ಕಾರಿಂಜೆ, ನರಹರಿ ಪರ್ವತದಲ್ಲಿ ಅಮಾವಾಸ್ಯೆ ವಿಶೇಷ..
ಮಂಗಳೂರು: ಆಷಾಢ ಮಾಸದ ಅಮಾವಾಸ್ಯೆ ವಿಶೇಷ ಧಾರ್ಮಿಕ ಹಾಗೂ ಆರೋಗ್ಯದ ಹಬ್ಬವಾಗಿ ಕರಾವಳಿ ಕರ್ನಾಟಕದ ತುಳುನಾಡಿನಲ್ಲಿ ಆಚರಿಸಲಾಗುತ್ತದೆ. ಈ ಹಬ್ಬವನ್ನು ‘ಆಟಿ ಅಮಾವಾಸ್ಯೆ’ ಎಂದು ಕರೆಯಲಾಗುತ್ತದೆ. ಮಳೆಗಾಲದ ‘ಆಟಿ’ (ಆಷಾಢ) ತಿಂಗಳಲ್ಲಿ ಜರುಗುವ ಈ ಆಚರಣೆ, ಆರೋಗ್ಯ ಸಂರಕ್ಷಣೆ ಹಾಗೂ ಸಂಪ್ರದಾಯ ಸಂರಕ್ಷಣೆಯ ಸಂಕೇತವಾಗಿದೆ.
ಔಷಧೀಯ ಆಚರಣೆ – ಪಾಲೆ ಮರ ಕಷಾಯ
ಆಟಿ ಅಮಾವಾಸ್ಯೆ ದಿನ ತುಳುನಾಡಿನಲ್ಲಿ ಮನೆಯೆಲ್ಲಾ ಸದಸ್ಯರು ‘ಪಾಲೆ ಮರ’ (ಸಪ್ತಪರ್ಣಿ) ದ ತೊಗಟೆಯಿಂದ ತಯಾರಿಸಿದ ಕಷಾಯವನ್ನು ಸೇವಿಸುವ ಸಂಪ್ರದಾಯ ಇದೆ. ತೊಗಟೆಗೆ ಕರಿ ಮೆಣಸು, ಓಮ, ಬೆಳ್ಳುಳ್ಳಿ ಸೇರಿಸಿ ಕಲ್ಲಿನಿಂದ ಜಜ್ಜಿ, ಬಿಳಿ ಕಲ್ಲನ್ನು ಕೆಂಡದಲ್ಲಿ ಕಾಯಿಸಿ ಒಗ್ಗರಣೆ ನೀಡಿ ಕಷಾಯ ತಯಾರಿಸಲಾಗುತ್ತದೆ. ಕಹಿಯಾದ ಈ ಕಷಾಯ ಸೇವನೆಯ ನಂತರ ಬಾಯಿ ಸಿಹಿ ಮಾಡಲು ಬೆಲ್ಲ ಸೇವಿಸುವರು ಅನೇಕರು. ಈ ಕಷಾಯ ದೇಹದ ಉಷ್ಣತೆಯನ್ನು ಹೆಚ್ಚಿಸುವ ಆತಂಕ ಇದೆ. ಹಾಗಾಗಿ ಕಷಾಯ ಕುಡಿದ ನಂತರದಲ್ಲಿ ಮೆಂತ್ಯೆ ಗಂಜಿ ಸೇವಿಸುವ ಪದ್ಧತಿಯೂ ಇದೆ.
ತೀರ್ಥಸ್ನಾನದ ಸಂಪ್ರದಾಯ:
ಆಟಿ ಅಮಾವಾಸ್ಯೆಯಂದು ಕಾರಿಂಜ ಶ್ರೀ ಕಾರಿಂಜೇಶ್ವರ ದೇವಾಲಯ ಮತ್ತು ನರಹರಿ ಪರ್ವತದ ಶ್ರೀ ಸದಾಶಿವ ದೇವಸ್ಥಾನದಲ್ಲಿ ವಿಶೇಷ ತೀರ್ಥಸ್ನಾನ ನಡೆಯುತ್ತದೆ. ತುಳುನಾಡಿನ ಜನತೆ ಈ ದಿವಸ ಬೆಳ್ಳಿಗೆ ಎದ್ದು, ಪವಿತ್ರ ಸ್ನಾನ ಮಾಡಿ, ಪಾಲೆ ಕಷಾಯ ಕುಡಿದು, ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸುವ ರೂಢಿಯನ್ನೂ ಆಸ್ತಿಕರು ಪಾಲಿಸುತ್ತಾರೆ.
ಆರೋಗ್ಯಕ್ಕೂ, ಸಂಸ್ಕೃತಿಗೂ ಒತ್ತು:
ಆಟಿ ತಿಂಗಳು ಮಳೆಗಾಲದ ತೀವ್ರತೆಯಿಂದ ಕೃಷಿಕರಿಗೆ ವಿಶ್ರಾಂತಿಯ ಕಾಲವಾಗಿದ್ದು, ಈ ಸಂದರ್ಭದಲ್ಲಿ ನೈಸರ್ಗಿಕ ಔಷಧೀಯ ಕಷಾಯ ಸೇವನೆಯ ಮೂಲಕ ದೇಹದ ರೋಗ ನಿರೋಧಕ ಶಕ್ತಿಯನ್ನು ಬೆಳೆಸುವುದು ಪ್ರಧಾನ ಉದ್ದೇಶ. ಇದು ಸಾರ್ವಜನಿಕ ಆರೋಗ್ಯದ ಜತೆಗೆ ಸಾಂಸ್ಕೃತಿಕ ಪರಂಪರೆಯ ಉಳಿವಿಗೂ ದಾರಿಯಾಗಿದೆ ಎನ್ನುತ್ತಾರೆ ಹಿರಿಯರು.