ಮೈಸೂರು: ಮಂಗಳೂರಿನಲ್ಲಿ ನಡೆಯುತ್ತಿರುವ ಅಷ್ಟಮಂಗಲ ಪ್ರಶ್ನೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಅಷ್ಟಮಂಗಲ ಪ್ರಶ್ನೆಗಿಂತ ಎಲ್ಲಾ ತೀರ್ಮಾನ ಆಗುವುದು ಕೇಶವ ಕೃಪಾದಲ್ಲಿ. ಅಲ್ಲಿಂದ ಬರುವ ಸಂದೇಶಗಳನ್ನು ಬಿಜೆಪಿಯವರು ಪಾಲಿಸುತ್ತಾರೆ ಎಂದು ಟೀಕಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ರೀತಿಯ ವಾತಾವರಣದಿಂದ ದೇಶಕ್ಕೆ ಮುಂದೆ ಉತ್ತಮ ಭವಿಷ್ಯ ಇಲ್ಲ ಎಂದರು. ಇನ್ನೂ ಒಂದು ವರ್ಷ ಈ ತರದ ಬರವಣಿಗೆಗಳು ನಡೆಯುತ್ತಿರುತ್ತವೆ. ದೇಶದ ಶಾಂತಿ, ಸಾಮರಸ್ಯ ಮತ್ತಷ್ಟು ಹದಗೆಡುವ ಆತಂಕ ಎದುರಾಗಿದೆ ಎಂದು ಹೆಚ್ಡಿಕೆ ಕಳವಳ ವ್ಯಕ್ತಪಡಿಸಿದರು.
ಬಿಜೆಪಿಗೆ ತಿರುಗುಬಾಣ
ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರಿಗೆ ಮೇಲ್ಮನೆ ಟಿಕೆಟ್ ತಪ್ಪಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ಯಾವುದೇ ತತ್ವದ ಕಥೆ ಹೇಳಿ ಟಿಕೆಟ್ ಕೊಟ್ಟಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದು ಬಿಜೆಪಿಗೆ ತಿರುಗುಬಾಣವಾಗುವ ಲಕ್ಷಣಗಳು ಕಾಣುತ್ತಿದೆ. ಇದರಿಂದ ಬೇರೆ ಪಕ್ಷಕ್ಕೆ ಲಾಭ ನಷ್ಟದ ಪ್ರಶ್ನೆ ಇಲ್ಲ. ಆದರೆ ಸರ್ಕಾರದ ಮೇಲೆ ಇದು ಗಂಭೀರ ಪರಿಣಾಮ ಬೀರಬಹುದು ಎಂದು ಭವಿಷ್ಯ ನುಡಿದರು. ಆಡಳಿತದ ಮೇಲು ಕೆಟ್ಟ ಪರಿಣಾಮ ಬೀರುವ ಲಕ್ಷಣ ಕಾಣುತ್ತಿದೆ. ಬಿಜೆಪಿಯಲ್ಲಿ ಗುಂಪುಗಾರಿಕೆಗೆ ಇನ್ನು ಹೆಚ್ಚು ಅವಕಾಶವಾಗಬಹುದು ಎಂದು ಹೇಳಿದರು.













































































