ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಕ್ಷಣವೇ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ರಾಜೀನಾಮೆ ಪಡೆಯಬೇಕೆಂದು ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಆಗ್ರಹಿಸಿದ್ದಾರೆ.
ಜನಪ್ರತಿನಿಧಿಗಳ ನ್ಯಾಯಾಲಯದ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಚೆಕ್ ಬೌನ್ಸ್ ಆದ ಹಿನ್ನೆಲೆಯಲ್ಲಿ ಮಧು ಬಂಗಾರಪ್ಪ ಅವರಿಗೆ ಕೋರ್ಟ್ 6 ಕೋಟಿ 96 ಲಕ್ಷದ 70 ಸಾವಿರ ದಂಡ ವಿಧಿಸಿದೆ. ದಂಡ ಕಟ್ಟಲು ತಪ್ಪಿದರೆ 6 ತಿಂಗಳ ಸೆರೆವಾಸ ಅನುಭವಿಸಬೇಕು ಎಂದು ತೀರ್ಪಿನಲ್ಲಿ ಆದೇಶಿಸಲಾಗಿದೆ. ಇಂಥ ಹಿನ್ನೆಲೆಯಿರುವ ಸಚಿವರು ಶಿಕ್ಷಣ ಇಲಾಖೆಗೆ ಕಪ್ಪುಚುಕ್ಕಿ ಎಂದು ಹೇಳಿದ್ದಾರೆ.
ಇಂತಹಾ ಸಚಿವರು ಶಿಕ್ಷಣ ಇಲಾಖೆಯನ್ನು ಮುನ್ನಡೆಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿರುವ ರವಿಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಕ್ಷಣವೇ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ರಾಜೀನಾಮೆ ಪಡೆಯಬೇಕೆಂದು ಆಗ್ರಹಿಸಿದ್ದಾರೆ.






















































