ಬೆಂಗಳೂರು: ರಾಜ್ಯದ ಮುಜರಾಯಿ ವಲಯದಲ್ಲಿ ಅಮೂಲಾಗ್ರ ಬದಲಾವಣೆಗೆ ಕ್ರಮ ಕೈಗೊಂಡಿರುವ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ, ಇದೀಗ ಬೇಸಿಗೆ ಸಂದರ್ಭದಲ್ಲಿ ದೇಗುಲಗಳಿಗೆ ಭೇಟಿ ನೀಡುವ ಭಕ್ತರ ಅನುಕೂಲಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಸಚಿವರ ನಿರ್ದೇಶನದ ಹಿನ್ನೆಲೆಯಲ್ಲಿ ಸುತ್ತೋಲೆ ಹೊರಡಿಸಿರುವ ಮುಜರಾಯಿ ಆಯುಕ್ತರು, ರಾಜ್ಯದ ದೇವಾಲಯಗಳಲ್ಲಿ ಭಕ್ತರ ಅನುಕೂಲಕ್ಕಾಗಿ ಪೆಂಡಾಲ್ ಹಾಕಬೇಕು, ಕುಡಿಯುವ ನೀರಿನ ವ್ಯವಸ್ಥೆ ಸಹಿತ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ, ಮುಜರಾಯಿ ಇಲಾಖೆಯ ಅಧಿಕಾರಿಗಳಿಗೆ ಹಾಗೂ ದೇವಾಲಯಗಳ ಆಡಳಿತ ಮಂಡಳಿಗಳಿಗೆ ಸೂಚಿಸಿದ್ದಾರೆ.
ಸುತ್ತೋಲೆಯಲ್ಲಿ ಏನಿದೆ?
ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಬಹುತೇಕ ಪ್ರಮುಖ ಅಧಿಸೂಚಿತ ದೇವಾಲಯಗಳಲ್ಲಿ ಬೇಸಿಗೆ ಕಾಲದ ಸಂದರ್ಭ ರೂಢಿ ಮತ್ತು ಸಂಪ್ರದಾಯಗಳು ಬಹಳ ಹಿಂದಿನಿಂದಲೂ ಜಾರಿಯಲ್ಲಿವೆ. ಕರ್ನಾಟಕ ರಾಜ್ಯ ಸರ್ಕಾರವು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಂತಹ “ಶಕ್ತಿ ಯೋಜನೆ”ಯನ್ನು ಜಾರಿಗೆ ತಂದಿರುವುದರಿಂದ ಹಾಗೂ ಈ ಸಮಯಗಳಲ್ಲಿ ಶಾಲೆ ಮತ್ತು ಕಾಲೇಜುಗಳ ರಜೆಯಿಂದಾಗಿ ಬಹಳ ದೂರದ ಊರುಗಳಿಂದ, ಜಿಲ್ಲೆಗಳಿಂದ ಹಾಗೂ ಇತರೆ ರಾಜ್ಯಗಳಿಂದ ಮಾತ್ರವಲ್ಲದೇ ವಿದೇಶಗಳಿಂದಲೂ ಸಹ ಭಕ್ತಾದಿಗಳು ಮತ್ತು ಯಾತ್ರಾರ್ಥಿಗಳು ದೇವಾಲಯಗಳಿಗೆ ಭೇಟಿ ನೀಡುವುದು ಗಮನಾರ್ಹವಾಗಿದೆ.
ಆದ್ದರಿಂದ, ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಅಧಿಸೂಚಿತ ದೇವಾಲಯಗಳಲ್ಲಿ ಬೇಸಿಗೆ ಕಾಲದಲ್ಲಿ ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ದೇವರ ದರ್ಶನಕ್ಕೆ ನಿಲ್ಲುವ ಸರತಿ ಸಾಲಿನಲ್ಲಿ ಸೂಕ್ತ ನೆರಳಿನ ವ್ಯವಸ್ಥೆಯನ್ನು ಹಾಗೂ ಭಕ್ತಾದಿಗಳು ನೆರಳಿನಲ್ಲಿ ಕುಳಿತು ವಿಶ್ರಮಿಸಿಕೊಳ್ಳಲು ಅನುಕೂಲವಾಗುವಂತೆ ಅಗತ್ಯಕ್ಕೆ ತಕ್ಕಂತೆ ಲಭ್ಯ ಸ್ಥಳಾವಕಾಶದಲ್ಲಿ ತಾತ್ಕಾಲಿಕ ಪಂಡಾಲ್ ವ್ಯವಸ್ಥೆಯನ್ನು ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸುವುದಕ್ಕೆ ದಾನಿಗಳು ಮುಂದೆ ಬಂದಲ್ಲಿ ಅವರಿಗೆ ಅವಕಾಶ ಮಾಡಿಕೊಡಬೇಕು. ಒಂದು ವೇಳೆ ಯಾರು ದಾನಿಗಳು ಮುಂದೆ ಬರದ ಪಕ್ಷದಲ್ಲಿ ಇದಕ್ಕೆ ತಗಲುವ ವೆಚ್ಚವನ್ನು ದೇವಾಲಯದ ನಿಧಿಯಿಂದ ನಿಯಮಾನುಸಾರ ಭರಿಸಲು ಜರೂರಾಗಿ ಕ್ರಮ ಕೈಗೊಳ್ಳಲು ಆಯುಕ್ತರು ಆದೇಶಿಸಿದ್ದಾರೆ. .