ಬೆಂಗಳೂರು: ರಾಜ್ಯದಲ್ಲಿ ಮತ್ತೆ ಲಾಕ್ಡೌನ್ ಜಾರಿಯಾಗಲಿದೆಯೇ? ಮಹಾರಾಷ್ಟ್ರ ಮಾದರಿಯಲ್ಲಿ ಜನತಾ ಕರ್ಫ್ಯೂ ಮೂಲಕ ಕಠಿಣ ನಿಯಮ ಜಾರಿಯಾಗಲಿದೆಯೇ? ಈ ರೀತಿಯ ಅಂತೆಕಂತೆಗಳ ಮಾತುಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿವೆ.
ಕೊವಿಡ್ ನಿಯಮಗಳನ್ನು ಅನುಸರಿಸದಿದ್ದರೆ ಲಾಕ್ಡೌನ್ ಜಾರಿಯಾಗಬಹುದು ಎಂದು ಸಚಿವ ಸುಧಾಕರ್ ಇತ್ತೀಚೆಗಷ್ಟೇ ಎಚ್ಚರಿಕೆಯ ಸಂದೇಶ ರವಾನಿಸಿದ್ದರು. ಅನಂತರದ ದಿನಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚುತ್ತಲೇ ಇವೆ. ಅತ್ತ ಮಹಾರಾಷ್ಟ್ರದಲ್ಲಿ ಜನತಾ ಕರ್ಫ್ಯೂ ಘೋಷಿಸಿದ ನಂತರ ಇದೀಗ ಕರ್ನಾಟಕದಲ್ಲೂ ಅಂಥದ್ದೇ ಕ್ರಮ ಜಾರಿಯಾಗುವ ಆತಂಕ ಸಾರ್ವಜನಿಕರನ್ನು ಕಾಡುತ್ತಿದೆ. ಅದರಲ್ಲೂ ಈ ತಿಂಗಳ 18ರಂದು ಸರ್ವಪಕ್ಷ ಸಭೆ ಕರೆಯಲಾಗಿದೆ ಎಂಬ ಸುದ್ದಿಯ ನಂತರ ಈ ರೀತಿಯ ಆತಂಕ ಹೆಚ್ಚಾಗಿದೆ ಎನ್ನುತ್ತಿದ್ದಾರೆ ಸಾರ್ವಜನಿಕರು.
ಸಿಎಂ ನೀಡಿದ ಸುಳಿವು..
ಲಾಕ್ಡೌನ್, ಜನತಾ ಕರ್ಫ್ಯೂ ಬಗ್ಗೆ ಜನರಲ್ಲಿನ ಕುತೂಹಲ ಕುರಿತಂತೆ ಪ್ರತಿಕ್ರಿಯಿಸಿರುವ ಸಿಎಂ ಯಡಿಯೂರಪ್ಪ, ರಾಜ್ಯದಲ್ಲಿ ಲಾಕ್ಡೌನ್ ಜಾರಿಯ ಬಗ್ಗೆ ನಿರ್ಧಾರ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಹಾರಾಷ್ಟ್ರ ಮಾದರಿಯ ಜನತಾ ಕರ್ಫ್ಯೂ ಘೋಷಣೆಯ ಸಾಧ್ಯತೆಗಳನ್ನೂ ಅವರು ತಳ್ಳಿಹಾಕಿದ್ದಾರೆ.
ಬೆಂಗಳೂರಿನಲ್ಲಿಂದು ಈ ಕುರಿತು ಮಾಹಿತಿ ಹಂಚಿಕೊಂಡ ಯಡಿಯೂರಪ್ಪ, ಈ ತಿಂಗಳ 18ರಂದು ಸರ್ವಪಕ್ಷ ಸಭೆ ಕರೆಯಲಾಗಿದೆ. ಅಲ್ಲಿನ ಅಭಿಪ್ರಾಯಗಳನ್ನಾಧರಿಸಿ ಬಿಗಿನಿಯಮಗಳನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದರು. ಲಾಕ್ಡೌನ್, ಜನತಾ ಕರ್ಫ್ಯೂ ನಂತಹಾ ಕ್ರಮಗಳ ಬದಲಾಗಿ ಈಗಿರುವ ನೈಟ್ ಕರ್ಫ್ಯೂ ಕ್ರಮಗಳನ್ನು ಮತ್ತಷ್ಟು ಜುಲ್ಲೆಗಳಿಗೆ ವಿಸ್ತರಿಸುವ ಸುಳಿವನ್ನು ಸಿಎಂ ನೀಡಿದ್ದಾರೆ.