ಪುಟ್ಟಪರ್ತಿ: ಶ್ರೀ ಸತ್ಯಸಾಯಿ ಬಾಬಾ ಅವರ ದೈವಿಕ ಬೋಧನೆಗಳು ಇಂದಿಗೂ ಲಕ್ಷಾಂತರ ಜನರ ಮನಸಿಗೆ ಸ್ಪಂದಿಸುತ್ತಿದ್ದು, ಅವರ ಸಂದೇಶ ಮಾನವೀಯತೆಗೆ ದಿಕ್ಕು ತೋರಿಸುತ್ತಿದೆಯೆಂದು ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಹೇಳಿದ್ದಾರೆ.
ಬುಧವಾರ ನಡೆದ ಸತ್ಯಸಾಯಿ ಬಾಬಾ ಶತಮಾನೋತ್ಸವ ಆಚರಣೆಯಲ್ಲಿ ಭಾಷಣಿಸಿದ ಅವರು, ಬಾಬಾ ನೀಡಿದ ‘ಎಲ್ಲರನ್ನು ಪ್ರೀತಿಸಿ, ಎಲ್ಲರ ಸೇವೆ ಮಾಡಿ’ ಎಂಬ ಸಂದೇಶವೇ ಮಾನವಜಾತಿಯ ನಿಜವಾದ ಮಾರ್ಗದರ್ಶನ ಎಂದರು. “ಸತ್ಯಸಾಯಿ ಬಾಬಾ ಅವರ ಆಶೀರ್ವಾದದ ಆಗಮನದಿಂದ 100 ವರ್ಷಗಳಾಗುತ್ತಿರುವ ಈ ಸಂದರ್ಭ, ನಾವೆಲ್ಲರೂ ಅವರ ದೈವಿಕ ಸಂದೇಶವಾದ ಪ್ರೀತಿ, ಸೇವೆ, ಮಾನವೀಯತೆ ಮತ್ತು ಏಕತೆಯ ಕಡೆಗೆ ನಮ್ಮನ್ನು ತಾವು ಸಮರ್ಪಿಸಿಕೊಳ್ಳಬೇಕು. ಒಂದೇ ಜಾತಿ — ಮಾನವ ಜಾತಿ; ಒಂದೇ ಧರ್ಮ — ಪ್ರೀತಿಯ ಧರ್ಮ; ಒಂದೇ ಭಾಷೆ — ಹೃದಯದ ಭಾಷೆ,” ಎಂದು ಐಶ್ವರ್ಯಾ ಹೇಳಿದರು.
ಮುಂಬೈನ ಸತ್ಯಸಾಯಿ ಬಾಲವಿಕಾಸ್ ಕಾರ್ಯಕ್ರಮದ ವಿದ್ಯಾರ್ಥಿನಿಯಾಗಿದ್ದ ಐಶ್ವರ್ಯಾ, “ಬಾಬಾ ಅವರ ತತ್ವಗಳು, ಉಪಸ್ಥಿತಿ, ಮಾರ್ಗದರ್ಶನ ಮತ್ತು ಪಾಠಗಳು ಶತಮಾನ ಕಳೆದರೂ ಪ್ರಪಂಚದಾದ್ಯಂತ ಜನರ ಹೃದಯಗಳಲ್ಲಿ ಜೀವಂತವಾಗಿವೆ. ಬಾಲವಿಕಾಸದಲ್ಲಿ ಕಲಿತ ಮೌಲ್ಯಗಳು ನನ್ನ ಜೀವನದ ಅವಿಭಾಜ್ಯ ಭಾಗವಾಗಿದೆ ಎಂದರು.
ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಗೆ ಅವರು ಧನ್ಯವಾದ ಸಲ್ಲಿಸಿದರು. “ಮೋದಿ ಅವರ ಹಾಜರಾತಿಯು ಕಾರ್ಯಕ್ರಮಕ್ಕೆ ಪವಿತ್ರತೆ ಮತ್ತು ಸ್ಫೂರ್ತಿಯನ್ನು ಸೇರಿಸಿದೆ. ನಿಜವಾದ ನಾಯಕತ್ವವೆಂದರೆ ಸೇವೆ, ಮನುಷ್ಯನ ಸೇವೆಯೇ ದೇವರ ಸೇವೆ ಎಂಬ ಬಾಬಾ ಅವರ ಮಾತುಗಳನ್ನು ಅದು ಮತ್ತೆ ನೆನಪಿಸಿದೆ,” ಎಂದು ಹೇಳಿದರು.
ಪುಟ್ಟಪರ್ತಿ, ವೈಟ್‌ಫೀಲ್ಡ್, ಕೋಲ್ಕತ್ತಾ ಮತ್ತು ನವಿ ಮುಂಬೈನ ಆಸ್ಪತ್ರೆಗಳ ಮೂಲಕ ಲಕ್ಷಾಂತರ ಜನರಿಗೆ ಉಚಿತ ಹಾಗೂ ವಿಶ್ವದರ್ಜೆಯ ಚಿಕಿತ್ಸೆ ನೀಡುತ್ತಿರುವ ಸಂಸ್ಥೆಯ ಆರೋಗ್ಯ ಮಾದರಿಯನ್ನು ಅವರು ಕೊಂಡಾಡಿದರು.
ಆಂಧ್ರಪ್ರದೇಶ, ಕರ್ನಾಟಕ ಮತ್ತು ತಮಿಳುನಾಡಿಗೆ ಕುಡಿಯುವ ನೀರು ಪೂರೈಸಿದ ಬೃಹತ್ ಯೋಜನೆ, ವಿಪತ್ತು ಪರಿಹಾರ, ಗ್ರಾಮೀಣ ಸೇವೆ ಮತ್ತು ಯುವ ಸಬಲೀಕರಣ ಕಾರ್ಯಕ್ರಮಗಳನ್ನು ಉಲ್ಲೇಖಿಸಿದ ಅವರು, “ಸತ್ಯಸಾಯಿ ಸಂಸ್ಥೆ ಪ್ರತಿಫಲದ ನಿರೀಕ್ಷೆಯಿಲ್ಲದೆ ಸೇವೆ ಸಲ್ಲಿಸುತ್ತಿದೆ. ‘ಸೇವೆಯ ಕೈಗಳು ಪ್ರಾರ್ಥನೆಯ ತುಟಿಗಳಿಗಿಂತ ಪವಿತ್ರ’ ಎಂಬ ಸ್ವಾಮಿಯ ಉಪದೇಶಕ್ಕೆ ಇದು ಸಾಕ್ಷಿ,” ಎಂದರು.





























































