ಉಡುಪಿ : ಕುಂದಾಪುರ ತಾಲೂಕಿನ ಯಡಮೊಗೆಯಲ್ಲಿ ಇತ್ತೀಚಿಗೆ ಕೊಲೆಯಾದ ಬಿಜೆಪಿ ಕಾರ್ಯಕರ್ತ ಯಡಮೊಗೆ ಉದಯ್ ಗಾಣಿಗ ಮನೆಗೆ ಡಿಕೆಶಿ ಭೇಟಿ ನೀಡಿದರು. ಮನೆಯವರಿಗೆ ಸಾಂತ್ವನ ಹೇಳಿದ ಡಿಕೆಶಿ, ಒಂದು ಲಕ್ಷದ ಇಪ್ಪತೈದು ಸಾವಿರ ಮೊತ್ತದ ಚೆಕ್ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಉದಯ್ ಗಾಣಿಗ ಒಂದೇ ಕೊಲೆಯಲ್ಲ, ಹಲವು ಕೊಲೆಗಳು ಆಗಿವೆ. ಎಲ್ಲ ಕೊಲೆಗಳನ್ನು ಮುಚ್ಚಿ ಹಾಕುವ ದೊಡ್ಡ ಪ್ರಯತ್ನ ನಡೆಯುತ್ತಿದೆ. ಬೇರೆ ಕೊಲೆಗಳು ನಡೆದಾಗ ಸಿಬಿಐಗೆ ವಹಿಸಿದ್ದಾರೆ, ಇದನ್ನು ಕೂಡ ಸಿಬಿಐಗೆ ವಹಿಸಿ, ಸಾವಿಗೆ ನ್ಯಾಯ ದೊರಕಿಸಿ ಕೊಡಿ ಎಂದು ಸರ್ಕಾರವನ್ನು ಆಗ್ರಹಿಸಿದರು.
ಉದಯ್ ಗಾಣಿಗ ಬಿಜೆಪಿ ಪಕ್ಷಕ್ಕೆ, ಬೆಳಗ್ಗೆ ಸಂಜೆ ದುಡಿದಿದ್ದಾನೆ ಅಂತ ಹೆಣ್ಣು ಮಗಳು ಹೇಳುತ್ತಾಳೆ. ಕೊಲೆ ಮಾಡಿದ್ದು, ಬಿಜೆಪಿಯ ಪಂಚಾಯತ್ ಅಧ್ಯಕ್ಷನೇ ಅಂತ ಹೇಳಿದ್ದಾಳೆ. ನ್ಯಾಯ ಒದಗಿಸಿ, ಕುಟುಂಬಕ್ಕೆ ಸೂಕ್ತ ಒದಗಿಸಬೇಕು. ಈ ಬಗ್ಗೆ ವಿಧಾನಸಭೆಯಲ್ಲಿ ಹೋರಾಟ ಮಾಡುತ್ತೇವೆ ಎಂದು ಡಿಕೆಶಿ ಹೇಳಿದರು.
ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಮಾಜಿ ಸಚಿವರಾದ ವಿಜಯಕುಮಾರ್ ಸೊರಕೆ, ಕಾಂಗ್ರೇಸ್ ಜಿಲ್ಲಾಧ್ಯಕ್ಷ ಅಶೋಕ್ ಕೊಡವೂರು, ಕಾಂಗ್ರೇಸ್ ಜಿಲ್ಲಾ ಮುಖಂಡರಾದ ಪಿ. ಕಿಶನ್ ಹೆಗ್ಡೆ , ತಗ್ಗರ್ಸೆ ಗಾಣಿಗ ಸೇವಾ ಸಂಘದ ಕಾರ್ಯದರ್ಶಿ ಎಸ್.ವೀರಭದ್ರ ಗಾಣಿಗ ಹಾಲಂಬೇರು, ಮತ್ತು ವಿಜಯ ಗಾಣಿಗ ಹಾಲಂಬೇರು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು