ಉಡುಪಿ: ರಾಜ್ಯ ಮತ್ತು ರಾಷ್ಟ್ರದ ಚುನಾವಣೆಯಲ್ಲಿ ಗೆಲುವು ಸಾಧಿಸಲು ಬಿಜೆಪಿ ಕಾರ್ಯಕರ್ತರು ಶ್ರಮಿಸಬೇಕು. ಈ ಮೂಲಕ ಮೋದಿಜಿಗೆ ಗೌರವ ನೀಡಬೇಕು ಎಂದು ಮಾಜಿ ಸಿಎಂ ಯಡಿಯೂರಪ್ಪ ಅವರು, ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಉಡುಪಿ ಜಿಲ್ಲೆ ಕಾಪು ಬಳಿ ಬಿಜೆಪಿ ಜನಸಂಕಲ್ಪ ಕಾರ್ಯಕ್ರಮದಲ್ಲಿ ಮಾತನಾಡಿದ ಪಕ್ಷದ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯರೂ ಆದ ಬಿ.ಎಸ್.ಯಡಿಯೂರಪ್ಪ, ಪ್ರಧಾನಿ ನರೇಂದ್ರ ಮೋದಿಜಿ ಪ್ರಧಾನಿಯಾದ ಮೇಲೆ 8 ವರ್ಷಗಳಲ್ಲಿ ಒಂದು ದಿನವೂ ವಿಶ್ರಾಂತಿ ಪಡೆದಿಲ್ಲ. ಇಡೀ ಜಗತ್ತೇ ಮೆಚ್ಚುವ ಮೋದಿಜಿ ಅವರು ಈ ದೇಶದ ರಥವನ್ನು ಮುನ್ನಡೆಸುತ್ತಿದ್ದಾರೆ. ರಾಜ್ಯ ಮತ್ತು ರಾಷ್ಟ್ರದ ಚುನಾವಣೆಯಲ್ಲಿ ಗೆಲುವು ಸಾಧಿಸಲು ಬಿಜೆಪಿ ಕಾರ್ಯಕರ್ತರು ಶ್ರಮಿಸಬೇಕು ಎಂದು ಮನವಿ ಮಾಡಿದರು.
Live : ಜನಸಂಕಲ್ಪ ಯಾತ್ರೆ – ಕಾಪು, ಉಡುಪಿ ಜಿಲ್ಲೆ #JanaSankalpaYatre https://t.co/nNuppeW3pj
— BJP Karnataka (@BJP4Karnataka) November 7, 2022
ಕಾಂಗ್ರೆಸ್ ಗೆಲುವಿನ ಭ್ರಮೆ ಹುಸಿಯಾಗಲಿದೆ. ಬಿಜೆಪಿ ಮತ್ತೆ ಅಧಿಕಾರ ಪಡೆಯಲಿದೆ. ಬಿಜೆಪಿ 140ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆದ್ದು ಮೋದಿಜಿ ಅವರಿಗೆ ಗೌರವ ತಂದು ಕೊಡಲಿದೆ ಎಂದು ವಿಶ್ವಾಸದಿಂದ ನುಡಿದರು. ಇದೇ 11ರಂದು ಮೋದಿಜಿ ಅವರ ಭೇಟಿ ವೇಳೆ ಮೂರ್ನಾಲ್ಕು ಲಕ್ಷ ಜನರು ಸೇರಲಿದ್ದಾರೆ ಎಂದರು.
ನರೇಂದ್ರ ಮೋದಿ ಮುಂದೆ ರಾಹುಲ್ ಗಾಂಧಿ ಬಚ್ಚಾ ಇದ್ದ ಹಾಗೆ ಎಂಬುದು ನನ್ನ ಪ್ರಾಮಾಣಿಕ ಅನಿಸಿಕೆ. ರಾಹುಲ್ ಹೋದಲ್ಲೆಲ್ಲ ಕಾಂಗ್ರೆಸ್ ಸೋಲಿಗೆ ಕೊಳ್ಳೇಗಾಲದ ಚುನಾವಣಾ ಫಲಿತಾಂಶವೇ ಉದಾಹರಣೆ ಎಂದು ತಿಳಿಸಿದರು. ಮಂಗಳೂರು- ಉಡುಪಿಯ ಜನರು ಶಿಸ್ತಿನ ಜನರಾಗಿದ್ದು, ಬಹಳ ಕಾಲದಿಂದ ಬಿಜೆಪಿಯನ್ನು ಬೆಂಬಲಿಸುತ್ತ ಬಂದವರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯದಲ್ಲಿ 10 ಲಕ್ಷ ಕೋಟಿಯಷ್ಟು ಹೂಡಿಕೆ ಆಗಲಿದೆ ಎಂದು ಸಂತಸ ವ್ಯಕ್ತಪಡಿಸಿದರು. ಕರಾವಳಿ ಭಾಗದ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ಜಾರಿ ಮಾಡಿದ್ದರ ಕುರಿತು ಅವರು ವಿವರ ನೀಡಿದರು. ಬಿಜೆಪಿ ಬೆಂಬಲಿಸುವಂತೆ ಅವರು ಮನವಿ ಮಾಡಿದರು.






















































