ಮುಜರಾಯಿ ದೇವಾಸ್ಥಾನಗಳ ಆದಾಯದ ಹಣವನ್ನು ವಕ್ಫ್ ಹಾಗೂ ಕ್ರಿಶ್ಚಿಯನ್ ಮಂದಿರಗಳಿಗೆ ವ್ಯಯಿಸಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿರುವ ಪೋಸ್ಟ್ ಬಗ್ಗೆ ಸಾರಿಗೆ ಸಚಿವರೂ ಆದ ರಾಮಲಿಂಗ ರೆಡ್ಡಿ ಸಿಡಿಮಿಡಿಗೊಂಡಿದ್ದಾರೆ. ಸಚಿವರಷ್ಟೇ ಅಲ್ಲ, ಈ ಸುಳ್ಳು ಮಾಹಿತಿ ಹಾಕಿರುವವರನ್ನು ನೆಟ್ಟಿಗರು ಕೂಡಾ ತರಾಟೆಗೆ ತೆಗೆದುಕೊಂಡಿದ್ದಾರೆ. ರಾಜ್ಯದ ಮುಜರಾಯಿ ದೇಗುಲಗಳ ಅಭಿವೃದ್ಧಿಗೆ ಪೂರಕ ಕ್ರಮಗಳನ್ನು ಸಚಿವ ರಾಮಲಿಂಗ ರೆಡ್ಡಿ ಅವರು ಕೈಗೊಂಡಿದ್ದಾರೆ. ದೇವಾಲಯಗಳ ಅರ್ಚಕರ ಹಾಗೂ ಸಿಬ್ಬಂದಿಯ ಕುಟುಂಬಗಳ ಏಳಿಗೆಗೂ ಸರ್ಕಾರ ಪೂರಕ ಕ್ರಮ ಕೈಗೊಂಡಿದೆ ಎಂದು ನೆಟ್ಟಿಗರು ಎದಿರೇಟು ಕೊಟ್ಟಿದ್ದಾರೆ.
ಬೆಂಗಳೂರು: ಮುಜರಾಯಿ ದೇವಾಸ್ಥಾನಗಳ ಆದಾಯದ ಹಣವನ್ನು ಅನ್ಯ ಧರ್ಮಗಳ ಕಾರ್ಯಗಳಿಗೆ ಬಳಸಲಾಗುತ್ತಿದೆ ಎಂಬ ಪೋಸ್ಟ್ ಬಗ್ಗೆ ಮುಜರಾಯಿ ಮಂತ್ರಿ ರಾಮಲಿಂಗ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಮಾಧ್ಯಮದ ಕನ್ಸಲ್ಟಿಂಗ್ ಸಂಪಾದಕೊಬ್ಬರು ಹಾಗೂ ಬೆಂಗಳೂರು ನಗರದ ಬಿಜೆಪಿ ಸಂಸದರು ತಮ್ಮನ್ನು ತಾವು ದೇಶದ ಅತೀ ಬುದ್ದಿವಂತರೆಂದು ತಮಗೆ ತಾವೇ ಟೈಟಲ್ ಕೊಟ್ಟು ಕೊಂಡವರು ಈ ರೀತಿ ತಪ್ಪು ಮಾಹಿತಿ ಹರಡುವ ಪ್ರಯತ್ನದಲ್ಲಿದ್ದಾರೆ ಎಂದು ಸಚಿವರು ವ್ಯಂಗ್ಯವಾಡಿದ್ದಾರೆ.
ದೇವಸ್ಥಾನಗಳಿಂದ ಸಂಗ್ರಹಿಸಿದ ಹಣವನ್ನು ಅಲ್ಪಸಂಖ್ಯಾತರ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಖರ್ಚು ಮಾಡುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಜನರನ್ನು ತಪ್ಪುದಾರಿಗೆ ತರುವ ಉದ್ದೇಶ ಒಂದೇ ಲೋಕಸಭಾ ಚುನಾವಣೆ ಎಂದು ಸಚಿವ ರಾಮಲಿಂಗ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ರಾಮಲಿಂಗ ರೆಡ್ಡಿ, ಕರ್ನಾಟಕ ಸರ್ಕಾರ ತನ್ನ ಬಜೆಟ್‍ನಲ್ಲಿ 330 ಕೋಟಿ ರೂ.ಗಳನ್ನು ವಕ್ಫ್ ಆಸ್ತಿಗಳ ಅಭಿವೃದ್ಧಿ, ಹಜ್ ಭವನಗಳ ನಿರ್ಮಾಣ ಮತ್ತು ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ ನೀಡಿದೆ ಎಂಬ ಸುಳ್ಳು ಮಾಹಿತಿಯು ಕೀಳು ಮನಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರು, ಸಂಸದರಾಗಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವವರು ಇಂತಹ ಕ್ಷುಲ್ಲಕ ರಾಜಕೀಯ ಮಾಡಬಾರದು. ದೇಶ ಮೊದಲು ಎಂಬುದು ಮಾತಿಗಷ್ಟೇ ಸೀಮಿತವಾಗಬಾರದು, ಅದನ್ನು ಅಕ್ಷರಶಃ ಪಾಲಿಸಬೇಕು. ದೇಶವನ್ನು ಈ ರೀತಿ ದಾರಿ ತಪ್ಪಿಸುವುದು ತರವಲ್ಲ ಎಂದಿದ್ದಾರೆ.
ದೇವಾಲಯಕ್ಕೆ ಬರುವ ಭಕ್ತಾದಿಗಳ ಹಣದ ಬಳಕೆ ಕುರಿತು ಸ್ಪಷ್ಟವಾದ ಕಾನೂನು ಇದೆ. ‘ಕರ್ನಾಟಕ ಹಿಂದೂ ಧರ್ಮಾದಾಯ ಸಂಸ್ಥೆಗಳು ಮತ್ತು ದತ್ತಿ ಕಾಯಿದೆ 1997’ 2003 ರಲ್ಲಿ ಜಾರಿಯಾಯಿತು. ಈ ಕಾಯಿದೆಯು ಮತ್ತೆ ಎರಡು ಬಾರಿ ತಿದ್ದುಪಡಿಯಾಗಿ 2011ರಲ್ಲಿ ಪೂರ್ಣ ಜಾರಿಗೆ ಬಂದಿದೆ. ಈ ಕಾಯಿದೆಯಂತೆ ಭಕ್ತಾದಿಗಳು ಹುಂಡಿಯಲ್ಲಿ ಹಾಕುವ ಹಣ, ಸೇವಾರೂಪವಾಗಿ ಕೊಡಮಾಡುವ ಹಣದ ಶೇಕಡಾ ನೂರರಷ್ಷು ಹಣವು ದೇವಸ್ಥಾನದ ಖಾತೆಯಲ್ಲೇ ಜಮೆಯಾಗುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಮುಜರಾಯಿ ಕಾಯಿದೆಯಂತೆ ದೇವಸ್ಥಾನಗಳನ್ನು ಅವುಗಳ ಆದಾಯದ ಆಧಾರದಲ್ಲಿ ವರ್ಗೀಕರಿಸಲಾಗಿದೆ. ರೂ 25 ಲಕ್ಷಕ್ಕಿಂತ ಹೆಚ್ಚಿನ ಆದಾಯದ ದೇವಸ್ಥಾನಗಳು ‘A’ಗ್ರೇಡ್, ರೂ 5 ರಿಂದ 25 ಲಕ್ಷ ‘B’ ಗ್ರೇಡ್, ಅದಕ್ಕಿಂತ ಕೆಳಗಿನ ಆದಾಯದ ದೇವಸ್ಥಾನಗಳು ‘C’ ಗ್ರೇಡ್. ದೇವಸ್ಥಾನಗಳಲ್ಲಿ ಹತ್ತು ಲಕ್ಷಕ್ಕಿಂತ ಹೆಚ್ಚಿನ ಆದಾಯ ಬರುವಲ್ಲಿ, ವಾರ್ಷಿಕವಾಗಿ ಆದ ಖರ್ಚುಗಳೆಲ್ಲವನ್ಮೂ ಕಳೆದು ಉಳಿಕೆಯಾದ ನಿವ್ವಳ ಲಾಭದ ಶೇಕಡಾ 10% ಹಣ ಹಾಗೂ 5 ಲಕ್ಷಕ್ಕಿಂತ 10 ಲಕ್ಷದ ವರೆಗಿನ ಶ್ರೇಣಿಯ ದೇವಸ್ಥಾನಗಳ ನಿವ್ವಳ ಆದಾಯದ ಶೇಕಡಾ 5% ಹಣ ಮಾತ್ರ ಸರ್ಕಾರದ ಮುಜರಾಯಿ ಖಾತೆಯ ಸಾಮಾನ್ಯ ಸಂಗ್ರಹಣಾ ನಿಧಿಗೆ ಜಮೆಯಾಗುತ್ತದೆ. 5 ಲಕ್ಷಕ್ಕಿಂತ ಕಡಿಮೆ ಆದಾಯದ ದೇವಸ್ಥಾನಗಳಿಂದ ಈ ಹಣ ಪಡೆಯುವಂತಿಲ್ಲ. ಉಳಿದ ಹಣ ದೇವಸ್ಥಾನದ ಖಾತೆಯಲ್ಲೇ ನಿಗದಿತ ಠೇವಣಿಯಾಗಿ ಇರುತ್ತದೆ. ದೇವಸ್ಥಾನದ ಅಭಿವೃದ್ಧಿಗೆ ಮಾತ್ರ ಖರ್ಚು ಮಾಡಬಹುದಾಗಿದ್ದು, ಸರ್ಕಾರ ಈ ಹಣವನ್ನು ಈವರೆಗೂ ಸ್ವಾಧೀನಕ್ಕೆ ಪಡಿಸಿಕೊಂಡಿಲ್ಲ. ಬೇರೆ ಉದ್ದೇಶಕ್ಕಾಗಿ ಉಪಯೋಗಿಸಲು ಕಾಯಿದೆಯಲ್ಲಿ ಅವಕಾಶವೂ ಇಲ್ಲ. ಸಾಮಾನ್ಯ ಸಂಗ್ರಹಣಾ ನಿಧಿ Common pool fund ಎಂಬುದು ಮೇಲೆ ಹೇಳಿದಂತೆ ದೇವಾಲಯಗಳಿಂದ ಸಂಗ್ರಹವಾದ ಹಣವು ಸರಕಾರದ ಖಜಾನೆಗೆ ಸೇರದೆ ಮುಜರಾಯಿ ಇಲಾಖೆಯಲ್ಲೇ ಇರುತ್ತದೆ. ಆಯುಕ್ತರು ಈ ಖಾತೆಯನ್ನು ನಿರ್ವಹಿಸುತ್ತಾರೆ. ಈ ಹಣವನ್ನು ಉಪಯೋಗಿಸುವಲ್ಲಿಯೂ ಕಾಯಿದೆಯಲ್ಲಿರುವ ನಿಯಮಾವಳಿಗಳೇ ಅನ್ವಯವಾಗುತ್ತದೆ. ಎಂದು ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.
ಇದನ್ನೂ ಓದಿ.. ಸಾವಿನ ದವಡೆಯಿಂದ ಪಾರಾದ ನಟಿ..
ದೇವಸ್ಥಾನದ ಪೂಜಾವಿಧಿಗಳಿರುವ ತರಗತಿಗಳನ್ನು ನಡೆಸಲು, ವೇದ ಪಾಠಶಾಲೆಗಳಿಗೆ, ಧಾರ್ಮಿಕ ತರಗತಿ, ಉಪನ್ಯಾಸ, ವೃದ್ಧಾಶ್ರಮ – ಅನಾಥಾಶ್ರಮ ನಡೆಸಲು ಮತ್ತು ಆರ್ಥಿಕವಾಗಿ ಹಿಂದುಳಿದ ‘ಸಿ’ ಗ್ರೇಡ್ ದೇವಸ್ಥಾನಗಳ ಹಾಗೂ ಇತರ ಬಡ ಖಾಸಗಿ ಹಿಂದೂ ದೇವಾಲಯಗಳ ಜೀರ್ಣೋದ್ಧಾರಗಳಿಗಾಗಿ ಅಥವಾ ಇತರೆ ಹಿಂದೂ ಧರ್ಮದ ಉದ್ದೇಶಗಳಿಗಾಗಿ ಖರ್ಚು ಮಾಡಲು ಕಾಯಿದೆಯಲ್ಲಿ ಅವಕಾಶವಿದೆ. ಅದೂ ಕೂಡ ರಾಜ್ಯ ಧಾರ್ಮಿಕ ಪರಿಷತ್ ನಲ್ಲಿ ನಿರ್ಣಯವಾದಂತೆ ಇಲಾಖೆ ಖರ್ಚುಮಾಡಬೇಕಿದೆ. ಅದೇ ರೀತಿ ನಿಯಮಗಳನ್ನು ಈವರೆಗೂ ಮುಜರಾಯಿ ಇಲಾಖೆ ಪಾಲಿಸುತ್ತಿದೆ ಎಂದು ಮಾಹಿತಿ ಹಂಚಿಕೊಂಡಿರುವ ಸಚಿವರು, ಧಾರ್ಮಿಕ ದತ್ತಿ ಕಾಯ್ದೆ, ರಾಜ್ಯ ಧಾರ್ಮಿಕ ಪರಿಷತ್ತು, ಮುಜರಾಯಿ ಇಲಾಖೆಯ ಕಾನೂನು, ನಿಯಮಾವಳಿಗಳೇ ಇಷ್ಟು ಕಟ್ಟುನಿಟ್ಟಾಗಿರುವಾಗ ದೇವಸ್ಥಾನದ ಹಣವನ್ನ ಯಾವ ಮಸೀದಿ ಅಥವಾ ಚರ್ಚ್ ಗಳಿಗೆ ಕೊಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ದೇವಸ್ಥಾನಗಳಿಂದ ಸಂಗ್ರಹವಾಗುವ ಆದಾಯವನ್ನು ಆಯಾ ದೇವಸ್ಥಾನಗಳ ಅಭಿವೃದ್ಧಿಗಾಗಿಯೇ ಬಳಸಲಾಗುತ್ತಿದೆ. ಅಪಪ್ರಚಾರಗಳು ರಾಜಕೀಯ ಷಡ್ಯಂತ್ರವಾಗಿವೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆ ಬಿಜೆಪಿಯ ಮಿತ್ರರು ಈ ರೀತಿ ತಪ್ಪು ದಾರಿಗೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲೂ ಇಂತಹದ್ದೇ ಪ್ರಯತ್ನಗಳ ಮೂಲಕ ಹಿಂದುತ್ವದ ನಾಟಕವಾಡಲಾಗಿತ್ತು. ಆದರೆ ರಾಜ್ಯದ ಜನ ಸತ್ಯ ತಿಳಿದುಕೊಂಡಿದ್ದರು. ಅಪಪ್ರಚಾರಗಳಿಗೆ ಕಿವಿಗೊಡಲಿಲ್ಲ ಎಂದು ರಾಮಲಿಂಗ ರೆಡ್ಡಿ ಅವರು ಟೀಕಾಕಾರರಿಗೆ ತಿರುಗೇಟು ಕೊಟ್ಟಿದ್ದಾರೆ.