ಬೆಂಗಳೂರು: ಬೊಮ್ಮಾಯಿ ಸರ್ಕಾರದಲ್ಲಿ ಲಿಂಗಾಯರೇ ಬಹುಪಾಲು. ಆ ಸಮುದಾಯಕ್ಕೆ ಸೇರಿದ ಬರೋಬ್ಬರಿ 10 ಮಂದಿ ರಾಜ್ಯ ಮಂತ್ರಿಮಂಡಲದಲ್ಲಿದ್ದಾರೆ. ಆದರೆ ಬಿಜೆಪಿ ಈ ಸತ್ಯವನ್ನು ಮರೆಮಾಚಿದೆ ಎಂದು ಮಾಜಿ ಶಾಸಕರೂ ಆದ ಕೆಪಿಸಿಸಿ ವಕ್ತಾರ ರಮೇಶ್ ಬಾಬು ದೂರಿದ್ದಾರೆ.
ಕರ್ನಾಟಕದ ಬಿಜೆಪಿ ಸರ್ಕಾರ ಮಂತ್ರಿ ಮಂಡಲ ರಚನೆಯಲ್ಲಿ ಸಾಮಾಜಿಕ ನ್ಯಾಯ ಒದಗಿಸಲು ವಿಫಲವಾಗಿದೆ. ಬಿಜೆಪಿ ನಾಯಕರು ರಾಜ್ಯಕ್ಕೆ ಜಾತಿಯ ಸುಳ್ಳು ಮಾಹಿತಿ ನೀಡಿದ್ದಾರೆ. 30 ಜನರ ಸಚಿವ ಸಂಪುಟದಲ್ಲಿ 10 ಜನ ಲಿಂಗಾಯತ ಸಮುದಾಯಕ್ಕೆ ಅವಕಾಶ ನೀಡಿದ್ದಾರೆ. ಮೂರನೇ ಒಂದು ಭಾಗ ಒಂದೇ ಸಮುದಾಯಕ್ಕೆ ನೀಡಿ ಇತರೆ ಸಮುದಾಯಗಳ ಉದ್ದೇಶ ಪೂರ್ವಕವಾಗಿ ಕಡೆಗಣಿಸಲಾಗಿದೆ. ಜೊತೆಗೆ 8 ಜನ ಸಚಿವರು ಮಾತ್ರ ಲಿಂಗಾಯತ ಸಮುದಾಯ ಎಂದು ಸುಳ್ಳು ಹೇಳಿದ್ದಾರೆ ಎಂದು ರಮೇಶ್ ಬಾಬು ಹೇಳಿದ್ದಾರೆ.
ಹಿಂದೆ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದಾಗ ಆ ಸಮುದಾಯದ ಇತರೆ ಯಾರಿಗೂ ಮಂತ್ರಿ ಸ್ಥಾನ ನೀಡದೆ ನೈತಿಕತೆ ಮತ್ತು ಮೌಲ್ಯಗಳನ್ನು ಪ್ರತಿಪಾದನೆ ಮಾಡಿದ್ದರು. ಆದರೆ ಬಸವರಾಜ ಬೊಮ್ಮಾಯಿ ಅವರು ತಮ್ಮನ್ನೂ ಸೇರಿದಂತೆ 10 ಮಂದಿಗೆ ಅವರ ಸಮುದಾಯಕ್ಕೆ ಅವಕಾಶ ನೀಡಿ ರಾಜ್ಯದ ಇತಿಹಾಸಕ್ಕೆ, ಸಾಮಾಜಿಕ ನ್ಯಾಯಕ್ಕೆ ಮೋಸ ಎಸಗಿದ್ದಾರೆ ಎಂದು ರಾಜಕೀಯ ವಿಶ್ಲೇಷಕರೂ ಆದ ರಮೇಶ್ ಬಾಬು ಬಿಜೆಪಿಯ ಲೋಪದತ್ತ ಬೊಟ್ಟುಮಾಡಿದ್ದಾರೆ. .
ಬಿಜೆಪಿ ಸರ್ಕಾರ ರಾಜ್ಯದ ಅಲ್ಪಸಂಖ್ಯಾತ, ಅತಿ ಸಣ್ಣ ಸಮುದಾಯ, ಶೋಷಿತ ಸಮುದಾಯ ಹಾಗೂ ಕಲ್ಯಾಣ ಕರ್ನಾಟಕಕ್ಕೆ ಸಂಚಿನ ಮೂಲಕ ಮೋಸ ಮಾಡಿದೆ. ಸಚಿವ ಸಂಪುಟದ ಜಾತಿ ಹೆಸರಿನ ಸುಳ್ಳು ಮಾಹಿತಿ ನೀಡಿ ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡಿದೆ. ರಾಜ್ಯದ ಇತಿಹಾಸದಲ್ಲೇ ಇಷ್ಟು ಪ್ರಮಾಣದಲ್ಲಿ ಒಂದೇ ಸಮುದಾಯಕ್ಕೆ ಯಾವಾಗಲೂ ಅವಕಾಶ ನೀಡಿರಲಿಲ್ಲ. ಬಿಜೆಪಿಯು ಸಚಿವ ಸಂಪುಟ ವಿಸ್ತರಣೆಯಲ್ಲಿ ಸಾಮಾಜಿಕ ನ್ಯಾಯ ಕೈಬಿಟ್ಟಿದ್ದು, ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಅವರು ಒತ್ತಾಯಿದ್ದಾರೆ.