ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸಂಸ್ಥಾಪನಾ ದಿನಾಚರಣೆ ಹಲವು ವೈಶಿಷ್ಟ್ಯಗಳಿಂದ ಗಮನಸೆಳೆಯಿತು.ಬೆಂಗಳೂರು ಕೇಂದ್ರೀಯ ವಿಭಾಗದ ಘಟಕ–2ರ ಆವರಣದಲ್ಲಿ ನಡೆದ ನಿಗಮದ 63ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಯೋಜನೆಗಳಿಗೆ ಸಾರಿಗೆ ಸಚಿವರು ಚಾಲನೆ ನೀಡಿದರು.
ನಿಗಮದಲ್ಲಿ ಪ್ರಪ್ರಥಮವಾಗಿ ಪುನಶ್ಚೇತನಗೊಳಿಸಿದ ಐರಾವತ ಕ್ಲಬ್ ಕ್ಲಾಸ್ ವಾಹನಗಳಿಗೆ ಸಚಿವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ರಾಮಲಿಂಗ ರೆಡ್ಡಿ, ನಿಗಮವು ಕಾರ್ಮಿಕರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು ಇದರಿಂದ ಕಾರ್ಮಿಕರು ಸಂತೃಪ್ತಿಯಿಂದ ಕಾರ್ಯನಿರ್ವಹಿಸಲು ಸಹಕಾರಿಯಾಗಿರುವುದಾಗಿ ತಿಳಿಸಿದರು.
ನಾಲ್ಕು ವರ್ಷಗಳಿಂದ ಯಾವುದೇ ಅನುಕಂಪದ ಆಧಾರದಲ್ಲಿ ನೇಮಕಾತಿ ನಡೆದಿಲ್ಲ. ತಮ್ಮ ಸರ್ಕಾರ ಜಾರಿಗೆ ಬಂದ 18 ತಿಂಗಳು ಅವಧಿಯಲ್ಲಿ 1000 ಮೃತರ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನೌಕರಿಯನ್ನು ನೀಡಲಾಗಿದೆ. ಸರ್ಕಾರವು 5800 ನೂತನ ವಾಹನಗಳನ್ನು ಸೇರ್ಪಡೆ ಮಾಡಲು ಅನುಮತಿಸಿದ್ದು, ಈವರೆಗೆ 3417 ವಾಹನಗಳನ್ನು ಸೇರಿಸಲಾಗಿದೆ. ನಿಗಮವು ನೂತನವಾಗಿ ಜಾರಿಗೊಳಿಸಿದ ವಾಹನಗಳ ಪುನಶ್ಚೇತನ ಕಾರ್ಯವು ನೂತನ ಬಸ್ಸುಗಳನ್ನು ಸೇರ್ಪಡೆ ಮಾಡುವಲ್ಲಿ ಉಂಟಾಗಿರುವ ವಿಳಂಬದ ಕೊರತೆಯನ್ನು ತುಂಬಿದ್ದು, ಈ ಬಸ್ಸುಗಳು ನಾಲ್ಕು ಲಕ್ಷ ಕಿಮೀವರೆಗೆ ಕಾರ್ಯಾಚರಣೆ ಮಾಡಬಹುದಾಗಿದೆ. ಈ ವಿನೂತನ ಕಾರ್ಯಕ್ಕೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಅಭಿನಂದನಾರ್ಹರು ಎಂದು ಸಚಿವರು ಪ್ರಶಂಸಿಸಿದರು.
ಕೆಎಸ್ಸಾರ್ಟಿಸಿ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ದೇಶದಲ್ಲಿಯೇ ದೊಡ್ಡ ಸಾರಿಗೆ ಸಂಸ್ಥೆಯಾಗಿದ್ದು ಕಾರ್ಮಿಕ ಆಧಾರಿತ ಸಂಸ್ಥೆ ಆಗಿರುತ್ತದೆ. ನಿಗಮದ ವತಿಯಿಂದ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು ಇದು ಕಾರ್ಮಿಕರಿಗೆ ಹಾಗೂ ಅವರ ಕುಟುಂಬ ವರ್ಗಕ್ಕೆ ಅನುಕೂಲವಾಗಿರುತ್ತದೆ. ಜಾಗತಿಕ ಮಟ್ಟದಲ್ಲಿ ಇಂಧನದ ಬೆಲೆ ಹೆಚ್ಚಾದಾಗ ನಿಗಮದ ಪ್ರಯಾಣ ದರಗಳನ್ನು ಪರಿಷ್ಕರಿಸುವ ಕಾರ್ಯವನ್ನು ಕೈಗೊಳ್ಳಬೇಕು ಇದರಿಂದ ಕಾರ್ಮಿಕರಿಗೆ ಹೆಚ್ಚಿನ ರೀತಿಯಲ್ಲಿ ಸೌಲಭ್ಯಗಳನ್ನು ಒದಗಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
KSRTC ಪ್ರಗತಿಯ ಪಥ ಹೀಗಿದೆ:
ಕೆಎಸ್‌ಆರ್‌ಟಿಸಿ ದಿನನಿತ್ಯ 8849 ವಾಹನಗಳ ಮೂಲಕ 8068 ಅನುಸೂಚಿಗಳನ್ನು ಕಾರ್ಯಾಚರಣೆಗೊಳಿಸಿ, 28.50 ಲಕ್ಷ ಕಿ.ಮಿ ಕ್ರಮಿಸಿ, 34.92 ಲಕ್ಷ ಪ್ರಯಾಣಿಕರಿಗೆ ಸಾರಿಗೆ ಸೌಲಭ್ಯ ಒದಗಿಸುತ್ತಿದ್ದು, 33,371 ಸಿಬ್ಬಂದಿಯನ್ನು ಹೊಂದಿರುತ್ತದೆ.
ಸರ್ಕಾರವು ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ 5800 ಹೊಸ ಬಸ್ಸುಗಳ ಸೇರ್ಪಡೆಗೆ ಅನುಮೋದನೆ ನೀಡಿದ್ದು, ಈ ಪೈಕಿ ನಾಲ್ಕು ನಿಗಮಗಳಲ್ಲಿ 3417 ಬಸ್ಸುಗಳನ್ನು ಸೇರ್ಪಡೆಗೊಳಿಸಲಾಗಿದೆ.
ನಾಲ್ಕು ನಿಗಮಗಳಲ್ಲಿ 9000 ಹುದ್ದೆಗಳ ನೇಮಕಾತಿಗೆ ಅನುಮತಿ ನೀಡಿದ್ದು, ಈ ಪೈಕಿ 1883, ಚಾಲಕ ಕಂ ನಿರ್ವಾಹಕ ಹಾಗೂ ತಾಂತ್ರಿಕ ಸಿಬ್ಬಂದಿಗಳಿಗೆ ನೇಮಕಾತಿ ಆದೇಶ ನೀಡಲಾಗಿದೆ. 6500 ಹುದ್ದೆಗಳ ನೇಮಕಾತಿಗೆ ಪ್ರಕ್ರಿಯೆ ಶೀಘ್ರದಲ್ಲೆ ಪೂರ್ಣಗೊಳಿಸಲಾಗುವುದು.
ನಿಗಮಗಳ ವಾಹನಗಳಲ್ಲಿ 308.12 ಕೋಟಿ ಮಹಿಳೆಯರು ಪ್ರಯಾಣಿಸಿದ್ದು ಅವರ ಪ್ರಯಾಣದ ಶೂನ್ಯ ಟಿಕೇಟ್ ಮೌಲ್ಯ ರೂ.7431.00 ಕೋಟಿಗಳಾಗಿರುತ್ತದೆ. ಮಹಿಳಾ ಪ್ರಯಾಣಿಕರ ಪ್ರಯಾಣದ ಪ್ರಮಾಣ ಶೇ.58.12 ಆಗಿರುತ್ತದೆ.
ಶಕ್ತಿ ಯೋಜನೆ ಜಾರಿಗೆ ಬರುವ ಮುನ್ನ ಪ್ರತಿದಿನ ನಾಲ್ಕು ನಿಗಮಗಳ ವ್ಯಾಪ್ತಿಯಲ್ಲಿ ಕಾರ್ಯಾಚರಣೆಗೊಳಿಸುತ್ತಿದ್ದ 158909 ಟ್ರಿಪ್‌ಗಳ ಪ್ರಮಾಣವು 172333 ಗೆ ಹೆಚ್ಚಳ, ಪ್ರತಿ ದಿನ 13424 ಹೆಚ್ಚುವರಿ ಟ್ರಿಪ್‌ಗಳ ಕಾರ್ಯಾಚರಣೆ
ಈಗಾಗಲೇ ನಾಲ್ಕು ನಿಗಮಗಳಲ್ಲಿ 1000 ಮೃತ ಸಿಬ್ಬಂದಿಗಳ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿಗೆ ಆದೇಶ ನೀಡಲಾಗಿದೆ.
ಸಂಸ್ಥಾಪನಾ ದಿನದಂದು ಹಲವು ಯೋಜನೆಗಳಿಗೆ ಚಾಲನೆ:
ಪ್ರಪ್ರಥಮ ಬಾರಿಗೆ ಪುನಶ್ಚೇತನಗೊಳಿಸಿದ ಐರಾವತ ಕ್ಲಬ್ ಕ್ಲಾಸ್ ಬಸ್ಸುಗಳಿಗೆ ಚಾಲನೆ: ನಿಗಮವು ತನ್ನ ಹಳೆಯ ಸಾಮಾನ್ಯ ವಾಹನಗಳನ್ನು ಪುನಶ್ಚೇತನಗೊಳಿಸುವ ಜೊತೆಗೆ, ಇತ್ತೀಚೆಗೆ 10 ರಿಂದ 11 ವರ್ಷಗಳ ಕಾರ್ಯಾಚರಣೆ ಮಾಡಿದ ಪ್ರತಿಷ್ಟಿತ ವಾಹನಗಳನ್ನೂ ಸಹ ಪುನಶ್ಚೇತನಗೊಳಿಸುತ್ತಿದ್ದು, ಪುನಶ್ಚೇತನಗೊಳಿಸಲಾದ 3 ಐರಾವತ ಕ್ಲಬ್ ಕ್ಲಾಸ್ ವಾಹನಗಳಿಗೆ ಚಾಲನೆ ನೀಡಲಾಯಿತು. ಸದರಿ ವಾಹನಗಳು 15 ಲಕ್ಷ ಕಿ.ಮೀ ಕ್ರಮಿಸಿರುತ್ತದೆ.
ಸಾರಿಗೆ ಸುರಕ್ಷಾ ರೂ. 1 ಕೋಟಿ ಅಪಘಾತ ಪರಿಹಾರ ವಿಮಾ ಯೋಜನೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತನ್ನ ಸಿಬ್ಬಂದಿಗಳ ಅವಲಂಬಿತರ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಕರ್ತವ್ಯದಲ್ಲಿರುವಾಗ ಅಥವಾ ಕರ್ತವ್ಯದಲ್ಲಿಲ್ಲದ ಸಂದರ್ಭದಲ್ಲಿ ಅಪಘಾತದಿಂದ ಮೃತಪಟ್ಟಲ್ಲಿ ರೂ.1 ಕೋಟಿ ಅಪಘಾತ ವಿಮಾ ಪರಿಹಾರ ಒದಗಿಸುವ ಸಾರಿಗೆ ಸುರಕ್ಷಾ ಅಪಘಾತ ವಿಮಾ ಯೋಜನೆಯನ್ನು ಜಾರಿಗೆ ತಂದಿರುತ್ತದೆ.
ಇದುವರೆವಿಗೂ 17 ಜನ ನೌಕರರ ಕುಟುಂಬದವರಿಗೆ ತಲಾ ರೂ. 1 ಕೋಟಿಗಳ ಅಪಘಾತ ವಿಮಾ ಮೊತ್ತವನ್ನು ಈಗಾಗಲೇ ವಿತರಿಸಲಾಗಿದ್ದು, ಇಂದು ಅಪಘಾತಕ್ಕೆ ಒಳಪಟ್ಟು ಮೃತಪಟ್ಟ 3 ಸಿಬ್ಬಂದಿಗಳ ಅವಲಂಬಿತರಿಗೆ ತಲಾ ರೂ. 1 ಕೋಟಿ ಚೆಕ್ ನೀಡಲಾಗಿದೆ. *ಈವರೆಗೂ 20 ಸಿಬ್ಬಂದಿಗಳ ಅವಲಂಭಿತರಿಗೆ ರೂ.20 ಕೋಟಿ ಪರಿಹಾರ* ನೀಡಲಾಗಿದೆ.
ನೌಕರರ ಕುಟುಂಬ ಕಲ್ಯಾಣ ಪರಿಹಾರ ಯೋಜನೆ: ಹೃದಯಾಘಾತ, ಕ್ಯಾನ್ಸರ್, ಸ್ಟ್ರೋಕ್ ಮತ್ತಿತರ ಕಾರಣಗಳಿಂದ ಮರಣವನ್ನಪ್ಪುವ ನೌಕರರ ಸಂಖ್ಯೆಯು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿರುವ ವಿಷಯವನ್ನು ಮನಗಂಡು, ಈ ಕಾರಣದಿಂದ ಮೃತರಾಗುವ ಕುಟುಂಬದ ಅವಲಂಬಿತರು ಅನುಭವಿಸುವ ಕಷ್ಟಗಳನ್ನು ಗಮನಿಸಿ, ಅವರಿಗೆ ನೆರವಾಗಲು ಹೆಚ್ಚಿನ ಮೊತ್ತದ ಪರಿಹಾರವನ್ನು ನೀಡುವ ಸದುದ್ದೇಶದಿಂದ ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳಿಂದ ಬೇಡಿಕೆ ಬಂದ ಹಿನ್ನಲೆಯಲ್ಲಿ ನೌಕರರ ಕುಟುಂಬ ಕಲ್ಯಾಣ ಯೋಜನೆಯಡಿ ನೀಡಲಾಗುತ್ತಿದ್ದ ಪರಿಹಾರ ಮೊತ್ತವಾದ ರೂ. 3 ಲಕ್ಷಗಳನ್ನು ದಿನಾಂಕ: 01.11.2023 ರಿಂದ ರೂ.10 ಲಕ್ಷಗಳಿಗೆ ಹೆಚ್ಚಿಸಿ ಮರಣ ಪ್ರಕರಣಗಳಿಗೆ ಅನ್ವಯವಾಗುವಂತೆ ಜಾರಿಗೆ ತರಲಾಗಿರುತ್ತದೆ.
ಈ ಪರಿಷ್ಕೃತ ಪರಿಹಾರ ಯೋಜನೆ ಅಡಿ ಇದುವರೆವಿಗೂ 39 ಪ್ರಕರಣಗಳಲ್ಲಿ ರೂ.10 ಲಕ್ಷಗಳ ಪರಿಹಾರ ಧನವನ್ನು ನೀಡಿದ್ದು, ನಂತರದಲ್ಲಿ ಮರಣ ಹೊಂದಿದ 37 ಸಿಬ್ಬಂದಿಗಳ ಅರ್ಹ ಪ್ರಕರಣಗಳಲ್ಲಿ ಕುಟುಂಬದ ಸದಸ್ಯರಿಗೆ ತಲಾ ರೂ.10.00 ಲಕ್ಷಗಳ ಪರಿಹಾರದ ಚೆಕ್ ನ್ನು ಇಂದು ವಿತರಿಸಲಾಯಿತು. ಈವರೆಗೂ 93 ಸಿಬ್ಬಂದಿಗಳ ಅವಲಂಭಿತರಿಗೆ ರೂ.9.30 ಕೋಟಿಗಳ ಪರಿಹಾರ ನೀಡಲಾಗಿದೆ.
ನಿಗಮದ ಆಂತರಿಕ ನಿಯತಕಾಲಿಕ ಸಾರಿಗೆ ಸಂಪದ, ವಾಹನಗಳ ಪುನಶ್ಚೇತನ, ಆರ್.ಟಿ.ಓ ಕೈಪಿಡಿ, ಒಂದು ವರ್ಷದ ಸಾಧನೆ ಕುರಿತು ಕೈಪಿಡಿ ಬಿಡುಗಡೆ ಮಾಡಲಾಯಿತು.
ನಿಗಮದಲ್ಲಿ ಕಾಲಕಾಲಕ್ಕೆ ಉಂಟಾಗುವ ಬೆಳವಣಿಗೆ, ನೌಕರರ ಮಕ್ಕಳು ಮಾಡಿರುವ ವಿಶೇಷ ಸಾಧನೆ, ವಿಶೇಷ ಲೇಖನಗಳು ಇತ್ಯಾದಿಗಳನ್ನು ಒಳಗೊಂಡಿರುವ ಸಾರಿಗೆ ಸಂಪದ ಹಾಗೂ ನಿಗಮದ ವಿನೂತನ ಯೋಜನೆಯಾದ ವಾಹನಗಳ ಪುನಶ್ಚೇತನ ಕಾರ್ಯದ ಕುರಿತು ಹೊರತಂದಿರುವ ಕೈಪಿಡಿ, ಆರ್.ಟಿ.ಓ. ಕೈಪಿಡಿ ಮತ್ತು ಸಾರಿಗೆ ಸಂಸ್ಥೆಗಳ ಒಂದು ವರ್ಷದ ಸಾಧನೆ ಕುರಿತು ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು.
ಬಸ್ಸುಗಳ ಪುನಶ್ಚೇತನ ಕಾರ್ಯಕ್ಕೆ ವಿಭಾಗ ಹಾಗೂ ಕಾರ್ಯಾಗಾರಗಳಿಗೆ ʼಪ್ರಶಸ್ತಿ ಪ್ರದಾನʼ: ಕೋವಿಡ್ ಹಿನ್ನೆಲೆಯಲ್ಲಿ ಪ್ರಯಾಣಿಕರು ಸಂಚರಿಸದ ಕಾರಣ ನಿಗಮವು ಸಂಪೂರ್ಣವಾಗಿ ವಾಹನಗಳ ಕಾರ್ಯಾಚರಣೆ ಮಾಡಲಾಗದೆ ಆರ್ಥಿಕ ಸಂಕಷ್ಟವನ್ನು ಅನುಭವಿಸಿತ್ತು. ಕೋವಿಡ್ ನಂತರ ಪ್ರಯಾಣಿಕರ ಬೇಡಿಕೆ ಹೆಚ್ಚಾದಾಗ ನೂತನ ವಾಹನಗಳನ್ನು ಖರೀದಿಸಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿದ್ದಾಗ 9 ರಿಂದ 10 ಲಕ್ಷ ಕಿ.ಮೀ ಕ್ರಮಿಸಿ ಕವಚ ದುರಸ್ಥಿಯಿಂದ ಕೂಡಿದ ಹಳೆಯ ವಾಹನಗಳನ್ನು ಪುನಶ್ಚೇತನಗೊಳಿಸಲು ಯೋಜನೆಯನ್ನು ರೂಪಿಸಿ, ನಿಗಮದ 2 ಪ್ರಾದೇಶಿಕ ಕಾರ್ಯಾಗಾರಗಳಲ್ಲಿ ಈ ಕಾರ್ಯವನ್ನು ಆರಂಭಿಸಲಾಯಿತು. ಈ ರೀತಿಯ ಪುನಶ್ಚೇತನಗೊಂಡ ವಾಹನಗಳು ಬಹಳ ಆಕರ್ಷಕವಾಗಿದ್ದು, ನೂತನ ವಾಹನಗಳಂತೆ ಪ್ರಯಾಣಿಕರಿಂದ ಸ್ವಾಗತಿಸಲ್ಪಟ್ಟ ಕಾರಣ, ಈ ಕಾರ್ಯವನ್ನು ವಿಭಾಗಗಳಲ್ಲಿಯೂ ಸಹ ಆರಂಭಿಸಲಾಯಿತು.
ಇಂದಿನವರೆಗೆ ಎರಡು ಪ್ರಾದೇಶಿಕ ಕಾರ್ಯಗಾರಗಳಲ್ಲಿ 806 ಹಾಗೂ 16 ವಿಭಾಗಗಳಲ್ಲಿ 344 ವಾಹನಗಳು ಸೇರಿದಂತೆ ಒಟ್ಟಾರೆ 1150 ಹಳೆಯ ವಾಹನಗಳನ್ನು ಪುನಶ್ಚೇತನ ಗೊಳಿಸಲಾಗಿದೆ. ಈ ರೀತಿಯ ಪುನಶ್ಚೇತನಗೊಳಿಸಿದ ವಾಹನಗಳನ್ನು ಇನ್ನೂ 3 ರಿಂದ 4 ಲಕ್ಷ ಕಿ.ಮಿ.ಗಳವರೆಗೆ ಅಥವಾ ವಾಹನಗಳ ಜೀವಿತಾವಧಿವರೆಗೆ ಕಾರ್ಯಾಚರಣೆ ಮಾಡಬಹುದಾಗಿದ್ದು, ನಿಗಮವು ನೂತನ ಆಧುನಿಕ ವಿಧಾನಗಳನ್ನು ಹಾಗೂ ತಾಂತ್ರಿಕತೆಗಳನ್ನು ಅಳವಡಿಸಿಕೊಂಡಿರುವುದಕ್ಕೆ ಸಾಕ್ಷಿಯಾಗಿದೆ. ಈ ಉತ್ತಮ ಸಾಧನೆಗಾಗಿ ಪ್ರಾದೇಶಿಕ ಕಾರ್ಯಗಾರ ಬೆಂಗಳೂರು ಮತ್ತು ಹಾಸನಕ್ಕೆ ತಲಾ ರೂ.3 ಲಕ್ಷಗಳು, 13 ವಿಭಾಗಗಳಿಗೆ ತಲಾ ರೂ.2 ಲಕ್ಷ ಹಾಗೂ 3 ವಿಭಾಗಗಳಿಗೆ ತಲಾ ರೂ.1 ಲಕ್ಷಗಳ ನಗದು ಪುರಸ್ಕಾರ ಹಾಗೂ ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಲಾಗಿದೆ.
ಪ್ರಾದೇಶಿಕ ಕಾರ್ಯಾಗಾರ, ಬೆಂಗಳೂರು ಮತ್ತು ಹಾಸನದ ಕ್ಯಾಂಟೀನ್‌ನ ನವೀಕರಣ: ಪ್ರಾದೇಶಿಕ ಕಾರ್ಯಾಗಾರ, ಬೆಂಗಳೂರು ಮತ್ತು ಹಾಸನದಲ್ಲಿ ನಿಗಮದ ವತಿಯಿಂದ ಕ್ಯಾಂಟೀನ್ ನಡೆಸಲಾಗುತ್ತಿದೆ, ಈ ಕ್ಯಾಂಟೀನ್‌ಗಳು ಹಳೆಯದಾಗಿರುವ ಕಾರಣ ಆಧುನೀಕರಣಗೋಳಿಸಿ ಉನ್ನತೀಕರಣಗೋಳಿಸಲು ಇಂದು ಪ್ರತಿ ಕಾರ್ಯಾಗಾರಕ್ಕೆ ತಲಾ ರೂ.25 ಲಕ್ಷಗಳನ್ನು ಬಿಡುಗಡೆ ಮಾಡಿ, ಸಿಬ್ಬಂದಿಗಳಿಗೆ ಹೆಚ್ಚಿನ ಸೌಕರ್ಯ ಒದಗಿಸಲಾಯಿತು.
‘ಶೂನ್ಯ ಅಪಘಾತ’ ಸಾಧನೆಗೆ ನಗದು ಪುರಸ್ಕಾರ: ಚಿತ್ರದುರ್ಗ ವಿಭಾಗದ ಪಾವಗಡ ಘಟಕವು ತನ್ನ ಶಿಸ್ತು ಬದ್ದ ಕಾರ್ಯಾಚರಣೆ ಹಾಗೂ ಚಾಲನಾ ಸಿಬ್ಬಂದಿಗಳ ಜಾಗರೂಕ ಚಾಲನೆಯಿಂದ #ಕಳೆದ 22 ತಿಂಗಳುಗಳಲ್ಲಿ ಯಾವುದೇ ಅಪಘಾತವಾಗದಂತೆ ಕಾರ್ಯಾಚರಣೆಯನ್ನು ನಿರ್ವಹಿಸಿ ಅಭಿನಂದನೀಯ ಸೇವೆಯನ್ನು ಸಲ್ಲಿಸಿರುತ್ತದೆ. ಈ ಉತ್ತಮ ಶ್ಲಾಘನೀಯ ಸೇವೆಯನ್ನು ಗುರುತಿಸಿ ಇಂದು ಘಟಕಕ್ಕೆ ರೂ.2,00,000/- ಗಳು ಹಾಗೂ ಉತ್ತಮ ಕಾರ್ಯಾಚರಣೆಯ ನಾಯಕತ್ವ ವಹಿಸಿದ ಹನುಮಂತರಾಯ ಈ. ಘಟಕ ವ್ಯವಸ್ಥಾಪಕರು, ಪಾವಗಡ ಘಟಕ ಇವರಿಗೆ ರೂ.10,000/- ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಅನುಕಂಪದ ಆಧಾರದ ಮೇಲೆ ನೇಮಕಾತಿ:ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವಾಗ ಮೃತರಾದ ಸಿಬ್ಬಂದಿಗಳ ಮಕ್ಕಳಿಗೆ ಅನುಕಂಪದ ಆಧಾರದ ಮೇಲೆ ನೌಕರಿಯನ್ನು ನೀಡುವ ಯೋಜನೆಯನ್ನು ನಿಗಮವು ಹೊಂದಿದ್ದು, ಪ್ರಸ್ತುತ ಈ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗಿದೆ. ಇಂದು ನಿಗಮದಲ್ಲಿ ಸೇವೆಯಲ್ಲಿದ್ದಾಗ ಮೃತರಾದ 152 ಸಿಬ್ಬಂದಿಗಳ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನಿಗಮದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅವರಲ್ಲಿ 103 ಅವಲಂಬಿತರನ್ನು ಕರಾಸಾ ಪೇದೆ ಹುದ್ದೆಗಳಲ್ಲಿ, 45 ಅವಲಂಬಿತರನ್ನು ಸ್ವಚ್ಚತಾಗಾರ ಹುದ್ದೆಯಲ್ಲಿ, 3 ಅವಲಂಬಿತರನ್ನು ತಾಂತ್ರಿಕ ಸಹಾಯಕ ಹುದ್ದೆಯಲ್ಲಿ ಹಾಗೂ ಓರ್ವ ಅವಲಂಬಿತರನ್ನು ನಿರ್ವಾಹಕ ಹುದ್ದೆಯಲ್ಲಿ ನೇಮಕ ಮಾಡಿಕೊಳ್ಳ,ಲಾಗುತ್ತಿದ್ದು ಅವರಿಗೆ ನೇಮಕಾತಿ ಆದೇಶವನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಕೆಎಸ್ಸಾರ್ಟಿಸಿ ಉಪಾಧ್ಯಕ್ಷ ಮೊಹಮ್ಮದ್ ರಿಜ್ವಾನ್ ನವಾಬ್, ಬಿಗಮದ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್, ಸಾರಿಗೆ ಇಲಾಖೆ ಕಾರ್ಯದರ್ಶಿ ಡಾ. ಎನ್.ವಿ.ಪ್ರಸಾದ್, ನಿಗಮದ ನಿರ್ದೇಶಕರದಾ
ಡಾ. ನಂದಿನಿದೇವಿ ಕೆ., ಸದಾಶಿವ ಪ್ರಭು ಭಾಗವಹಿಸಿದರು.