ದೆಹಲಿ: ಮೋದಿ ಸರ್ಕಾರದ ಮತ್ತೊಂದು ಯಶೋಗಾಥೆಗೆ ಮನ್ನಣೆ ಸಿಕ್ಕಿದೆ. ಮೇಲ್ವರ್ಗದಲ್ಲಿದ್ದರೂ ಆರ್ಥಿಕವಾಗಿ ಹಿಂದುಳಿದವರಿಗಾಗಿ ಕೇಂದ್ರದಲ್ಲಿರುವ ನರೇಂದ್ರ ಮೋದಿ ಸರ್ಕಾರ ಕಲ್ಪಿಸಿರುವ ಶೇ.10ರ ಮೀಸಲಾತಿ ಕ್ರಮಕ್ಕೆ ಸುಪ್ರೀಂ ಕೋರ್ಟ್ ಅಸ್ತು ಎಂದಿದೆ.
ನರೇಂದ್ರ ಮೋದಿ ಕ್ರಮದ ವಿರುದ್ದ ಸಲ್ಲಿಕೆಯಾಗಿದ್ದ ಅರ್ಜಿಗಳ ಕುರಿತಂತೆ ವಿಚಾರಣೆ ನಡೆಸಿರುವ ಮುಖ್ಯ ನ್ಯಾಯಮೂರ್ತಿ ಉದಯ್ ಲಲಿತ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠ ಇಂದು ತೀರ್ಪು ಪ್ರಕಟಿಸಿದೆ.
ಆರ್ಥಿಕವಾಗಿ ಹಿಂದುಳಿದವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.10ರಷ್ಟು ಮೀಸಲಾತಿ ಕಲ್ಪಿಸುವ ಸಂಬಂಧ ಕೇಂದ್ರ ಸರ್ಕಾರ 2019ರಲ್ಲಿ ವ್ಯವಸ್ಥೆ ರೂಪಿಸಿತ್ತು. ಆದರೆ ಈ ನಿರ್ಧಾರವು ಶೇಕಡಾ 50ರ ಮೀಸಲಾತಿ ಪ್ರಮಾಣವನ್ನು ಮೀರಬಾರದು ಎಂಬ ಮಾನದಂಡವನ್ನು ಉಲ್ಲಂಘಿಸಿದಂತಾಗುತ್ತದೆ ಎಂಬ ಆಕ್ಷೇಪ ವ್ಯಾಪಕವಾಗಿ ಕೇಳಿಬಂದಿತ್ತು. ಅದಾಗಲೇ ಕೇಂದ್ರ ಸರ್ಕಾರದ ಈ ನಡೆಯನ್ನು ಪ್ರಶ್ನಿಸಿ 40ಕ್ಕೂ ಹೆಚ್ಚು ಅರ್ಜಿಗಳು ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿದ್ದವು.
ಈ ದಾವೆಗಳ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠವು ಮಹತ್ವದ ತೀರ್ಪು ಪ್ರಕಟಿಸಿದೆ. ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ನೇತೃತ್ವದ ಐವರು ಸದಸ್ಯರ ಸಾಂವಿಧಾನಿಕ ಪೀಠದಲ್ಲಿದ್ದವರಲ್ಲಿ ಮೂವರು ಈ ಮೀಸಲಾತಿಯು ಕ್ರಮಬದ್ದವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರದ ಉದ್ದೇಶಿತ, ಮೇಲ್ವರ್ಗದವರಿಗೆ ಶೇ.10ರಷ್ಟು ಮೀಸಲು ನೀಡುವ ಕ್ರಮದಲ್ಲಿ ತಪ್ಪಿಲ್ಲ ಎಂದು ಸಾಂವಿಧಾನಿಕ ಪೀಠ ಪ್ರತಿಪಾದಿಸಿದೆ. ಮೀಸಲಾತಿ ಕ್ರಮವು ಸಂವಿಧಾನದ ಮೂಲ ರಚನೆಗೆ ಧಕ್ಕೆ ತರುವಂತಿಲ್ಲ ಎಂದಿದೆ. ಸಮಾನತೆಯನ್ನು ಪ್ರತಿಪಾದಿಸುವ ಸಂಹಿತೆಗಳಿಗೂ ಧಕ್ಕೆಯಾಗದು ಎಂದೂ ಪ್ರತಿಪಾದಿಸಿದೆ.






















































