ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ದ ಪಂಚಮಸಾಲಿ ಲಿಂಗಾಯತ ಸಮುದಾಯ ರಣಕಹಳೆ ಮೊಳಗಿಸಿದೆ. ಕೂಡಲಸಂಗಮದ ಐಕ್ಯಮಂಟಪದ ಆವರಣದಲ್ಲಿ ‘ನಿರಂತರ ಧರಣಿ ಸತ್ಯಾಗ್ರಹ’ ಆರಂಭವಾಗಿದ್ಸು, ಬಿಜೆಪಿಯ ಫೈರ್ ಬ್ರಾಂಡ್ ನಾಯಕ ಬಾನಗೌಡ ಪಾಟೀಲ್ ಯತ್ನಾಳ್ ಭಾನುವಾರ ಚಾಲನೆ ನೀಡಿದ್ದಾರೆ.
ಪಂಚಮಸಾಲಿ ಸತ್ಯಾಗ್ರಹವನ್ನು ಮಕ್ಕಳಿಗೆ ಮಾಲಾರ್ಪನೆ ಮಾಡುವ ಮೂಲಕ ಚಾಲನೆ ನೀಡಲಾಯಿತು. ವಿಜಯಪುರ ಹಾಗೂ ಅಧ್ಯಕ್ಷರು ಮೀಸಲಾತಿ ಹೋರಾಟ ಸಮಿತಿಯ ಅಧ್ಯಕ್ಷರೂ ಆದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಕೂಡಲಸಂಗಮದ ಐಕ್ಯಮಂಟಪದ ಆವರಣದಲ್ಲಿ ‘ನಿರಂತರ ಧರಣಿ’ ಸತ್ಯಾಗ್ರಹದಲ್ಲಿ ಮಾತನಾಡಿ ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ದವೇ ವಾಗ್ದಾಳಿ ನಡೆಸಿ ಸಮುದಾಯದಲ್ಲಿ ಸಂಚಲನ ಮೂಡಿಸಿದರು.
ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದಿಂದ ವಿಶ್ವಗುರು ಬಸವಣ್ಣನವರ ಐಕ್ಯ ಮಂಟಪಕ್ಕೆ ಪಾದಯಾತ್ರೆ ನಡೆಸಿದರು. ಐಕ್ಯಮಂಟಪ ಹಾಗೂ ಕೂಡಲಸಂಗಮೇಶ್ವರ ದರ್ಶನ ನಂತರ ದೇವಾಲಯದ ಆವರಣದಲ್ಲಿ ಧರಣಿ ಸತ್ಯಾಗ್ರಹ ಆರಂಭವಾಯಿತು. ಜಗದ್ಗುರು ಬಸವ ಮೃತ್ಯುಂಜಯ ಸ್ವಾಮೀಜಿ ಸಾನಿಧ್ಯದಲ್ಲಿ, ಪಂಚಮಸಾಲಿ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಸಹಿತ ಹಲವಾರು ಪ್ರಮುಖರ ಉಪಸ್ಥಿತಿಯಲ್ಲಿ ಈ ನಿರಂತರ ಧರಣಿ ಸತ್ಯಾಗ್ರಹ ಆರಂಭಗೊಂಡಿದೆ.
ಸಿಎಂ ಬೊಮ್ಮಾಯಿ ಸರ್ಕಾರವು ಕೊಟ್ಟ ಮಾತು ತಪ್ಪಿರುವುದಕ್ಕಾಗಿ ಹಾಗು ಸಮಾಜವು ಕೊಟ್ಟ ಅಂತಿಮ ಗಡುವು ಮುಗಿದ ಹಿನ್ನೆಲೆಯಲ್ಲಿ ಈ ಸತ್ಯಾಗ್ರಹ ಅರಂಭವಾಗಿದೆ. ಮಕ್ಕಳ ಶಿಕ್ಷಣ ಹಾಗೂ ವಿಧ್ಯಾರ್ಥಿಗಳ ಉದ್ಯೋಗಕ್ಕಾಗಿ ಲಿಂಗಾಯತ ಪಂಚಮಸಾಲಿಗೌಡ, ಮಲೆಗೌಡ, ದೀಕ್ಷಾ ಲಿಂಗಾಯತರಿಗೆ ರಾಜ್ಯ ಸರ್ಕಾರ 2ಎ ಹಾಗೂ ಲಿಂಗಾಯತ ಎಲ್ಲಾ ಸಮಾಜಗಳಿಗೆ ಕೆಂದ್ರ ಸರ್ಕಾರ ಒಬಿಸಿ ಮೀಸಲಾತಿಗೆ ಸೇರ್ಪಡೆಗೊಳಿಸುವಂತೆ ಹಕ್ಕೊತ್ತಾಯ ಮಂಡಿಸಿ ಪಂಚಹಂತದ ಚಳುವಳಿ ಈ ಮೂಲಕ ಆರಂಭವಾಗಿದೆ.
ಈ ಸತ್ಯಾಗ್ರಹದಲ್ಲಿ ಮಾಜಿ ಶಾಸಕ ಎಚ್ ಎಸ್ ಶಿವಶಂಕರ ಮೀಸಲಾತಿ ಚಳುವಳಿ ಪಾದಯಾತ್ರೆ ಸ್ವಾಗತ ಸಮಿತಿಯ ಮಹಾ ಪ್ರಧಾನ ಕಾರ್ಯದರ್ಶಿ ನಂದಿಹಳ್ಳಿ ಹಾಲಪ್ಪ ಕೂಡಾ ಸಾಥ್ ನೀಡಿದ್ದಾರೆ. ಅ.ಭಾ.ಲಿಂ.ಪಂಚಮಸಾಲಿ ಟ್ರಸ್ಟ್ , ಯವ ಘಟಕ, ಪಂಚ ಸೇನಾ, ಮಹಿಳಾ ಚನ್ನಮ್ಮನ ಬಳಗ, ರೈತ ಘಟಕ, ಎಲ್ ಪಿ ವಿ ಪಿ ಘಟಕ, ವೈದ್ಯಕೀಯ ಘಟಕ, ಸಾಮಾಜಿಕ ಜಾಲತಾಣ ಘಟಕ, ಐಟಿಬಿಟಿ ಘಟಕ, ಸಾಹಿತ್ಯ ಘಟಕ, ಕಾನೂನು ಘಟಕ, ದಾಸೊಹ ಘಟಕ ವಿವಿಧ ರಾಷ್ಟ್ರೀಯ, ರಾಜ್ಯ, ಜಿಲ್ಲಾ , ತಾಲೂಕು, ನಗರ ಘಟಕಗಳ ಪದಾಧಿಕಾರಿಗಳು ಈ ಹೋರಾಟದಲ್ಲಿ ಭಾಗವಹಿಸಿದ್ದರು.