ಬೆಂಗಳೂರು: ಪರಿಶಿಷ್ಟ ಜಾತಿಯ ಪ್ರಗತಿ ಮತ್ತು ಉನ್ನತಿಗಾಗಿ ವಿವಿಧ ಯೋಜನೆಗಳನ್ನು ರಾಜ್ಯ ಬಜೆಟ್‍ನಲ್ಲಿ ಸೇರಿಸುವಂತೆ ರಾಜ್ಯ ಬಿಜೆಪಿ ಎಸ್.ಸಿ.ಮೋರ್ಚಾವು ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ.
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಉಪಯೋಜನೆ (ಎಸ್‍ಸಿಪಿ) ಹಾಗೂ ಬುಡಕಟ್ಟು ಉಪ ಯೋಜನೆ (ಟಿಎಸ್‍ಪಿ) ಕಾಯ್ದೆಯ ನಿಯಮಗಳನ್ನು ಇಲಾಖೆಗಳು ಸಂಪೂರ್ಣವಾಗಿ ಪಾಲಿಸಬೇಕು ಹಾಗೂ ಈ ಕಾಯ್ದೆಯ ಕಲಂ 7ಡಿ ಭಾಗವು ಪರಿಶಿಷ್ಟ ಜಾತಿಯ ಅಭಿವೃದ್ಧಿಗೆ ಪೂರಕವಾಗಿಲ್ಲ. ಹಾಗಾಗಿ ಅದನ್ನು ತೆಗೆದುಹಾಕಲು ಮನವಿ ಮಾಡಲಾಯಿತು ಎಂದು ಮೋರ್ಚಾದ ನಾಯಕರು ತಿಳಿಸಿದ್ದಾರೆ.
ವಿದೇಶಗಳಲ್ಲಿ ವಿದ್ಯಾಭ್ಯಾಸ ಮಾಡುವ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಸಂಪೂರ್ಣವಾದ ಹಾಸ್ಟೆಲ್ ಶುಲ್ಕ, ಖರ್ಚನ್ನು ಭರಿಸಬೇಕು. ಪ್ರಸ್ತುತ ಇರುವ 5 ಲಕ್ಷದ ಮಿತಿಯನ್ನು ರದ್ದುಪಡಿಸಬೇಕೆಂದು ಕೋರಲಾಯಿತು. ಸರಕಾರ ಮತ್ತು ವಿಶ್ವವಿದ್ಯಾಲಯಗಳಲ್ಲಿ ಬ್ಯಾಕ್‍ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು. ಪರಿಶಿಷ್ಟ ಜಾತಿಯ ಗುತ್ತಿಗೆದಾರರಿಗೆ 50 ಲಕ್ಷದಿಂದ 1 ಕೋಟಿಯವರೆಗೆ ಇಎಂಡಿ ರಹಿತವಾಗಿ ಸರಕಾರದ ಟೆಂಡರ್‍ಗಳಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಲಾಯಿತು ಎಂದು ನಾಯಕರು ವಿವರಿಸಿದ್ದಾರೆ.
ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಪರಿಶಿಷ್ಟ ಜಾತಿಯ ಉದ್ಯಮಿಗಳಿಗೆ ಹಂಚಿಕೆ ಮಾಡುವ ಕೈಗಾರಿಕಾ ಭೂಮಿಗೆ ಆಯ-ವ್ಯಯದಲ್ಲಿ ಹಣಕಾಸು ಮಿತಿ ವಿಧಿಸದೆ ಅರ್ಜಿ ಸಲ್ಲಿಸುವ ಎಲ್ಲಾ ಉದ್ಯಮಿಗಳಿಗೆ ಭೂಮಿಯನ್ನು ರಿಯಾಯಿತಿ ದರದಲ್ಲಿ ಹಂಚಿಕೆ ಮಾಡುವಂತೆ ಕ್ರಮ ಕೈಗೊಳ್ಳಬೇಕು. ಪರಿಶಿಷ್ಟ ಜಾತಿಯ ಅಭಿವೃದ್ಧಿ ನಿಗಮಗಳಲ್ಲಿ ಫಲಾನುಭವಿಗೆ 5 ಲಕ್ಷ ಸಬ್ಸಿಡಿ ಮೊತ್ತವನ್ನು ಮೊದಲಿನಂತೆ ಮುಂದುವರಿಸಬೇಕೆಂದು ಮನವಿಯಲ್ಲಿ ಕೋರಲಾಗಿದೆ.
ಎಲ್ಲಾ ಭೂರಹಿತ ಪರಿಶಿಷ್ಟ ಜಾತಿಯವರಿಗೆ 2 ಎಕರೆ ಭೂಮಿಯನ್ನು ಹಂಚಿಕೆ ಮಾಡಬೇಕು. ಪರಿಶಿಷ್ಟ ಜಾತಿಯ ಜನರಿಗೆ ಸ್ಮಶಾನ ಭೂಮಿಯನ್ನು ಮಂಜೂರು ಮಾಡುವುದು. ಭೂಮಿ ಖರೀದಿಗೆ ಹಣ ಮೀಸಲಿಡಬೇಕೆಂದು ಕೋರಲಾಯಿತು.
ಈ ಜಾತಿಯ ಪ್ರತಿಭಾವಂತರಿಗೆ ಐಟಿ- ಬಿಟಿ ಸ್ಟಾರ್ಟಪ್ ಸ್ಥಾಪಿಸಲು 1,000 ಕೋಟಿಯನ್ನು ಬಜೆಟ್‍ನಲ್ಲಿ ಮೀಸಲಿಡಬೇಕು. ತೆಲಂಗಾಣ ಮಾದರಿಯಲ್ಲಿ ಪರಿಶಿಷ್ಟ ಜಾತಿಯವರಿಗೆ ಇಂಗ್ಲಿಷ್ ಮಾಧ್ಯಮದ ವಸತಿ ಶಾಲೆಗಳನ್ನು ಎಲ್ಲಾ ತಾಲ್ಲೂಕು ಮಟ್ಟದಲ್ಲಿ ತೆರೆಯಬೇಕು. ಈ ಜಾತಿಗಳ ಪ್ರತಿಭಾವಂತರಿಗಾಗಿ ಐಐಟಿ, ವೈದ್ಯಕೀಯ, ಐಎಎಎಸ್ ಕೋಚಿಂಗ್ ಸೆಂಟರ್ ತೆರೆಯಬೇಕು ಎಂದು ಮನವಿಯಲ್ಲಿ ಸರ್ಕಾರದ ಗಮನಸೆಳೆಯಲಾಗಿದೆ.
ಪರಿಶಿಷ್ಟ ಜಾತಿಯ ದೇವದಾಸಿಯರು, ಪೌರಕಾರ್ಮಿಕರು, ಚರ್ಮ ಕೈಗಾರಿಕೆಯಲ್ಲಿ ತೊಡಗಿರುವ ಬಡ ಕುಟುಂಬಗಳಿಗೆ ಆದ್ಯತೆ ಮೇರೆಗೆ ವಸತಿ ಮಂಜೂರು ಮಾಡಬೇಕು. ಸಮೃದ್ಧಿ ಯೋಜನೆಯ ಮಿತಿಯನ್ನು 10 ಲಕ್ಷದಿಂದ 25 ಲಕ್ಷಕ್ಕೆ ಏರಿಸಬೇಕು. ರಾಜ್ಯದಲ್ಲಿ ಪೌರ ಕಾರ್ಮಿಕರನ್ನು ನೇರ ನೇಮಕಾತಿ ಮಾಡಲು ಅವಕಾಶ ಕಲ್ಪಿಸಬೇಕು. ಪರಿಶಿಷ್ಟ ಜಾತಿಯ ವಕೀಲರಿಗೆ ಮಾಸಿಕ ಭತ್ಯೆ, ಉಚಿತವಾಗಿ ವೈದ್ಯಕೀಯ ವಿಮೆ ಮತ್ತು ಉಚಿತ ಆರೋಗ್ಯ ಯೋಜನೆಗಳಿಗೆ ಒಳಪಡಿಸಬೇಕು. ಅಲ್ಲದೆ, ಈ ಜಾತಿಯವರಿಗಾಗಿ ಬಜೆಟ್‍ಗಳ ಯೋಜನೆಗಳ ಪ್ರಗತಿ ಪರಿಶೀಲನೆಗೆ ನಿವೃತ್ತ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಪರಿಶೀಲನಾ ಸಮಿತಿ ರಚಿಸುವಂತೆ ಕೋರಲಾಯಿತು.
ಸಂಸದ ನಾರಾಯಣಸ್ವಾಮಿ, ಪಕ್ಷದ ಉಪಾಧ್ಯಕ್ಷ ಶಂಕರಪ್ಪ, ಹಿರಿಯ ಅಧಿಕಾರಿಗಳು, ಶಿಕ್ಷಣ ತಜ್ಞರು, ಉದ್ಯಮಿಗಳು, ಸಾಮಾಜಿಕ ಕಾರ್ಯಕರ್ತರು, ಪಕ್ಷದ ಮುಖಂಡರ ಬಜೆಟ್ ಪೂರ್ವಭಾವಿ ಸಭೆ ನಡೆಸಿ ಬಳಿಕ ಸಿಎಂಗೆ ಈ ಮನವಿ ಸಲ್ಲಿಸಲಾಗಿದೆ ಎಂದು ಮೋರ್ಚಾದ ಮುಖಂಡರು ತಿಳಿಸಿದ್ದಾರೆ.
ಕರುಣಾಕರ ಖಾಸಲೆ
ರಾಜ್ಯ ಸಂಚಾಲಕರು
ಮಾಧ್ಯಮ ವಿಭಾಗ