ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಮರ್ಥ ಪೊಲೀಸರಿಗೆ ಪದಕಗಳನ್ನು ನೀಡಿ ಗೌರವಿಸುವುದು ರಾಷ್ಟ್ರ ಸೇವಾ ಕೈಂಕರ್ಯ. ಈ ಬಾರಿಯೂ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಕೆಎಸ್‌ಪಿಎಸ್ ಅಧಿಕಾರಿ ಪರಮೇಶ್ವರ್ ಹೆಗಡೆ ಸಹಿತ ನಾಲ್ಚರಿಗೆ ರಾಷ್ಟ್ರೀಯ ಪದಕ ಸಿಕ್ಕಿದೆ.
ಅತ್ಯುತ್ತಮ ತನಿಖೆಗಾಗಿ ನೀಡುವ ಕೇಂದ್ರ ಗೃಹ ಸಚಿವರ ಪದಕಕ್ಕೆ ಮಂಗಳೂರು ನಗರ ಸಹಾಯಕ ಪೊಲೀಸ್ ಆಯುಕ್ತ ಪರಮೇಶ್ವರ್ ಅನಂತ್ ಹೆಗಡೆ ಅವರಿಗೆ ಕೇಂದ್ರ ಗೃಹ ಸಚಿವರ ಪದಕ ಸಿಕ್ಕಿದ್ದು ಇವರಿಗೆ ಅಭಿನಂನೆಗಳ ಮಹಾಪೂರವೇ ಹರಿದು ಬಂದಿದೆ.
ಯಾರಿವರು ಪಿ.ಎ.ಹೆಗಡೆ..?

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಡಕ್ ಅಧಿಕಾರಿ ಎಂಬ ಖ್ಯಾತಿಗೊಳಗಾಗಿರುವ ಪರಮೇಶ್ವರ್ ಹೆಗಡೆ ಅವರು ಪಿ.ಎ.ಹೆಗಡೆ ಎಂದೇ ಗುರುತಾಗಿದ್ದಾರೆ. ಉತ್ತರ ಕನ್ನಡ ಮೂಲದ ಪಿ.ಎ.ಹೆಗಡೆ ಅವರು ಸಬ್ ಇನ್‌ಸ್ಪೆಕ್ಟರ್ ಆಗಿ ಪೊಲೀಸ್ ಇಲಾಖೆ ಸೇರಿದಾಗಿನಿಂದಲೇ ಅನೇಕಾನೇಕ ಸುದ್ದಿಗಳಿಗೆ ವಿಷಯವಾಗುತ್ತಿದ್ದರು. ನಿಷ್ಟೂರ ಕಾರ್ಯಾಚರಣೆಗೆ ಹೆಸರಾಗುತ್ತಿರುವ ಪಿ.ಎ.ಹೆಗಡೆ, ರಾಜಕೀಯ ನಾಯಕರನ್ನೂ ಎದುರು ಹಾಕಿಕೊಂಡೇ ಕರ್ತವ್ಯ ನಿರ್ವಹಿಸಿದವರು. ಪಿಎಸ್‌ಐ ಆಗಿದ್ದಾಗ ಇದೇ ಕಾರಣಕ್ಕಾಗಿ ಅಮಾನತಾದರೂ ಕರ್ತವ್ಯ ನಿಷ್ಠೆ ಹಾಗೂ ಕರ್ತವ್ಯ ಪ್ರಜ್ಞೆ ವಿಚಾರದಲ್ಲಿ ಹಿರಿಯ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾದವರು.
ಭೂಗತ ಪಾತಕಿಗಳ ಕಾರಸ್ಥಾನ ಎಂದೇ ಹೇಳಲಾಗುತ್ತಿರುವ ಮಂಗಳೂರಿನಲ್ಲಿ ದಶಕದ ಹಿಂದೆ ಪೊಲೀಸ್ ಪಡೆ ಮೇಲೆ ಪಾತಕಿಗಳು ದಾಳಿಮಾಡಿದಾಗ ಇನ್‌ಸ್ಪೆಕ್ಟರ್ ಆಗಿದ್ದ ಪಿ.ಎ.ಹೆಗಡೆ ಅವರು ತಮ್ಮ ರಿವಾಲ್ವರ್‌ಗೆ ಕೆಲಸ ಕೊಟ್ಟು ಕುಖ್ಯಾತ ರೌಡಿಯನ್ನೇ ಸಾಯಿಸಿ ಇಡೀ ರಾಜ್ಯದಲ್ಲಿ ಸುದ್ದಿಯಾಗಿದ್ದರು. ಸಾರ್ವಜನಿಕ ವಲಯದಲ್ಲೂ ಶಹಬ್ಬಾಸ್‌ಗಿರಿ ಗಿಟ್ಟಿಸಿಕೊಂಡಿದ್ದರು.
ಗಣಿ ನಾಡು ಬಳ್ಳಾರಿ ಜಿಲ್ಲಾ ವ್ಯಾಪ್ತಿಯ ಸಂಡೂರು ಠಾಣಾಧಿಕಾರಿಯಾಗಿದ್ದಾಗ ಗಣಿ ಮಾಫಿಯಾವನ್ನೇ ಎದುರು ಹಾಕಿ, ಮಾಡಿದ ದಿಟ್ಟತನದ ಸೇವೆ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೈಲುಗಲ್ಲಾಗಿದೆ.
ಬೆಂಗಳೂರು ಈಶಾನ್ಯ ವಲಯದಲ್ಲಿ, ಪೊಲೀಸ್ ಇಲಾಖೆ ಜೊತೆ ಸಾರ್ವಜನಿಕರ ಸಹಭಾಗಿತ್ವ ಬೇಕೆಂಬ ಬಗ್ಗೆ ಐಪಿಎಸ್ ಅಧಿಕಾರಿ ರವಿಕಾಂತೇಗೌಡರ ಪರಿಕಲ್ಪನೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿ ಹೆಗ್ಗಳಿಕೆಗೆ ಪಾತ್ರರಾದ ಅಧಿಕಾರಿ ಇವರು. ಸಿಐಡಿಯಲ್ಲಿದ್ದಾಗ ಎಕನಾಮಿಕ್ ಅಫೆನ್ಸ್ ಪ್ರಕರಣಗಳ ತನಿಖೆಯನ್ನೂ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದ ವೈಖರಿಗೂ ಇವರು ಅಧಿಕಾರಿಗಳಿಂದ ಶಹಬ್ಬಾಸ್‌ಗಿರಿ ಗಿಟ್ಟಿಸಿಕೊಂಡಿದ್ದರು. ಇದೀಗ ಈ ಅಧಿಕಾರಿ ಉತ್ತಮ ತನಿಖೆಗಾಗಿ ಕೇಂದ್ರ ಗೃಹ ಸಚಿವರ ಮೆಡಲ್ ಪಡೆಯುವ ಮೂಲಕ ಪೊಲೀಸ್ ಇಲಾಖೆಯಲ್ಲಿ ಮೋಡೆಲ್ ಅನ್ನಿಸಿಕೊಂಡಿದ್ದಾರೆ.