ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿಯಾಂಕ ಖರ್ಗೆ ಅವರಿಗೆ ನೋಟೀಸ್ ನೀಡಿರುವುದನ್ನು ಖಾರವಾಗಿ ಪ್ರಶ್ನಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ದಲಿತ ನಾಯಕನ ಮೇಲೆ ದೌರ್ಜನ್ಯ ಮಾಡಿ, ನಮ್ಮ ಬಾಯಿ ಮುಚ್ಚಿಸಲು ಪ್ರಯತ್ನ ನಡೆದಿದೆ ಎಂದು ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸಿಒಡಿ ಅಧಿಕಾರಿಗಳು ಮತ್ತೆ ನೊಟಸ್ ಜಾರಿಗೊಳಿಸಿರುವ ಬಗ್ಗೆ ತಮ್ಮದೇ ರೀತಿ ಪ್ರತಿಕ್ರಿಯಿಸಿದರು, ‘ಪೊಲೀಸ್ ಇಲಾಖೆ ಬಹಳ ಒಳ್ಳೆಯ ಕೆಲಸ ಮಾಡುತ್ತಿದೆ. ಬಿಜೆಪಿ ಸರ್ಕಾರದ ವಿರುದ್ಧ ಮಾತನಾಡುವ ವಿರೋಧ ಪಕ್ಷದ ನಾಯಕರು, ವಕ್ತಾರರಿಗೆ ನೊಟೀಸ್ ಜಾರಿ ಮಾಡುತ್ತಿದ್ದಾರೆ. ಈ ನೊಟೀಸ್ ಕೊಡುವ ಮೂಲಕ ಪೊಲೀಸ್ ಅಧಿಕಾರಿಗಳು ಉತ್ತಮ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಆದರೆ ಅದೇ ನೋಟೀಸ್ ಅನ್ನು ಬಿಜೆಪಿ ನಾಯಕರಿಗೂ ನೀಡಬೇಕಲ್ಲವೇ? ಅವರಿಗೆ ಯಾಕೆ ಕೊಟ್ಟಿಲ್ಲ ಎಂದು ಪ್ರಶ್ನಿಸಿದರು.
ಯತ್ನಾಳ್ ಅವರು ಕೆಪಿಎಸ್‌ಸಿ ಸದಸ್ಯರು ಹಾಗೂ ಅಧ್ಯಕ್ಷರು ನೇಮಕಕ್ಕೆ ಹಣ ನೀಡಿದ್ದಾರೆ ಎಂದೆಲ್ಲಾ ಹೇಳಿದ್ದಾರೆ. ವಿಶ್ವನಾಥ್ ಅವರು ಟೆಂಡರ್ ನೀಡುವ ಮೊದಲು ಕಮಿಷನ್ ಪರ್ಸೆಂಟೇಜ್ ನಿಗದಿಯಾಗಿದೆ ಎಂದು ಹೇಳಿದ್ದಾರೆ. ಬೇರೆ ನಾಯಕರು ಭ್ರಷ್ಟಚಾರ ಸಂಬಂಧ ಬೇರೆ, ಬೇರೆ ಹೇಳಿಕೆ ನೀಡಿದ್ದು, ಅವರಿಗೂ ನೊಟೀಸ್ ನೀಡಲಿ. ಯತ್ನಾಳ್ ಹಾಗೂ ವಿಶ್ವನಾಥ್ ಅವರು ಹೇಗೆ ವಿಧಾನ ಮಂಡಲದ ಗೌರವಾನ್ವಿತ ಸದಸ್ಯರೋ ಅದೇ ರೀತಿ ಪ್ರಿಯಾಂಕ್ ಖರ್ಗೆ ಅವರೂ ಕೂಡ ಸದಸ್ಯರೇ. ಅವರಿಗೆ ನೊಟೀಸ್ ನೀಡದವರು, ಇವರಿಗೆ ಮಾತ್ರ ಯಾಕೆ ನೀಡುತ್ತಿದ್ದಾರೆ ಎಂದೂ ಪ್ರಶ್ನಿಸಿದರ ಡಿಕೆಶಿ, ಪ್ರಿಯಾಂಕ್ ಖರ್ಗೆ ನಮ್ಮ ಪಕ್ಷದ ವಕ್ತಾರರು. ಇಂತಿಂತಹ ವಿಚಾರಗಳನ್ನು ಮಾಧ್ಯಮದ ಮುಂದೆ ಪ್ರಸ್ತಾಪ ಮಾಡಿ ಎಂದು ಪಕ್ಷ ಅವರಿಗೆ ಅಧಿಕಾರ ಕೊಟ್ಟಿದೆ. ಅವರು ಪೊಲೀಸ್ ಅಧಿಕಾರಿಗಳ ನೊಟೀಸ್ ಗೆ ಗೌರವಯತವಾಗಿ ಉತ್ತರ ನೀಡಿದ್ದಾರೆ. ಸರ್ಕಾರ ಮೊದಲು ತನ್ನ ಮುಖಕ್ಕೆ ಅಂಟಿರುವ ಕೊಳಕು, ತಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ಸ್ವಚ್ಛ ಮಾಡಿಕೊಳ್ಳಲಿ ಎಂದರು.
ಪ್ರಿಯಾಂಕ್ ಖರ್ಗೆ ಅವರಿಗೆ ನೊಟೀಸ್ ಜಾರಿ ಮಾಡಿರುವವರು ಮೊದಲು ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ನೊಟೀಸ್ ನೀಡಬೇಕು. ಸದನದಲ್ಲಿ ಬೇರೆ ಬೇರೆ ಪಕ್ಷದ ನಾಯಕರು ಈ ನೇಮಕಾತಿ ಅಕ್ರಮ ವಿಚಾರವಾಗಿ ಪ್ರಶ್ನೆಗಳನ್ನು ಕೇಳಿದಾಗ ಯಾವುದೇ ಅಕ್ರಮ ನಡೆದಿಲ್ಲ ಎಂದು ಐದು ಬಾರಿ ಉತ್ತರಿಸಿದ್ದಾರೆ. ಆದರೂ ಆರೋಪಿಗಳನ್ನು ಬಂಧಿಸಿ, ಜೈಲಿಗೆ ಹಾಕಿ, ಎಫ್ಐಆರ್ ದಾಖಲಿಸಲಾಗುತ್ತಿದೆ? ಹಾಗಾದರೆ ಗೃಹ ಸಚಿವರು ಹೇಳಿದ್ದು ಸುಳ್ಳಲ್ಲವೇ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ಇಲ್ಲಿಯವರೆಗೂ ತನಿಖಾಧಿಕಾರಿಗಳು, ಯಾರಿಗೆಲ್ಲ ನೊಟೀಸ್ ನೀಡಿದ್ದಾರೆ. ಯಾರು ಏನು ಉತ್ತರ ಕೊಟ್ಟಿದ್ದಾರೆ. ಯಾರನ್ನು ಬಿಟ್ಟು ಕಳುಹಿಸಿದ್ದಾರೆ, ಯಾವ ಪರೀಕ್ಷಾ ಕೇಂದ್ರದವರನ್ನು ಹಿಡಿದಿದ್ದೀರಿ. ಮಲ್ಲೇಶ್ವರಂನಲ್ಲಿ ಎಫ್ಐಆರ್ ಆಗಿದೆ. ಉನ್ನತ ಶಿಕ್ಷಣ ಇಲಾಖೆ, ಪಿಡ್ಲ್ಯೂಡಿ, ಎಫ್ ಡಿಎ ನೇಮಕಾತಿ ಅಕ್ರಮ ಎಲ್ಲವೂ ಬಯಲಾಗಿದೆ. ಈ ಪ್ರಕರಣಗಳಲ್ಲಿ ಯಾರ ವಿಚಾರಣೆ ಮಾಡಿದ್ದೀರಿ ಎಂದು ಇದುವರೆಗೂ ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡಿಲ್ಲ. ಎಲ್ಲ ಮಾಹಿತಿಗಳನ್ನು ಬಹಳ ಗೌಪ್ಯವಾಗಿ ಇಡಲಾಗುತ್ತಿದೆ ಎಂದರು.
ಪ್ರಿಯಾಂಕ್ ಖರ್ಗೆ ಅವರು ಹೇಳಿರುವ ಎಲ್ಲ ದಾಖಲೆಗಳು ಸಾರ್ವಜನಿಕ ವಲಯದಲ್ಲಿದ್ದು, ಅಧಿಕಾರಿಗಳು ಕೇಳಿದ ಎಲ್ಲ ಸಾಕ್ಷ್ಯಗಳನ್ನು ನೀಡಲಾಗಿದೆ. ಈ ಎಲ್ಲ ದಾಖಲೆಗಳು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ತನಿಖಾಧಿಕಾರಿಗಳು ಮಾಧ್ಯಮಗಳಿಗೆ ಈ ವಿಚಾರವಾಗಿ ಯಾಕೆ ನೊಟೀಸ್ ಜಾರಿ ಮಾಡಿಲ್ಲ. ಪ್ರಜಾಪ್ರಭುತ್ವದ ವಕ್ತಾರರಾದ ಮಾಧ್ಯಮಗಳು ಸಾಕಷ್ಟು ವಿಚಾರ ಬಯಲಿಗೆಳೆದಿವೆ ಎಂದ ಅವರು, ದಲಿತ ನಾಯಕನ ಮೇಲೆ ದೌರ್ಜನ ಮಾಡಿ, ನಮ್ಮ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತಿದ್ದೀರಾ? ಪ್ರಿಯಾಂಕ್ ಖರ್ಗೆ ಅವರು ಪಕ್ಷದ ಪ್ರತಿನಿಧಿಯಾಗಿದ್ದು, ಅವರನ್ನು ಯಾವಾಗ ವಿಚಾರಣೆಗೆ ಕಳುಹಿಸಬೇಕು ಎಂದು ನಮಗೆ ಗೊತ್ತಿದೆ. ಆ ಬಗ್ಗೆ ನಾವು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ’ ಎಂದರು.