ಬೆಂಗಳೂರು: ಕಾಂಗ್ರೆಸ್ ಪಕ್ಷದ ‘ಗ್ಯಾರೆಂಟ’ ಬರವಸೆಗಳನ್ನಷ್ಟೇ ಅಲ್ಲ, ರೈತರ ಬಹುಕಾಲದ ಬೇಡಿಕೆಗಳನ್ನು ಈಡೇರಿಸುವ ಬಗ್ಗೆಯೂ ಕ್ರಮ ಕೈಗೊಳ್ಳಿ ಎಂದು ರೈತಸಂಘಟನೆಗಳ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.
ರಾಜ್ಯದ ರೈತ ಮುಖಂಡರ ನಿಯೋಗ ಮಧ್ಯಾಹ್ನ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ವಿಧಾನಸೌಧದ ಕಚೇರಿಯಲ್ಲಿ ಭೇಟಿ ಮಾಡಿ ಅಭಿನಂದಿಸಿತು. ಈ ಸಂದರ್ಭದಲ್ಲಿ ರಾಜ್ಯದ ರೈತರ ಪ್ರಮುಖ ಸಮಸ್ಯೆಗಳ ಬಗೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯಿಸಲಾಯಿತು.
2022 -23ರಲ್ಲಿ ಸಾಲಿನಲ್ಲಿ ರಾಜ್ಯ ಕಬ್ಬು ಬೆಳೆಗಾರ ಸಂಘದಿಂದ 39 ದಿನಗಳು ಕಬ್ಬು ಬೆಳೆಗಾರ ರೈತರು ಸತತ ಹೋರಾಟ ಮಾಡಿದಾಗ ತಾವು ವಿರೋಧ ಪಕ್ಷದ ನಾಯಕರಾಗಿ ಬೆಳಗಾವಿ ವಿಧಾನಸಭೆಯಲ್ಲಿ ಕಬ್ಬುದರ ಏರಿಕೆ ಮಾಡುವಂತೆ ಆಗ್ರಹಿಸಿದಾಗ ರಾಜ್ಯ ಸರ್ಕಾರ ಕಬ್ಬಿನ ಎಫ್‌ಆರ್‌ಪಿ ಹೆಚ್ಚುವರಿ ದರ ಟನ‌್‌ಗೆ 150 ರೂ ನಿಗದಿ ಮಾಡಿ ಆದೇಶ ಹೊರಡಿಸಿದೆ. ಸಕ್ಕರೆ ಕಾರ್ಖಾನೆಗಳು ಈ ಆದೇಶಕ್ಕೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದು, ಅಡ್ವಕೇಟ್ ಜನರಲ್ ಮೂಲಕ ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಮಾಡಿ ಕಬ್ಬು ಬೆಳೆಗಾರರಿಗೆ ಸುಮಾರು 950 ಕೋಟಿ ಹಣ ಕೊಡಿಸಬೇಕು ಎಙದು ಆಗ್ರಹಿಸಿದರು.
ರೈತರು ಕೃಷಿ ಸಾಲ ತೆಗೆದುಕೊಳ್ಳುವಾಗ ರೈತನ ಸಿಬಿಲ್ ಸ್ಕೋರ್ ಪರಿಶೀಲಿಸಿ ಸಾಲ ಕೊಡಬೇಕು ಎನ್ನುವ ನಿಯಮ ಜಾರಿಗೆ ಬಂದಿರುವ ಕಾರಣ ಲಕ್ಷಾಂತರ ರೈತರು ಬ್ಯಾಂಕುಗಳಲ್ಲಿ ಸಾಲ ಸಿಗದೇ ಖಾಸಗಿ ಲೆವಾದೇವಿದಾರದಿಂದದ ದುಬಾರಿ ಬಡ್ಡಿದರದಲ್ಲಿ ಸಾಲ ಪಡೆಯಬೇಕಾಗಿದೆ. ರೈತರ ಮಕ್ಕಳಿಗೆ ವಿದ್ಯಾಭ್ಯಾಸ ಸಾಲವೂ ಸಿಗುತ್ತಿಲ್ಲ ಆದ್ದರಿಂದ ಸಿಬಿಲ್ ಸ್ಕೋರ್ ಮಾನದಂಡ ರದ್ದು ಮಾಡಲು ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದರು.
ಹಿಂದಿನ ಸರ್ಕಾರ ಎಪಿಎಂಸಿ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿರುವುದರಿಂದ ರಹಧಾರಿ ಇಲ್ಲದ ಖಾಸಗಿ ಖರೀದಿದಾರರು ರೈತರ ಉತ್ಪನ್ನಗಳನ್ನು ಖರೀದಿಸಿ ಮೋಸಗೊಳಿಸುತ್ತಿದ್ದಾರೆ. ಯಾವುದೇ ಕಠಿಣ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿರುವುದಿಲ್ಲ. ಎಪಿಎಂಸಿಗಳು ಹಣಕಾಸಿನ ತೊಂದರೆಯಿಂದ ಸಂಕಷ್ಟಕ್ಕೆ ಸಿಲುಕಿವೆ ತಾವು ಹಲವಾರು ಬಾರಿ ನಾವು ಅಧಿಕಾರಕ್ಕೆ ಬಂದರೆ ತಿದ್ದುಪಡಿ ಕಾಯ್ದೆ ರದ್ದು ಮಾಡುತ್ತೇವೆ ಎಂದು ಬಹಿರ೦ಗವಾಗಿ ರಾಜ್ಯದ ರೈತರಿಗೆ ತಿಳಿಸಿದ್ದೀರಿ ಅದರಂತೆ ಕ್ರಮ ಕೈಗೊಳ್ಳಬೇಕ ಎಂದು ಒತ್ತಾಯಿಸಿದರು.
ದೇವರಾಜ್ ಅರಸು ಅವರ ಕಾಲದಲ್ಲಿ ಜಾರಿಗೆ ತಂದಿದ್ದ ಭೂ ಸುಧಾರಣಾ ಕಾಯ್ದೆಯನ್ನು ತಿದ್ದುಪಡಿ ಮಾಡಿ ಜಾರಿಗೆ ತಂದಿರುವುದರಿಂದ ಸಣ್ಣ ಸಣ್ಣ ರೈತರು ಕೃಷಿ ಭೂಮಿ ಕಳೆದುಕೊಳ್ಳುತ್ತಿದ್ದಾರೆ
ಕೃಷಿ ಕ್ಷೇತ್ರ ದುರ್ಬಲಗೊಳ್ಳುತ್ತಿದೆ ಇದರ ವಿರುದ್ಧ ನಾವು ರಾಜ್ಯಾದ್ಯಂತ ಹೋರಾಟ ಮಾಡಿದಾಗ ತಾವು ನಮ್ಮ ಹೋರಾಟಕ್ಕೆ ಬೆಂಬಲ ನೀಡಿ ವಿಧಾನಸಭೆಯಲ್ಲಿ ವಿರೋಧ ಮಾಡಿದ್ದೀರಿ ಅದರಂತೆ ತಾವು ಕೂಡಲೇ ತಿದ್ದುಪಡಿ ಕಾಯ್ದೆ ರದ್ದು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಅವರನ್ನು ಆಗ್ರಹಿಸಿದರು.
ಕೃಷಿ ಪಂಪ್ಸೆಟ್ಟುಗಳ ರೈತರು ಆಧಾರ್ ಲಿಂಕ್ ಮಾಡಬೇಕು. ಇಲ್ಲದಿದ್ದರೆ ಉಚಿತ ವಿದ್ಯುತ್ ನಿಲ್ಲಿಸುತ್ತೇವೆ ಎಂದು ಕೆಇಆರ್‌ಸಿ ಸೂಚನೆ ನೀಡಿದೆ. ಈ ಆದೇಶವನ್ನು ರದ್ದುಗೊಳಿಸಬೇಕು. ರಾತ್ರಿ ವೇಳೆ ರೈತರು ಬೆಳೆಗಳಿಗೆ ನೀರು ಹಾಯಿಸಲು ಹೋಗಿ ಪ್ರಾಣಿಗಳ ದಾಳಿಯಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಹಗಲು ವೇಳೆ ನಿರಂತರ 12 ಗಂಟೆಗಳ ವಿದ್ಯುತ್ ನೀಡಲು ತಾವು ಕ್ರಮ ಕೈಗೊಳ್ಳಬೇಕು. ತೊಗರಿ ಬೆಳೆಗಾರರು ಶೇಕಡ 80ರಷ್ಟು ರೈತರು ತೊಗರಿ ಬೆಳೆಗೆ ನೆಟ್ಟೆ ರೋಗದಿಂದ ಬೆಳೆ ನಷ್ಟ ಅನುಭವಿಸಿದ್ದಾರೆ ಸರ್ಕಾರ ಎಕರೆಗೆ ಕನಿಷ್ಠ 25,000 ಪರಿಹಾರ ನೀಡಬೇಕು. ರಾಜ್ಯಾದ್ಯಂತ ಕಾಡಂಚಿನ ಪ್ರದೇಶದಲ್ಲಿ ಲಕ್ಷಾಂತರ ರೈತರು ಅರಣ್ಯ ಒತ್ತುವರಿ ಭೂಮಿ ಸಾಗುವಳಿ ಮಾಡುತ್ತಿರುವ ರೈತರಿಗೆ ಕಾನೂನು ಪ್ರಕಾರ ಜಮೀನು ಸಕ್ರಮಗೊಳಿಸಿ ಆದೇಶ ಹೊರಡಿಸಬೇಕು ಎಂದು ರಾಜ್ಯಾಧ್ಯಕ್ಷ ರೈತರತ್ನ ಕುರುಬೂರು ಶಾಂತಕುಮಾರ್ ಮುಖ್ಯಮಂತ್ರಿಗೆ ವಿವರವಾಗಿ ತಿಳಿಸಿ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಾರಾಯಣ ರೆಡ್ಡಿ ರಾಜ್ಯ ರೈತ ಸಂಘ, ಪಟೇಲ್ ಪ್ರಸನ್ನ ಕುಮಾರ ರಾಜ್ಯ ಸಂಚಾಲಕರು ರಾಜ್ಯ ರೈತ ಸಂಘ ಹಸಿರು ಸೇನೆ,
ಆಯುಬ್ ಖಾನ್ ರಾರಾಜ್ಯ ರೈತ ಸಂಘ, ವೀರನಗೌಡ ಪಾಟೀಲ್ ಕಾರ್ಯಧ್ಯಕ್ಷರು ರಾಜ್ಯ ಕಬ್ಬು ಬೆಳೆಗಾರ ಸಂಘ, ಯತಿರಾಜ್ ನಾಯ್ಡು ರಾಜ್ಯಾಧ್ಯಕ್ಷರು ಕರ್ನಾಟಕ ನವ ನಿರ್ಮಾಣ ಸೇನೆ, ಹತ್ತಳ್ಳಿ ದೇವರಾಜ್ ರಾಜ್ಯ ಸಂಘಟನಾ ಕಾರ್ಯದರ್ಶಿ, ಸುರೇಶ್ ಮಾ ಪಾಟೀಲ್
ಉಪಾಧ್ಯಕ್ಷರು, ದೇವಕುಮಾರ್ ರಾಜ್ಯ ಕಬ್ಬು ಬೆಳೆಗಾರ ಸಂಘ, ಬರಡನಪುರ ನಾಗರಾಜ್
ಜಿಲ್ಲಾ ಪ್ರಧಾನ ಕಾರ್ಯದರ್ಶಿ, ರಮೇಶ್ ಹೂಗಾರ್
ಜಿಲ್ಲಾಧ್ಯಕ್ಷರು ಕಲ್ಬುರ್ಗಿ ಜಿಲ್ಲೆ, ರೇವಣ್ಣಯ್ಯ ಹಿರೇಮಠ ಬಾಗಲಕೋಟೆ, ಗಜೇಂದ್ರ ಸಿಂಗ್ ರಾಮನಗರ, ತಮ್ಮಯ್ಯಪ್ಪ ಕನಕಪುರ ಮೊದಲಾದ ರೈತ ಮುಖಂಡರು ನಿಯೋಗದಲ್ಲಿದ್ದರು