ಮಂಗಳೂರು: ಸಮುದ್ರ ಸೇತು-2 ಕಾರ್ಯಾಚರಣೆ ಮೂಲಕ ನೌಕಾಪಡೆಯ ಐಎನ್‌ಎಸ್ ತಲ್ವಾರ್ ಹಡಗಿನಲ್ಲಿ ಬಹ್ರೈನ್‌ನಿಂದ 40 ಮೆಟ್ರಿಕ್ ಟನ್ ಆಕ್ಸಿಜನ್ ಮಂಗಳೂರಿಗೆ ತರಲಾಗಿದೆ. ಅನೇಕ ದಿನಗಳಿಂದ ನಿರೀಕ್ಷಿಸಲಾಗುತ್ತಿದ್ದ ಜೀವವಾಯು ಬುಧವಾರ ನವಮಂಗಳೂರು ಬಂದರು ತಲುಪಿದೆ.
ಬಹ್ರೈನ್‌ನ ಮನಾಮಾ ಬಂದರಿನಿಂದ ಹೊರಟ ಹಡಗಿನಲ್ಲಿ ಬಂದಿರುವ ಆಕ್ಸಿಜನ್ ಇದೀಗ ಜಿಲ್ಲಾಡಳಿತಕ್ಕೆ ಹಸ್ತಾಂತರಗೊಂಡಿದೆ.
ಎರಡು ಕ್ರಯೋಜೆನಿಕ್ ಐಸೋ ಕಂಟೈನರ್‌ಗಳಲ್ಲಿ ಆಕ್ಸಿಜನ್ ಟ್ಯಾಂಕರ್‌ಗಳನ್ನು ಹೇರಿಕೊಂಡು ಈ ಹಡಗು ಮಂಗಳೂರಿನ ಪಣಂಬೂರಿನಲ್ಲಿರುವ ಬಂದರಿಗೆ ತಲುಪಿದ ಕೂಡಲೇ ಅನ್‌ಲೋಡ್ ಮಾಡುವ ಪ್ರಕ್ರಿಯೆ ಆರಂಭಿಸಲಾಗಿತ್ತು. ಟ್ಯಾಂಕರ್‌ಗಳನ್ನು ಬೃಹತ್ ಕ್ರೇನ್‌ಗಳ ಮೂಲಕ ಲಾರಿಗಳಿಗೆ ಲೋಡ್ ಮಾಡಿ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಗಿದೆ ಎಂದು ಮೂಲಗಳಿ ತಿಳಿಸಿವೆ.