂಡಗಳನ್ನು ಪ್ರಸ್ತಾಪಿಸಿದ್ದ ಮಾಧುಸ್ವಾಮಿಯವರು, ಆ ನಿಗಮಕ್ಕೆ ಕೋಟ್ಯಾಂತರ ರೂಪಾಯಿಗಳ ಕಾಮಗಾರಿಗಳನ್ನು ವಹಿಸುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. 4(ಜಿ) ಅಪಬಳಕೆಯಾಗುತ್ತಿರುವ ಬಗ್ಗೆಯೂ, ಕೆಆರ್‌ಐಡಿಎಲ್‌ನ ಬದ್ದತೆ ಬಗ್ಗೆಯೂ ಪ್ರಶ್ನಿಸಿದ್ದರು. ಶೆಟ್ಟರ್ ಕೂಡಾ ಇದೇ ರೀತಿಯ ಅಕ್ರಮಗಳ ವಿರುದ್ದ ಸುದ್ದಿಗೋಷ್ಠಿ ನಡೆಸಿ ರಣಕಹಳೆ ಮೊಳಗಿಸಿದ್ದರು. ಇದೀಗ ಈ ಶಾಸಕರು ಕೆಆರ್‌ಐಡಿಎಲ್‌ಗೆ ಅನುಕೂಲವಾಗುವ ಅಕ್ರಮ ಹಾದಿಯನ್ನು ಒಪ್ಪಿಕೊಳ್ಳುವರೇ ಎಂಬುದು ‘ಮೋದಿ’ ಅಭಿಮಾನಿಗಳ ಕುತೂಹಲ.
ಕೆಆರ್‌ಐಡಿಎಲ್‌ಗೆ ಅರ್ಹತೆ ಇದೆಯೇ?
ಕಾಮಗಾರಿಗಳಿಗೆ ಬಿಡ್ ಮಾಡಲು ಕೆಆರ್‌ಐಡಿಎಲ್‌ಗೆ ಅರ್ಹತೆ ಇಲ್ಲ ಎಂಬುದು ಸ್ವತಃ ಅಧಿಕಾರಿಗಳದ್ದೇ ಮಾತು. ಈ ನಿಗಮದಲ್ಲಿ ಕಾಮಗಾರಿಗೆ ಅಗತ್ಯವಿರುವ ಸೂಕ್ತ ಸಲಕರಣೆಗಳಿಲ್ಲ. ತಜ್ಞ, ಪರಿಣಿತರ ತಂಡವೂ ಇಲ್ಲ. ಬಹುತೇಕ ತಜ್ಞರನ್ನು ಹೊತಗುತ್ತಿಗೆ ಮೂಲಕ ಈ ನಿಗಮ ನಿಯೋಜಿಸುತ್ತಿರುವುದು. ,
ಪ್ರತೀ ವರ್ಷ ನೂರಾರು ಕೋಟಿ ರೂಪಾಯಿಗಳನ್ನು ಈ ನಿಗಮಕ್ಕೆ ಕಮಿಷನ್ ಮೂಲಕ ನೀಡಿ ವ್ಯರ್ಥ ಮಾಡಲಾಗುತ್ತಿದೆ ಎಂಬ ಆಕ್ರೋಶವೂ ಮಾಧುಸ್ವಾಮಿ ಸಹಿತ ಪ್ರಮುಖರದ್ದು.
ಹೀಗಿರುವಾಗ ಸಿಎಂ ಆಪ್ತರಿಗೆ ಕೆಆರ್‌ಐಡಿಎಲ್‌ಗೆ ಅನುಕೂಲ ಮಾಡಿಕೊಡುವ ಆಸಕ್ತಿ ಏಕೆ ಎಂಬುದು ಮೋದಿ ಭಕ್ತರ ಪ್ರಶ್ನೆ. ಈ ಅಭಿಪ್ರಾಯದ ಹಿನ್ನೆಲೆಯಲ್ಲೇ ನಮೋ ಸಮಾಜ್ ಮುಖಂಡ ಅನಿಲ್ ಕುಮಾರ್ ಜಿ.ಆರ್.ಅವರು ಎಲ್ಲಾ ಶಾಸಕರಿಗೂ ಪತ್ರ ಬರೆದು ಪಾರದರ್ಶಕ ಕಾಯ್ದೆಯ ಉಳಿಗಾಗಿ ಬೆಂಬಲಿಸಿ ಎಂದು ಕೋರಿದ್ದಾರೆ. ಈ ಪತ್ರ ಪ್ರಧಾನಿ ಕಚೇರಿಯನ್ನೂ ತಲುಪಿದೆ.
ಒಂದೊಮ್ಮೆ ಕೆಟಿಪಿಪಿ ಕಾಯ್ದೆಗೆ ತಿದ್ದುಪಡಿಯಾದಲ್ಲಿ ಅಥವಾ ಕೆಆರ್‌ಐಡಿಎಲ್‌ಗೆ ಅನುಕೂಲವಾಗುವ ವಿಚಾರದಲ್ಲಿ ಜನಹಿತ ಮರೆತು ನಡೆದುಕೊಂಡರೆ ಸಿಎಂ ವಿರುದ್ಧ ಮೋದಿಗೆ ದೂರು ನೀಡುವುದಾಗಿ ಅನಿಲ್ ಕುಮಾರ್ ತಿಳಿಸಿದ್ದಾರೆ.