ನವದೆಹಲಿ: ನಾಡಿನೆಲ್ಲೆಡೆ ನೂತನ ವರ್ಷ ‘2024’ನ್ನು ಸಂಭ್ರಮದಿಂದ ಬರಮಾಡಿಕೊಳ್ಳಲಾಗಿದೆ. ದೇಶಾದ್ಯಂತ ನೂತನ ವರ್ಷದ ಸಡಗರ ಆವರಿಸಿದೆ. ಬೆಂಗಳೂರು ಸಹಿತ ಕರುನಾಡಿನಲ್ಲೂ ಹೊಸ ವರ್ಷಾಚರಣೆ ಜನೋತ್ಸವ ಎಂಬಂತೆ ಕಂಡುಬರುತ್ತಿದೆ.
ಬೆಂಗಳೂರು, ಮಂಗಳೂರು, ಮೌಲಿಸೋರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ ಸೇರಿದಂತೆ ವಿವಿಧ ನಗರಗಳಲ್ಲಿ ಹಬ್ಬದ ರೀತಿಯಲ್ಲಿ ನೂತನ ವರ್ಷದ ಸಡಗರ ಕಂಡುಬಂದಿದೆ.
ವಿವಿಧ ಪಂಚತಾರಾ ಹೋಟೆಲ್’ಗಳಲ್ಲಿ ವಿಶೇಷ ಕಾರ್ಯಕ್ರಮಗಳು ಆಯೋಜಿತವಾಗಿವೆ. ವಿವಿಧ ಕ್ಲಬ್’ ಸಂಘ-ಸಂಸ್ಥೆಗಳೂ ನೂತನ ವರ್ಷಾಚರಣೆ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಸಾಂಸ್ಕೃತಿಕ ಕಾರ್ಯಕ್ರಮಗಳೂ ಈ ಸಡಗರವನ್ನು ದುಪ್ಪಟ್ಟುಗೊಳಿಸಿತ್ತು.
ಡಿಸೇಂಬರ್ 31ರ ಮಧ್ಯರಾತ್ರಿ 12 ಗಂಟೆಯಾಗುತ್ತಿದ್ದಂತೆಯೇ ಎಲ್ಲೆಲ್ಲೂ ಜಯ ಘೋಷದೊಂದಿಗೆ ನೂತನ ವರ್ಷವನ್ನು ಬರಮಾಡಿಕೊಂಡ ಕ್ಷಣ ಅಪೂರ್ವವೆನಿಸಿತು.
ಈ ನಡುವೆ ಹೊಸ ವರ್ಷದಂದು ರಾಜ್ಯದ ಜನತೆ ದೇವರ ಮೊರೆ ಹೋಗಿದ್ದಾರೆ. ವರ್ಷದ ಮೊದಲ ದಿನದಂದು ಬಹುತೇಕ ದೇವಾಲಯಗಳು ಭಕ್ತ ಸಾಗರದಿಂದ ತುಂಬಿವೆ. ದೇವಾಲಯಗಳಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಹೊಸ ವರ್ಷದ ಶುಭಾಶಯಗಳ ವಿನಿಮಯವೂ ಭರ್ಜರಿಯಾಗಿ ಸಾಗಿವೆ.