ಬೆಂಗಳೂರು: ಸಾರಿಗೆ ಇಲಾಖೆ ಕುರಿತಾಗಿ ವ್ಯಂಗ್ಯವಾಡುತ್ತಾ, ಸಾರಿಗೆ ಸಚಿವರನ್ನು ಟೀಕಿಸುತ್ತಿದ್ದ ಬಿಜೆಪಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಎದಿರೇಟು ನೀಡಿದ್ದಾರೆ.
ರಾಮಲಿಂಗ ರೆಡ್ಡಿ ಅವರನ್ನು ಸ್ವಯಂಘೋಷಿತ ದಕ್ಷ ಸಚಿವ ಎಂದು ಲೇವಡಿ ಮಾಡಿರುವ ಬಿಜೆಪಿ, ಕೆಎಸ್ಸಾರ್ಟಿಸಿ ಕಾರ್ಯವೈಖರಿ ಬಗ್ಗೆ ಟೀಕಿಸಿದೆ.
ಸ್ವಯಂಘೋಷಿತ ದಕ್ಷ ಸಚಿವ @RLR_BTM ಅವರೇ, ಕೆ.ಎಸ್.ಆರ್.ಟಿ.ಸಿ ಸಂಸ್ಥೆ ಲಾಭದಲ್ಲಿದೆ ಎಂದು ವಂದಿಮಾಗಧರಿಂದ ಹೊಗಳಿಸಿಕೊಳ್ಳುವ ನೀವು ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
1⃣ ಬಸ್‌ನಲ್ಲಿ ಈ ಪರಿ ಹೊಗೆ ಬರುತ್ತಿರುವುದು ಎಮಿಷನ್ ಟೆಸ್ಟ್‌ಗೆ ಕೌಂಟರ್ ಕೊಡಲಾ..??
2⃣ ಮಳೆಗಾಲದಲ್ಲಿ ಬಸ್‌ನಲ್ಲಿ ಈ ಪರಿ ನೀರು ಸುರಿಯುತ್ತಿರುವುದು ಬಸ್‌ನೊಳಗೆ… https://t.co/wvUVF6PadV pic.twitter.com/ERuN7Ug7AK
— BJP Karnataka (@BJP4Karnataka) May 25, 2024
ಈ ಟೀಕೆಗೆ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿರುವ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ಕೆಎಸ್ಸಾರ್ಟಿಸಿಯಲ್ಲಿ ಈಗಿರುವ ಬಸ್ಸುಗಳ ಸ್ಥಿತಿಗೆ ತಾವೇ ಕಾರಣ ಎಂದು ಎದಿರೇಟು ನೀಡಿದ್ದರೆ. ಬಿಜೆಪಿಯ ಟ್ವೀಟ್‌ಗೆ ಟ್ವಿಟ್ಟರ್‌ನಲ್ಲೇ ಉತ್ತರ ನೀಡಿರುವ ಸಚಿವರು, ಪ್ರತಿ ಬಾರಿಯೂ ನಮ್ಮ ಸರ್ಕಾರವನ್ನು ಅದರಲ್ಲಿಯೂ ಸಾರಿಗೆ ಇಲಾಖೆಯ ಸಚಿವನಾದ ನನ್ನ ಕಾರ್ಯವೈಖರಿಯನ್ನು ಇಷ್ಟೊಂದು ಅಚ್ಚುಕಟ್ಟಾಗಿ ವಿಮರ್ಶಿಸಿ, ದಕ್ಷ ಸಚಿವನೆಂದು ಬಿರುದು ಕೊಟ್ಟಿರುವ ಬಿಜೆಪಿಯ ಸ್ವಯಂ ಘೋಷಿತ ದಕ್ಷ ನಾಯಕರುಗಳಿಗೆ ಧನ್ಯವಾದಗಳು ಎಂದಿದ್ದಾರೆ.
ಸ್ವಯಂ ಘೋಷಿತ ನಾಯಕರುಗಳ ಗಮನಕ್ಕೆ ತರಲೇಬೇಕಾದ ಹಾಗೂ ಅವರ ಅವಧಿಯ ಕರ್ಮ ಕಾಂಡಗಳನ್ನು ತೆರೆದಿಡುವ ಅನಿವಾರ್ಯ ಪರಿಸ್ಥಿತಿಯನ್ನು ಅವರೇ ನಿರ್ಮಿಸಿ ಕೊಡುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸುಥತೇನೆ ಎಂದಿರುವ ರಾಮಲಿಂಗ ರೆಡ್ಡಿ, ಕಳೆದ 5 ವರುಷಗಳಲ್ಲಿ ಹೊಸ ಬಸ್ಸುಗಳ ಸೇರ್ಪಡೆಯಾಗಿಲ್ಲ. ಈಗಿರುವ ಬಸ್ಸುಗಳ ಸ್ಥಿತಿಗೆ ತಾವೇ ಕಾರಣ ಎಂಬುದನ್ನು ಪದೇ ಪದೇ ತಮಗೆ ತಿಳಿಸಿ ಹೇಳಬೇಕಾಗಿದೆ ಎಂದು ತಿರುಗೇಟು ನೀಡಿದ್ದಾರೆ.
ಪ್ರತಿ ಬಾರಿಯೂ ನಮ್ಮ ಸರ್ಕಾರವನ್ನು ಅದರಲ್ಲಿಯೂ ಸಾರಿಗೆ ಇಲಾಖೆಯ ಸಚಿವನಾದ ನನ್ನ ಕಾರ್ಯವೈಖರಿಯನ್ನು ಇಷ್ಟೊಂದು ಅಚ್ಚುಕಟ್ಟಾಗಿ ವಿಮರ್ಶಿಸಿ, ದಕ್ಷ ಸಚಿವನೆಂದು ಬಿರುದು ಕೊಟ್ಟಿರುವ @BJP4Karnatakaದ ಸ್ವಯಂ ಘೋಷಿತ ದಕ್ಷ ನಾಯಕರುಗಳಿಗೆ ಧನ್ಯವಾದಗಳು.
ಸ್ವಯಂ ಘೋಷಿತ ನಾಯಕರುಗಳ ಗಮನಕ್ಕೆ ತರಲೇಬೇಕಾದ ಹಾಗೂ ಅವರ ಅವಧಿಯ ಕರ್ಮ ಕಾಂಡಗಳನ್ನು… pic.twitter.com/13YmxgoGD2
— Ramalinga Reddy (@RLR_BTM) May 25, 2024
ನಿಗಮದಲ್ಲಿ 2600 ತಾಂತ್ರಿಕ ಸಿಬ್ಬಂದಿಗಳ ತೀವ್ರ ಕೊರತೆ ಇದೆ. ನಮ್ಮ ಸರ್ಕಾರ ಕಳೆದ 5 ತಿಂಗಳ ಹಿಂದೆ 250 ತಾಂತ್ರಿಕ ಸಿಬ್ಬಂದಿಗಳ ನೇಮಕಾತಿ ಮಾಡಿದೆ. ಬಸ್ಸುಗಳ ಸಮರ್ಪಕ ನಿರ್ವಹಣೆಗೆ ತಾಂತ್ರಿಕ ಸಿಬ್ಬಂದಿಯಿಲ್ಲದೆ ಸಂಸ್ಥೆಗಳು ತತ್ತರಿಸುತ್ತಿವೆ. ಹಳೆಯ 970 ಬಸ್ಸುಗಳನ್ನು ಪುನಶ್ಚೇತನ ಕಾರ್ಯಕೈಗೊಂಡು ನವೀಕರಿಸಲಾಗಿದೆ ಎಂದು ಅವರು ಪ್ರಗತಿಯ ಪಟ್ಟಿ ನೀಡಿದ್ದಾರೆ.
ಬಿ.ಜೆ.ಪಿಯ ಸ್ವಯಂ ಘೋಷಿತ ದಕ್ಷ ಮುಖ್ಯಮಂತ್ರಿಗಳ ಹಾಗೂ ಸಾರಿಗೆ ಮಂತ್ರಿಗಳ ಅದಕ್ಷ ಕ್ರಮಗಳಿಂದಾಗಿ ಸಾರಿಗೆ ಸಂಸ್ಥೆಗಳ ಮೇಲೆ ರೂ.5900 ಕೋಟಿ ಸಾಲದ ಹೊರೆಯಿದ್ದ ಕಾರಣ, ಬಸ್ಸುಗಳ ನಿರ್ವಹಣೆಗೂ ಆರ್ಥಿಕ ಕೊರತೆಯಾಗಿ ಸಂಸ್ಥೆಗಳು ಕಷ್ಟಕರ ಸ್ಥಿತಿಯಲ್ಲಿದ್ದವು. ನಮ್ಮ ಸರ್ಕಾರ ಬಂದೊಡನೆ 5800 ಹೊಸ ಬಸ್ಸುಗಳ ಸೇರ್ಪಡೆಗೆ ಚಾಲನೆ ನೀಡಿದೆ. ಕಳೆದ ಒಂದು ವರುಷದ ಅವಧಿಯಲ್ಲಿ ನಾಲ್ಕು ನಿಗಮಗಳಲ್ಲಿ 2236 ಕ್ಕೂ ಹೆಚ್ಚು ಹೊಸ ಬಸ್ಸುಗಳ ಸೇರ್ಪಡೆಯಾಗಿವೆ ಎಂದಿದ್ದಾರೆ.
13999 ಹುದ್ದೆಗಳ ನೇಮಕಾತಿ ಪ್ರಕ್ರಿಯೆಗಳಿಗೆ ಈಗಾಗಲೇ ಚಾಲನೆ ನೀಡಲಾಗಿದೆ ಎಂದು ಮಾಹಿತಿ ಹಂಚಿಕೊಂಡಿರುವ ರಾಮಲಿಂಗ ರೆಡ್ಡಿ, ಬಿ.ಜೆ.ಪಿಯ ಅವಧಿಯಲ್ಲಿ ಸಾರಿಗೆ ಸಿಬ್ಬಂದಿಗಳಿಗೆ ಅರ್ಧ ವೇತನ, ಇಡೀ ತಿಂಗಳ ಪೂರ್ಣ ವೇತನ ನೀಡಲಾಗುತ್ತಿತ್ತು. ನಿಗದಿತ ದಿನಾಂಕವೇ ವೇತನಕ್ಕೆ ನಿಗದಿಪಡಿಸಿರಲಿಲ್ಲ, ನಮ್ಮ ಸರ್ಕಾರ ಬಂದ ಮೇಲೆ ಕೆ ಎಸ್ ಆರ್ ಟಿ ಸಿ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳಲ್ಲಿ ತಿಂಗಳ ಮೊದಲ ದಿನವೇ ವೇತನ ಪಾವತಿ ಹಾಗೂ ಇತೃ ಎರಡು ನಿಗಮಗಳಲ್ಲಿ 7 ನೇ ತಾರೀಖಿನಂದು ಪಾವತಿಯಾಗುತ್ತಿದೆ ಎಂದಿದ್ದಾರೆ.
ಬಿ.ಜೆ.ಪಿ ಆಡಳಿತ ನಡೆಸುತ್ತಿರುವ ಉತ್ತರ ಭಾರತದ ರಾಜ್ಯಗಳಲ್ಲಿನ ಸಾರಿಗೆ ಸಂಸ್ಥೆಗಳು ನಮ್ಮಲ್ಲಿಗೆ ಭೇಟಿ ನೀಡುತ್ತಿರುವುದೇ, ನಾವು ಪ್ರಗತಿಯ ಪಥದಲ್ಲಿ ಸಾರಿಗೆ ಸಂಸ್ಥೆಗಳನ್ನು ಕೊಂಡ್ಯೊಯುತ್ತಿದ್ದೇವೆ ಎನ್ನುವುದಕ್ಕೆ ಸಾಕ್ಷಿ ಎಂದಿರುವ ರಾಮಲಿಂಗ ರೆಡ್ಡಿ, ಇಷ್ಟೊಂದು ಸಮಸ್ಯೆಗಳ ಆಗರವೇ ಮೈಎತ್ತಿ ನಿಂತಿರುವಾಗ , ಒಂದು ವರ್ಷದ ಅವಧಿಯಲ್ಲಿಯೇ ಎಲ್ಲವನ್ನು ನಾನು ಸರಿಪಡಿಸಿಬಿಡುತ್ತೇನೆ ಎಂದು ಬುರುಡೆ ಬಿಡಲು ನಾನೇನು ಬಿ.ಜೆ.ಪಿ ಯ ಸ್ವಯಂಘೋಷಿತ ದಕ್ಷ ಮುಖ್ಯಮಂತ್ರಿಯೇ ,ಸಾರಿಗೆ ಸಚಿವನೇ? ಪ್ರಶ್ನಸಿದ್ದಾರೆ.
ಜಿ.ಜೆ.ಪಿಯ ಅದಕ್ಷ ಆಡಳಿತ ಪರಾಮಾವಧಿಯನ್ನು ಸರಿಪಡಿಸಲು ಕನಿಷ್ಠ 5 ವರ್ಷಗಳಾದರೂ ಬೇಕಲ್ಲವೇ? ಎಂದು ಪ್ರಶ್ನಿಸಿರುವ ರಾಮಲಿಂಗ ರೆಡ್ಡಿ, ಬಿ.ಜೆ.ಪಿಯ ಕೇಂದ್ರ ಸರ್ಕಾರದ ಯೋಜನೆಯಡಿ ಎಲೆಕ್ಟ್ರಿಕ್ ಬಸ್ಸುಗಳನ್ನು ಕಾರ್ಯಾಚರಣೆ ಮಾಡುವ ಹೊಣೆ ನಮ್ಮದು,ಆದರೆ ಚಾಲಕ ಖಾಸಗಿಯವರು, ಸಬ್ಸಡಿ ಖಾಸಗಿಯವರಿಗೆ ನೀಡುವುದು. ಈ ರೀತಿಯ ಯೋಜನೆಗಳಿಂದ ಸಾರಿಗೆ ಸಂಸ್ಥೆಗಳು ಅಡಕತ್ತರಿಯಲ್ಲಿ ಸಿಲುಕಿವೆ ಎಂದಿದ್ದಾರೆ.
ಖಾಸಗಿಯವರು ಚಾಲಕರಿಗೆ ವೇತನ ನೀಡದೇ ಇದ್ದರೆ , ಬಿ.ಜೆ.ಪಿಯ ಸ್ವಯಂ ಘೋಷಿತ ದಕ್ಷ ನಾಯಕರುಗಳು ನಮ್ಮನ್ನು ಟೀಕಿಸುತ್ತಾರೆ. ಕೇಂದ್ರ ಸರ್ಕಾರದ ಯೋಜನೆಗಳ ದ್ವಂದ್ವತೆಯನ್ನು ಪ್ರಶ್ನಿಸುವ ಶೂರತ್ವ ಈ ದಕ್ಷ ನಾಯಕರುಗಳಿಗೆ ಎಲ್ಲಿ ಅಡಗಿರುತ್ತದೆ.ಸಾರಿಗೆ ಸಂಸ್ಥೆಗಳ ಖಾಸಗೀಕರಣ ಯಾಕೆ? ಖಾಸಗಿ ಚಾಲಕರು ಯಾಕೆ? ಎಂದಿದ್ದಾರೆ.
ಖಾಸಗಿ ಸಂಸ್ಥೆಯವರಿಗೆ ಯಾಕೆ ಸಬ್ಸಡಿ ನೀಡುತ್ತೀರಾ? ಎಂದು ಪ್ರಧಾನಿಯನ್ನು ಪ್ರಶ್ನಿಸಲಾಗುವುದಿಲ್ಲವೇ? ಸ್ವಯಂಘೋಷಿತ ದಕ್ಷ ನಾಯಕರು ಟ್ಟೀಟ್ ಗಳಿಗಷ್ಟೇ ಸೀಮಿತ ..ಇವರ ದಕ್ಷತೆಗೆ ನನ್ನ ಅನುಕಂಪವಿದೆ. ಇನ್ನಾದರೂ ನಿಲ್ಲಲಿ.. ಸ್ವಯಂ ಘೋಷಿತ ಟ್ಟೀಟ್ ನಾಯಕರ ಎಲುಬಿಲ್ಲದ ನಾಲಗೆ. ಎಂದು ರಾಮಲಿಂಗ ರೆಡ್ಡಿ ಅವರು ಪೋಸ್ಟ್ ಹಾಕಿದ್ದಾರೆ.