ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಲೋಕಸಭಾ ಅಖಾಡ ರಂಗೇರಿದೆ. ಬೆಂಗಳೂರು ನಗರದಲ್ಲಿ ಮೂರು ಲೋಕಸಭಾ ಕ್ಷೇತ್ರಗಳಿದ್ದು ಕಳೆದ ಹಲವು ದಶಕಗಳಿಂದ ಈ ಕ್ಷೇತ್ರಗಳನ್ನು ಬಿಜೆಪಿ ಸಂಸದರೇ ಪ್ರತಿನಿಧಿಸುತ್ತಿದ್ದಾರೆ. ಆದರೆ ಈ ಬಾರಿಯಾ ಅಖಾಡ ಈ ಹಿಂದಿನಂತಿಲ್ಲ. ಅದರಲ್ಲೂ ವಿಧಾನಸೌಧ ಪ್ರದೇಶವನ್ನೂ ಒಳಗೊಂಡ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು, ಕಾಂಗ್ರೆಸ್ ಗೆಲುವು ಸಾಧ್ಯ ಎಂಬ ವಿಶ್ವಾಸದಲ್ಲಿದ್ದಾರೆ ಕೈ ನಾಯಕರು.
ಏಪ್ರಿಲ್ 26ರಂದು ಲೋಕಸಭಾ ಚುನಾವಣೆಯ ಮತದಾನ ನಡೆಯಲಿದ್ದು, ಪ್ರಚಾರ ಬಿರುಸುಗೊಂಡಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿನ ಬಾವುಟ ಹಾರಿಸಲು ಶತಪ್ರಯತ್ನ ನಡೆಸುತ್ತಿದೆ. ಬಿಜೆಪಿಯ ಪಿ.ಸಿ.ಮೋಹನ್ ವಿರುದ್ಧ ಕಾಂಗ್ರೆಸ್ ಪಕ್ಷ ಮನ್ಸೂರ್ ಆಲಿಖಾನ್ ಅವರನ್ನು ಕಣಕ್ಕಿಳಿಸಿದ್ದು, ರಾಜ್ಯದ ಆಡಳಿತಾರೂಢ ಪಕ್ಷವು ಭರ್ಜರಿ ಪ್ರಚಾರದಲ್ಲಿ ತೊಡಗಿದೆ.
ಅಲ್ಪ ಸಂಖ್ಯಾತರ ಪ್ರಾಬಲ್ಯವಿರುವ ಬೆಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷರೂ ಆದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎ.ಬಾವಾ ಸೇರಿದಂತೆ ಅನೇಕ ನಾಯಕರು ನಿರಂತರ ಪ್ರಚಾರದಲ್ಲಿ ತೊಡಗಿದ್ದಾರೆ. ಶಿವಾಜಿನಗರ, ವಿವೇಕ್ ನಗರ, ಶಾಂತಿನಗರ ಸಹಿತ ವಿವಿಧ ಪ್ರದೇಶಗಳಲ್ಲಿ ಬುಧವಾರ ರೋಡ್ ಶೋ ಹಾಗೂ ಮನೆಮನೆ ಪ್ರಚಾರದಲ್ಲಿ ಭಾಗಿಯಾದ ಜಿ.ಎ.ಬಾವಾ, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು. ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಸಮರಸಜ್ಜಿನಲ್ಲಿ ಕೆಲಸ ಮಾಡಬೇಕೆಂದು ಅವರು ಕಾರ್ಯಕರ್ತರಿಗೆ ಮಾರ್ಗದರ್ಶನ ಮಾಡಿದರು. ಇದೇ ವೇಳೆ, ಬಿಜೆಪಿಯ ವೈಫಲ್ಯ ಹಾಗೂ ನುಡಿದಂತೆ ನಡೆದಿರುವ ಕಾಂಗ್ರೆಸ್ ಸರ್ಕಾರದ ಬಗ್ಗೆ ಜನರಿಗೆ ಮನವರಿಕೆ ಮಾಡಿದ ಪ್ರಚಾರ ವೈಖರಿಯೂ ಗಮನಸೆಳೆಯಿತು.
ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲೂ ಜಿ.ಎ.ಬಾವಾ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಆಲಿ ಖಾನ್ ಪರವಾಗಿ ಪ್ರಚಾರ ನಡೆಸಿದರು. ವಿವಿಧೆಡೆ ರಾಮನವಮಿ ಕೈಕರ್ಯಗಳಲ್ಲಿ ಭಾಗಿಯಾಗಿ ಗಮನಸೆಳೆದರು. ಕಾಂಗ್ರೆಸ್ ನಾಯಕ ಡಿ.ಸಿ.ರಮೇಶ್ ಸೇರಿದಂತೆ ಪ್ರಮುಖ ಜೊತೆ ಚಾಮರಾಜಪೇಟೆ, ಆಜಾದ್ ನಗರ, ಜೆ.ಜೆ.ನಗರ ಸೇರಿದಂತೆ ಹಲವು ಬಡಾವಣೆಗಳಲ್ಲಿ ಪ್ರಚಾರ ಕೈಗೊಂಡು ಕಾಂಗ್ರೆಸ್ ಪರ ಮತ ಯಾಚಿಸಿದರು. ಈ ಹಿಂದೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಿ.ಎ.ಬಾವಾ ಅವರು ಈ ಕ್ಷೇತ್ರದಲ್ಲಿ ತಮ್ಮದೇ ಆದ ಬೆಂಬಲಿಗ ಪಡೆಯನ್ನು ಹೊಂದಿದ್ದು ಚಾಮರಾಜಪೇಟೆಯಲ್ಲಿ ತಮ್ಮದೇ ಆದ ಹಿಡಿತ ಹೊಂದಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಜಿ.ಎ.ಬಾವಾ, ಬೆಂಗಳೂರು ದಕ್ಷಿಣದಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವ ಮೂಲಕ ರಾಜ್ಯ ರಾಜಧಾನಿಯಲ್ಲಿ ಬದಲಾವಣೆಯ ಪರ್ವ ಆರಂಭವಾಗಲಿದೆ ಎಂದರು. ಈ ಕ್ಷೇತ್ರ ವ್ಯಾಪ್ತಿಯಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರುವ ಇಬ್ಬರು ಕಾಂಗ್ರೆಸ್ ಶಾಸಕರು ಇದ್ದು, ಅವರ ಅಭಿವೃದ್ಧಿ ಕೆಲಸಗಳು ಕಾಂಗ್ರೆಸ್ ಪಕ್ಷಕ್ಕೆ ವರದಾನವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಅವರು ಸುಶಿಕ್ಷಿತರಾಗಿದ್ದು, ಶಿಕ್ಷಣ ತಜ್ಞರಾಗಿ ಲಕ್ಷಾಂತರ ಜನರಿಗೆ ಶಿಕ್ಷಣ ಒದಗಿಸಿದ್ದಾರೆ. ಜನಾನುರಾಗಿಯಾಗಿರುವ ಇವರು ಜನರ ಕಷ್ಟಗಳಿಗೆ ಸ್ಪಂಧಿಸುವ ಸದ್ಗುಣ ಹೊಂದಿದ್ದಾರೆ. ಸಾವಿರಾರು ಜನರಿಗೆ ಉದ್ಯೋಗ ನೀಡಿರುವ ಇವರು, ಎಲ್ಲಾ ಸಮುದಾಯದ ಮಂದಿಗೂ ಪ್ರಿಯರೆನಿಸಿದ್ದಾರೆ. ಹಾಗಾಗಿ ಕ್ಷೇತ್ರದ ಜನರು ಮನ್ಸೂರ್ ಅಲಿ ಖಾನ್ ಅವರನ್ನು ಗೆಲ್ಲಿಸಲಿದ್ದಾರೆ ಎಂದು ಜಿ.ಎ.ಬಾವಾ ವಿಶ್ವಾಸ ವ್ಯಕ್ತಪಡಿಸಿದರು.
ಈ ವರೆಗೂ ಹಲವು ಅವಧಿಗೆ ಸಂಸದರಾಗಿರುವ ಪಿಸಿ ಮೋಹನ್ ಈವರೆಗೂ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿಲ್ಲ. ಇದರಿಂದ ರೋಸಿ ಹೋಗಿರುವ ಮತದಾರರು ಸೂಕ್ತ ಅಭ್ಯರ್ಥಿಯ ಆಯ್ಕೆಗೆ ಒಲವು ವ್ಯಕ್ತಪಡಿಸಿದ್ದಾರೆ ಎಂದು ಜಿ.ಎ.ಬಾವಾ ವಿಶ್ಲೇಷಿಸಿದರು.