ಮಂಗಳೂರು: ಕರಾವಳಿಯ ಬಿಜೆಪಿ ಭದ್ರಕೋಟೆಯ ನಡುವೆ ಕಾಂಗ್ರೆಸ್ ಅಧಿಪತ್ಯದ ಏಕೈಕ ಕ್ಷೇತ್ರ ‘ಮಂಗಳೂರು’ ಇದೀಗ ಕಮಲ-ಕೈ ಕಾಳಗದಿಂದಾಗಿ ಎಲ್ಲರ ಕುತೂಹಲದ ಕೇಂದ್ರ ಬಿಂದುವಾಗಿದೆ. ಈ ಜಿದ್ದಾಜಿದ್ದಿನ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷವು ಕ್ಷೇತ್ರವನ್ನು ಈ ಬಾರಿ ಉಳಿಸಿಕೊಳ್ಳುವುದು ಖಚಿತವೇ ಎಂಬ ಲೆಕ್ಕಾಚಾರ ಸಾಗಿದೆ.
ಮಂಗಳೂರು ವಿಧಾನಸಭಾ ಕ್ಷೇತ್ರವಾಗಿದ್ದರೂ ಇದು ಈಗಿನ್ನೂ ‘ಉಳ್ಳಾಲ’ ಎಂದೇ ಗುರುತಾಗಿದೆ. ಕಾಂಗ್ರೆಸ್ ಹುರಿಯಾಳು ಯು.ಟಿ.ಖಾದರ್ ಅವರು ಪುನರಾಯ್ಕೆ ಬಯಸಿ ಅಖಾಡಕ್ಕಿಳಿದಿದ್ದರೆ, ಬಿಜೆಪಿಯಿಂದ ಸತೀಶ್ ಕುಂಪಲ ಅವರು ಪ್ರಬಲ ಪೈಪೋಟಿ ಒಡ್ಡಿದ್ದಾರೆ. ಈ ಕ್ಷೇತ್ರವು ಮುಸ್ಲಿಂ ಮತದಾರರ ಪ್ರಾಬಲ್ಯದ ಕ್ಷೇತ್ರವಾಗಿದ್ದರೂ SDPI ಒಡ್ಡಿರುವ ಪ್ರಬಲ ಸವಾಲು ಕಾಂಗ್ರೆಸ್ ಪಕ್ಷಕ್ಕೆ ತಲೆನೋವು ತಂದಿದೆ. ಬಹುಪಾಲು ಮುಸ್ಲಿಂ ಮತಗಳನ್ನು SDPI ಅಭ್ಯರ್ಥಿ ರಿಯಾಜ್ ಫರಂಗಿಪೇಟೆ ಅವರು ಕಬಲಿಸಿದರೆ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗುವುದು ಖಚಿತ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ. ಈ ಸಂಧಿಕಾಲದಲ್ಲಿ ಅಲ್ಪಸಂಖ್ಯಾತರ ಮತಗಳು ಚದುರಿ ಹೋಗುವುದನ್ನು ತಡೆಯಲು ಕಾಂಗ್ರೆಸ್ ಪಕ್ಷದ ಮುಸ್ಲಿಂ ನಾಯಕರು ಭಾರೀ ಕಸರತ್ತು ನಡೆಸುತ್ತಿದ್ದಾರೆ. ಅದರಲ್ಲೂ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಜಿ.ಎ.ಬಾವಾ ಅವರ ಪ್ರವಾಸ ಕುತೂಹಲದ ಕೇಂದ್ರಬಿಂದುವಾಗಿದೆ.
ಉಳ್ಳಾಲದಲ್ಲಿ ಯು.ಟಿ.ಖಾದರ್ ಅವರ ಗೆಲುವಿನ ಅಭಿಯಾನ ಮುಂದುವರಿಯಲು ಸಾಥ್ ನೀಡಿರುವ ಕೆಪಿಸಿಸಿ ಕಾರ್ಯದರ್ಶಿ ಜಿ.ಎ.ಬಾವಾ, ಯುವಕರ ಜೊತೆ ಮನೆ ಮನೆ ಭೇಟಿ ಕೈಗೊಂಡು ಮುಸ್ಲಿಂ ಮತಗಳನ್ನು ಭದ್ರಗೊಳಿಸುವ ಪ್ರಯತ್ನ ಮಾಡಿದ್ದಾರೆ. ಅಸಮಾಧಾನಿತ ಮುಸ್ಲಿಂ ಯುವಕರ ಜೊತೆಗಿನ ಸಂಧಾನಕ್ಕೆ ಅವರು ಆದ್ಯತೆ ನೀಡಿದ್ದಾರೆ. ಈ ಭಾಗದಲ್ಲಿ ಪೊಲೀಸ್ ಆಧಿಕಾರಿಯಾಗಿ ಕೆಲಸ ಮಾಡಿದ್ದರಿಂದ ಈ ಕ್ಷೇತ್ರದ ನಾಡಿಮಿಡಿತ ತಿಳಿದಿದ್ದರಿಂದ ಅವರ ಪ್ರಯತ್ನ ಕಾಂಗ್ರೆಸ್ ಪಕ್ಷಕ್ಜೆ ವರದಾನ ಎಂಬುದು ಸ್ಥಳೀಯ ಮುತ್ಸದ್ದಿ ಅಭಿಪ್ರಾಯ.
ಉಳ್ಳಾಲದಲ್ಲಿ ಖಾದರ್ ಉಳಿದಿದೆಯೇ..?
ಈ ನಡುವೆ, ಯು.ಟಿ.ಖಾದರ್ ಯಾಕೆ ಗೆಲ್ಲಬೇಕು ಎಂಬ ಬಗ್ಗೆ ಯುವಕರ ಪ್ರಶ್ನೆಗಳಿಗೆ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿರುವ ಜಿ.ಎ.ಬಾವಾ, ಈವರೆಗೂ ಶಾಸಕರಾಗಿರುವ ಯು.ಟಿ.ಖಾದರ್ ಮಂಗಳೂರು ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಿದ್ದಾರೆ. ಸಚಿವರಾಗಿದ್ದಾಗಲೂ ಉತ್ತಮ ಕೆಲಸ ಮಾಡಿದ್ದಾರೆ. ಕರಾವಳಿಯನ್ನು ಪ್ರತಿನಿಧಿಸುತ್ತಿರುವ ಪ್ರಭಾವಿ ಅಲ್ಪಸಂಖ್ಯಾತ ನಾಯಕರ ಪೈಕಿ ಪ್ರಮುಖರಾಗಿರುವ ಖಾದರ್ ಅವರು ಈ ಬಾರಿ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬಂದರೆ ಮತ್ತೊಮ್ಮೆ ಪ್ರಭಾವಿ ಖಾತೆಯನ್ನು ನಿರ್ವಹಿಸಬಲ್ಲರು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಯು.ಟಿ.ಖಾದರ್ ಅವರು ಸಾಂಪ್ರದಾಯಿಕ ಎದುರಾಳಿ ಪಕ್ಷಗಳ ಕಾರ್ಯಕರ್ತರಿಗೂ ಪ್ರಿಯವಾದ ನಾಯಕ. ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲೂ ಭಾಗವಹಿಸಿ ಮುಂಚೂಣಿಯಲ್ಲಿರುತ್ತಾರೆ. ಇಂತಹಾ ಜನಾನುರಾಗಿ ನಾಯಕ ವಿಧಾನಸಭೆಯಲ್ಲೂ ಹಲವಾರು ವಿಚಾರಗಳನ್ನು ಮಂಡಿಸಿರುವ, ಭಾಗಿಯಾಗಿರುವ ಚರ್ಚೆಗಳೂ ರಾಜ್ಯದ ಗಮನಸೆಳೆದಿದೆ ಎಂದು ಜಿ.ಎ.ಬಾವಾ ಹೇಳುತ್ತಾರೆ.
ಇದೆಲ್ಲದರ ನಡುವೆ, ಮುಸ್ಲಿಂ ಪ್ರಾಬಲ್ಯದ ಈ ಕ್ಷೇತ್ರಕ್ಕೆ ನೆರೆ ರಾಜ್ಯಗಳ ಮತಾಂಧರು ನುಗ್ಗಿ ಜನರ ನೆಮ್ಮದಿ ಕೆಡಿಸುವ ಸಂಚು ರೂಪಿಸಿದಾಗಲೂ ಸ್ಥಳೀಯರ ಜೊತೆಗಿದ್ದು, ಅವರನ್ನು ಸಮಾಜಮುಖಿಯಾಗಿ ಮುನ್ನಡೆಯಲು ಖಾದರ್ ಸಹಕರಿಸಿದ್ದಾರೆ ಎಂದು ಜಿ.ಎ.ಬಾವಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ‘ಗ್ಯಾರಂಟಿ’ ಯೋಜನೆಗಳು ವರದಾನವಾಗಿದ್ದರೆ, ಉಳ್ಳಾಲ ಕ್ಷೇತ್ರದಲ್ಲಿ ಯುಟ.ಟಿ.ಖಾದರ್ ಅವರಿಗೆ ತನ್ನ ಜನಹಿತ ನಡೆಯೇ ಶ್ರೀರಕ್ಷೆಯಾಗಿದೆ ಎಂದು ಮುತ್ಸದ್ದಿ ನಾಯಕ ಜಿ.ಎ.ಬಾವಾ ಬಣ್ಣಿಸಿದ್ದಾರೆ.