ಪುತ್ತೂರು: ಹಿಂದೂ ಸಾಮ್ರಾಜ್ಯದ ಶಕ್ತಿಸ್ಥಳ ಎಂದೇ ಗುರುತಾಗಿರುವ ದಕ್ಷಿಣಕನ್ನಡ ಜಿಲ್ಲೆ ಪುತ್ತೂರು ಇಂದು ಮತ್ತೊಮ್ಮೆ ಹಿಂದೂ ವಿರಾಟ್ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರೇರಕ ಶಕ್ತಿಯಾಗಿರುವ ಹಿರಿಯ ಮುಖಂಡ ಕಲ್ಲಡ್ಕ ಡಾ.ಪ್ರಭಾಕರ ಭಟ್ ಉಪಸ್ಥಿತಿಯಲ್ಲಿ ಪುತ್ತೂರು ಪುತ್ತಿಲ ಕೆರೆಮನೆ ಕಟ್ಟೆ ಬಳಿ ನಡೆದ ಈ ಕಾರ್ಯಕ್ರಮದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಭಾಗಿಯಾಗಿ ‘ಜಗದ್ವಂದ್ಯಾ ಮಾತೃಶಕ್ತಿ’ ಎಂದು ಜಯಘೋಷ ಮೊಳಗಿಸಿದರು.
ಚುನಾವಣಾ ಸಂದರ್ಭದಲ್ಲಿ ಹಿಂದೂ ಮತಗಳ ವಿಭಜನೆ ತಡೆಯುವ ಸಂಬಂಧ ಹಿಂದೂ ಸಂಘಟನೆಗಳು ಆಯೋಜಿಸಿದ್ದ ‘ಭಾರತ ಮಾತಾ ಪೂಜನ ಕಾರ್ಯಕ್ರಮ’ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿತ್ತು. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ವಿರುದ್ದ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಹಿಂದೂ ಸಂಘಟನೆಯ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರ ಊರಾದ ಪುತ್ತಿಲದಲ್ಲೇ ಈ ಕಾರ್ಯಕ್ರಮ ಏರ್ಪಾಡಾಗಿದ್ದರಿಂದ ಈ ಹಿಂದೂ ಶಕ್ತಿ ಪ್ರದರ್ಶನಕ್ಕೆ ಭಾರೀ ಮಹತ್ವ ಬಂತು.
ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಆರೆಸ್ಸೆಸ್ ಧುರೀಣ ಡಾ.ಪ್ರಭಾಕರ್ ಭಟ್ ಅವರು ಹಿಂದೂ ಕಾರ್ಯಕರ್ತರಲ್ಲಿ ಸಂಚಲನ ಸೃಷ್ಟಿಸಿದರು. ಹಿಂದೂ ಸಂಘಟನೆಗಳಿಗೆ ನಿರಂತರ ಸವಾಲುಗಳು ಎದುರಾಗುತ್ತಲೇ ಬಂದಿವೆ. ಆದರೆ ನಮ್ಮ ಶಕ್ತಿಯನ್ನು ಕುಗ್ಗಿಸಲು ಯಾರಿಂದಲೂ ಸಾಧ್ಯವಾಗಿಲ್ಲ ಎಂದರು. ಈ ಬಾರಿಯೂ ನಮ್ಮ ಸಮಾಜಕ್ಕೆ ಶಕ್ತಿಯಾಗಿರುವ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕಿದೆ ಎಂದು ಪ್ರಭಾಕರ ಭಟ್ ಕರೆ ನೀಡಿದರು.
ಕೆಲವು ವರ್ಷಗಳ ಹಿಂದೆ ಹಿಂದೂ ಸಂಘಟನೆಯ ಮುಖಂಡರೇ ಪಕ್ಷೇತರರಾಗಿ ನಿಂತು ಬಿಜೆಪಿಗೆ ಸವಾಲಾಗಿದ್ದರು ಎಂದು ನೆನಪಿಸಿದ ಡಾ. ಪ್ರಭಾಕರ ಭಟ್, ಆಗ ಬಿಜೆಪಿಯ ಶಕ್ತಿ ಕುಗ್ಗಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ. ಅದೇ ರೀತಿ ಈ ಬಾರಿಯೂ ನಾವು ನಮ್ಮ ಶಕ್ತಿಯನ್ನು ತೋರಿಸುತ್ತೇವೆ ಎಂದರು.
ಭಜರಂಗದಳ ನಿಷೇಧದ ಕೈ ಪ್ರಸ್ತಾಪಕ್ಕೆ ಆಕ್ಷೇಪ:
ಭಜರಂಗದಳ ನಿಷೇಧಿಸುವ ಬಗೆಗಿನ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಬಲವಾಗಿ ಆಕ್ಷೇಪಿಸಿದ ಡಾ.ಪ್ರಭಾಕರ್ ಭಟ್, ಪ್ರಸ್ತುತ ಪರಿಸ್ಥಿತಿಯಲ್ಲಿ ದೇಶದ ರಕ್ಷಣೆ ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯವಿದೆ ಎಂಬುದಕ್ಕೆ ಮೋದಿ ಸರ್ಕಾರ ಸಾಕ್ಷಿಯಾಗಿದೆ ಎಂದರು. ಈ ಬಾರಿ ರಾಜ್ಯದಲ್ಲೂ ಬಿಜೆಪಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಿದೆ ಎಂದ ಅವರು, ಮೋದಿ, ಯೋಗಿಯವರ ಆಗಮನ ನಮಗೆ ಶಕ್ತಿ, ಚೈತನ್ಯ ತಂದಿದೆ. ಆದರೂ ಇನ್ನುಳಿದ ದಿನಗಳಲ್ಲಿ ಬಿಜೆಪಿ ಪರವಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದು ಅವರು ಯುವಜನರಿಗೆ ಕರೆ ನೀಡಿದರು.