ಮಂಗಳೂರು: ಬಂದರು ನಗರಿ ಮಂಗಳೂರು ಹೊರವಲಯದ ಮಳಲಿ ಬಳಿ ಮಸೀದಿಯೊಳಗೆ ದೇವಾಲಯವಿದೆ ಎಂಬ ವಿವಾದಕ್ಕೆ ಇದೀಗ ರೋಚಕತೆಯ ತಿರುವು ಸಿಕ್ಕಿದೆ. ಮಹತ್ವದ ಆದೇಶವೊಂದರಲ್ಲಿ ಮಂಗಳೂರಿನ ನ್ಯಾಯಾಲಯವು ಈ ಮಸೀದಿ ವಿವಾದ ಕುರಿತ ವಿಶ್ವಹಿಂದೂ ಪರಿಷತ್‌ನ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿದೆ.
ಕೆಲವು ತಿಂಗಳ ಹಿಂದೆ ಮಂಗಳೂರು ಹೊರವಲಯದ ಗಂಜಿಮಠ ಸಮೀಪದ ಮಳಲಿ ಬಳಿ ಮಸೀದಿ ನವೀಕರಣ ವೇಳೆ ಪ್ರಾರ್ಥನಾ ಮಂದಿರದ ಒಳ ಕಟ್ಟಡವು ದೇವಾಲಯ ಸ್ವರೂಪದಲ್ಲಿ ಪತ್ತೆಯಾಗಿದೆ. ಇದು ಹಳೇಯ ದೇವಾಲಯವೇ ಇರಬಹುದೆಂಬ ಅನುಮಾನವೂ ವ್ಯಕ್ತವಾಯಿತು. ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ ವಿಶ್ವ ಹಿಂದೂ ಪರಿಷತ್ ಮುಖಂಡರು, ಇದು ಮಸೀದಿಯೇ ಅಥವಾ ದೇಗುಲವೇ ಎಂಬ ಬಗ್ಗೆ ಕೋರ್ಟ್ ಕಮೀಷನ್ ಮೂಲಕ ತನಿಖೆಗೆ ಆಗ್ರಹಿಸಿದರು. ಕೋರ್ಟ್ ಮೊರೆ ಹೋದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮಸೀದಿ ಪರವಾಗಿ ಅರ್ಜಿಯೂ ಸಲ್ಲಿಕೆಯಾಗಿತ್ತು.
ಈ ತಕರಾರು ಅರ್ಜಿ ಕುರಿತು ವಿಚಾರಣೆ ನಡೆಸಿದ ಮಂಗಳೂರಿನ 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಇಂದು ತೀರ್ಮಾನ ಪ್ರಕಟಿಸಿದೆ. ಅದರಂತೆ ಮಳಲಿಯಲ್ಲಿರುವ ಈ ಕಟ್ಟಡವು ಮಸೀದಿಯೇ ಅಥವಾ ದೇಗುಲವೇ ಎಂಬ ಬಗ್ಗೆ ಕೋರ್ಟ್ ಕಮೀಷನರ್ ಮೂಲಕ ತನಿಖೆ ನಡೆಸಬೇಕೆಂಬ ವಿಶ್ವ ಹಿಂದೂ ಪರಿಷತ್‌ನ ಅರ್ಜಿ ಕುರಿತಂತೆ ವಿಚಾರಣೆ ನಡೆಸಲು ಒಪ್ಪಿದೆ. ಈ ಸಂಬಂಧದ ಮಸೀದಿ ಪರವಾದ ಅರ್ಜಿ ವಜಾ ಆಗಿರುವುದರಿಂದಾಗಿ ಹಿಂದೂ ಸಂಘಟನೆಗಳ ಕಾನೂನು ಹೋರಾಟಕ್ಕೆ ಬಲ ಸಿಕ್ಕಿದಂತಾಗಿದೆ.
ಕೋರ್ಟ್ ಬೆಳವಣಿಗೆಯ ಬಗ್ಗೆ ಕರಾವಳಿಯ ಜನರು ತೀವ್ತ ಕುತೂಹಲದಿಂದ ಇದ್ದರು. ಇಂದು ಆದೇಶ ಪ್ರಕಟಿಸಿದ ನ್ಯಾಯಾಧೀಶರಾದ ನಿಖಿತಾ ಎಸ್.ಅಕ್ಕಿ ಅವರು ಮಹತ್ವದ ಆದೇಶ ಪ್ರಕಟಿಸಿದರು.
ಹಿಂದೂ ಕಾರ್ಯಕರ್ತರಾದ ಮನೋಜ್ ಹಾಗೂ ಧನಂಜಯ ಅವರು ಹಿಂದೂ ಸಂಘಟನೆಗಳ ಪರವಾಗಿ ಈ ಕಾನೂನು ಸಮರ ಕೈಗೊಂಡಿದ್ದಾರೆ.
ಅರ್ಜಿದಾರರ ಪರವಾಗಿ ವಕೀಲರಾದ ಚಿದಾನಂದ ಕೆದಿಲಾಯ ಅವರು ವಾದ ಮಂಡಿಸಿದ್ದಾರೆ. ಇದು ಮಸೀದಿಯಾಗಿ ಕಾಣಿಸಿಕೊಂಡಿತ್ತೇ ಹೊರತು ಮಸೀದಿಯಲ್ಲ. ದೇವಾಲಯದ ಒಂದು ಭಾಗವನ್ನು ಕೆಡವಿ ಮಸೀದಿ ಕಟ್ಟಲಾಗಿತ್ತು ಎಂದು ಕೆದಿಲಾಯ ಅವರು ವಾದ ಮಂಡಿಸಿದ್ದಾರೆ.
ಪ್ರಾರ್ಥನಾ ಮಂದಿರದ ಕಟ್ಟಡ ನವೀಕರಣ ಸಂದರ್ಭದಲ್ಲಿ ಅಲ್ಲಿ ದೇವಾಲಯವಿರುವ ಸತ್ಯ ಗೊತ್ತಾಗುತ್ತಿದೆ. ಈ ಬಗ್ಗೆ ಸಮಗ್ರ ತನಿಖೆಯಾದಲ್ಲಿ ನಿಜ ಸಂಗತಿ ಗೊತ್ತಾಗಲಿದೆ ಎಂದು ಚಿದಾನಂದ ಕೆದಿಲಾಯ ಅವರು ಅಭಿಪ್ರಾಯ ಮುಂದಿಟ್ಟಿದ್ದಾರೆ.
ಆದರೆ, ಇದು ಮಸೀದಿಯಾಗಿದ್ದು, ಇದರ ಬಗ್ಗೆ ವಕ್ಫ್ ನ್ಯಾಯಮಂಡಳಿಯಲ್ಲಿ ವಿಚಾರಣೆ ನಡೆಯಬೇಕೇ ಹೊರತು ಸಿವಿಲ್ ನ್ಯಾಯಾಲಯದಲ್ಲಿ ಅವಕಾಶವಿಲ್ಲ ಎಂದಿರುವ ಮಸೀದಿ ಪರ ವಕೀಲರು, ಹಿಂದೂ ಮುಖಂಡರ ಅರ್ಜಿಯನ್ನು ತಿರಸ್ಕರಿಸಬೇಕೆಂದು ವಾದಿಸಿದ್ದಾರೆ.
ಈ ವಿಚಾರದಲ್ಲಿ ಸಮರ್ಥ ವಾದ ಮುಂದಿಟ್ಟಿರುವ ಹಿಂದೂ ಸಂಘಟನೆಗಳ ಪರ ವಕೀಲರಾದ ಚಿದಾನಂದ ಕೆದಿಲಾಯ, ಮಳಲಿ ಬಳಿಯ ಈ ಮಸೀದಿ ಕಟ್ಟಡವಿರುವ ಸ್ಥಳವು ಸರ್ಕಾರಿ ಜಮೀನಾಗಿದೆ. ಈ ಕಟ್ಟಡವು ಹಿಂದೆ ದೇಗುಲವಾಗಿರಬಹುದೆಂಬ ಬಗ್ಗೆ ಸಾಕಷ್ಟು ಪುರಾವೆಗಳು ಇತ್ತೀಚಿನ ಕಾಮಗಾರಿ ಸಂದರ್ಭದಲ್ಲಿ ಸಿಕ್ಕಿವೆ ಎಂದು ನ್ಯಾಯಾಧೀಶರ ಗಮನ ಸೆಳೆದಿದ್ದಾರೆ.
ಜ್ಞಾನವ್ಯಾಪಿ ಮಸೀದಿ ರೀತಿಯಲ್ಲೇ ಈ ಮಸೀದಿ ಇತಿಹಾಸವೂ ಗೋಚರಿಸುತ್ತದೆ. ದೇವಾಲಯದ ಒಂದು ಭಾಗವನ್ನು ಧ್ವಂಸಮಾಡಿ ಜ್ಞಾನವ್ಯಾಪಿ ಮಸೀದಿ ಕಟ್ಟಲಾಗಿದೆಯೋ ಅದೇ ರೀತಿಯಲ್ಲೇ ಮಳಲಿಯ ಮಸೀದಿಯ ಇತಿಹಾಸವೂ ಇರಬಹುದೆಂಬ ನಿದರ್ಶನಗಳು ಕಾಣುತ್ತಿವೆ ಎಂದು ಚಿದಾನಂದ್ ಕೆದಿಲಾಯ ಅವರು ನ್ಯಾಯಾಲಯದ ಗಮನಸೆಳೆದಿದ್ದಾರೆ.
ಈ ಕಟ್ಟಡದ ಸ್ಥಳವನ್ನು ಉತ್ಖನನ ಮಾಡಿದಲ್ಲಿ ಮಾತ್ರ ಸತ್ಯಾಂಶ ಗೊತ್ತಾಗುತ್ತದೆ. ಅಷ್ಟೇ ಅಲ್ಲ, ಅದರೊಳಗಿರುವ ಸ್ಮಾರಕದಂತಿರುವ ವಸ್ತುಗಳನ್ನೂ ಪರಿಶೀಲಿಸುವ ಅಗತ್ಯವಿದೆ. ಹಾಗಾಗಿ ಕೋರ್ಟ್ ಕಮೀಷನರ್ ನೇಮಕ ಮಾಡಿ ತನಿಖೆ ನಡೆಸಬೇಕಿದೆ ಎಂದು ವಕೀಲ ಕೆದಿಲಾಯ ಅವರು ಪ್ರತಿಪಾದಿಸಿದ್ದಾರೆ.
ಈ ಅರ್ಜಿಗಳ ಕುರಿತಂತೆ ವಾದ ಪ್ರತಿವಾದ ಆಲಿಸಿರುವ ನ್ಯಾಯಾಧೀಶರಾದ ನಿಖಿತಾ ಎಸ್.ಅಕ್ಕಿ ಅವರು, ಮಸೀದಿ ಪರ ಸಲ್ಲಿಕೆಯಾಗಿರುವ ಆಕ್ಷೇಪಣಾ ಅರ್ಜಿಯನ್ನು ತಿರಸ್ಕರಿಸಿ, ಮುಂದಿನ ವಿಚಾರಣೆಯನ್ನು ಡಿಸೆಂಬರ್ 8ಕ್ಕೆ ನಿಗದಿಗೊಳಿಸಿದ್ದಾರೆ ಎಂದು ವಕೀಲರಾದ ಚಿದಾನಂದ ಕೆದಿಲಾಯ ಅವರು ಮಾಹಿತಿ ಹಂಚಿಕೊಂಡಿದ್ದಾರೆ.


















































