ಬೆಂಗಳೂರು: ಮಹಿಳೆಯರ ‘ಶಕ್ತಿ’ ಅಷ್ಟೇ ಅಲ್ಲ, ಆಸ್ತಿಕರ ‘ಭಕ್ತಿ’ಗೂ ಸರ್ಕಾರದ ಭಾಗ್ಯದ ಕೊಡುಗೆಯನ್ನು ರಾಜ್ಯ ಸರ್ಕಾರ ಕರುಣಿಸಿದೆ. ವಾರಣಾಸಿ, ಅಯೋಧ್ಯೆ, ಪ್ರಯಾಗ್-ರಾಜ್ ಪುಣ್ಯಕ್ಷೇತ್ರ ಯಾತ್ರೆಗೆ ಭರ್ಜರಿ ಪ್ಯಾಕೇಜ್ ಆಸ್ತಿಕರ ಪಾಲಿಗೆ ವರದಾನವಾಗಲಿದೆ. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ, ಈ ‘ಭಕ್ತಿ ಭಾಗ್ಯ’ದ ಅವಕಾಶವನ್ನು ಮಿಸ್ ಮಾಡಬೇಡಿ ಎಂದು ಆಸ್ತಿಕರಲ್ಲಿ ಮನವರಿಕೆ ಮಾಡಿದ್ದಾರೆ.
2022-23ನೇ ಸಾಲಿನಿಂದ ಜಾರಿಗೆ ಬರುವಂತೆ ಕರ್ನಾಟಕ ರಾಜ್ಯದಿಂದ ಪುಣ್ಯ ಕ್ಷೇತ್ರಗಳಾದ ವಾರಣಾಸಿ, ಅಯೋಧ್ಯೆ ಮತ್ತು ಪ್ರಯಾಗ್-ರಾಜ್ ಕ್ಷೇತ್ರಗಳಿಗೆ ಕಡಿಮೆ ವೆಚ್ಚದಲ್ಲಿ ತೆರಳಲು ಅನುಕೂಲವಾಗುವಂತೆ ರಿಯಾಯಿತಿ ದರದಲ್ಲಿ ಪ್ಯಾಕೇಜ್ ರೂಪಿಸಿ “ಕರ್ನಾಟಕ ಭಾರತ್ ಗೌರವ ಕಾಶಿ ದರ್ಶನ” ಯೋಜನೆಯನ್ನು IRCTC ಮತ್ತು ಭಾರತೀಯ ರೈಲ್ವೇ ಇಲಾಖೆಯ ಸಹಯೋಗದೊಂದಿಗೆ ವಿಶೇಷ ರೈಲಿನ ಮೂಲಕ ಕೈಗೊಳ್ಳಲಾಗಿದೆ.
ಈ ಯೋಜನೆಯಡಿ ಪ್ರಯಾಣಿಸುವ ಯಾತ್ರಾರ್ಥಿಗಳಿಗೆ ತಲಾ 20,000 ರೂ.ಗಳಂತೆ ಪ್ಯಾಕೇಜ್ ರೂಪಿಸಿದ್ದು, ಈ ಮೊತ್ತದಲ್ಲಿ ತಲಾ 5,000 ರೂ.ಗಳನ್ನು ರಾಜ್ಯ ಸರ್ಕಾರದ ವತಿಯಿಂದ ಭರಿಸಿ ಉಳಿದ ಮೊತ್ತ 15,000 ರೂ.ಗಳನ್ನು ಯಾತ್ರಾರ್ಥಿಗಳು ಪಾವತಿಸಬೇಕಾಗಿರುತ್ತದೆ. ಈ ವಿಶೇಷ ರೈಲಿನಲ್ಲಿ ತೆರಳುವ ಯಾತ್ರಾರ್ಥಿಗಳಿಗೆ ಉಪಹಾರ, ಊಟ, ತಂಗುವಿಕೆ, ಸ್ಥಳೀಯ ಸಾರಿಗೆ ಮತ್ತು ಸ್ಥಳೀಯ ವೀಕ್ಷಣೆ ಒಳಗೊಂಡಿದ್ದು, ಇದು ಒಟ್ಟು 07 ದಿನಗಳ ಪ್ರವಾಸವಾಗಿರುತ್ತದೆ.
ಈ ಯೋಜನೆಯಡಿ ಈ ವರೆವಿಗೆ ಒಟ್ಟು 03 ಟ್ರಿಪ್ಗಳನ್ನು ಪೂರೈಸಿದ್ದು, ಸದರಿ ವಿಶೇಷ ರೈಲಿನಲ್ಲಿ ಒಟ್ಟು 1644 ಯಾತ್ರಾರ್ಥಿಗಳು ಯಾತ್ರೆ ಪೂರೈಸಿದ್ದು, ಸದರಿ ಯಾತ್ರಾರ್ಥಿಗಳಿಗೆ ಪ್ರಯಾಣದ ಒಟ್ಟು ಪ್ಯಾಕೇಜ್ದರ ರೂ. 20,000/-ಗಳ ಪೈಕಿ ಸರ್ಕಾರದಿಂದ ತಲಾ 5,000 ರೂ.ಗಳಂತೆ 82.20 ಲಕ್ಷಗಳ ಸಹಾಯಧನವನ್ನು ವಿತರಿಸಲಾಗಿರುತ್ತದೆ.
ಈಗ ನಾಲ್ಕನೇ ಟ್ರಿಪ್ಪಿನ ವಿಶೇಷ ರೈಲು 29.07.2023ರಂದು ಬೆಂಗಳೂರಿನಿಂದ ಹೊರಡಲಿದ್ದು, ಸದರಿ ಯಾತ್ರೆಗೆ ತೆರಳುವ ಯಾತ್ರಾರ್ಥಿಗಳು ಈ ಕೆಳಕಂಡ ಲಿಂಕ್ ಮೂಲಕ ಅಥವಾ ಐ.ಆರ್.ಸಿ.ಟಿ.ಸಿ (IRCTC) ಪೋರ್ಟಲ್ ಮೂಲಕ ತಮ್ಮ ಟಿಕೇಟ್ ಅನ್ನು ಕಾಯ್ದಿರಿಸಿಕೊಳ್ಳಬಹುದಾಗಿದೆ. ಈಗ ಹೊಸದಾಗಿ ಸುಸಜ್ಜಿತ LHB ಕೋಚ್ಗಳನ್ನು ಅಳವಡಿಸಲಾಗಿದ್ದು, ಇದು ಸುಸಜ್ಜಿತವಾದ ಸ್ಥಳದಲ್ಲಿಯೇ ಅಡುಗೆ ತಯಾರು ಮಾಡುವ ಅಡುಗೆ ಮನೆ (PANTRY CAR) ಒಳಗೊಂಡಿರುತ್ತದೆ ಹಾಗೂ ಯಾತ್ರಾರ್ಥಿಗಳ ಹಿತ ದೃಷ್ಟಿಯಿಂದ ಇಬ್ಬರು ವೈದ್ಯರು ಸಹ ಪ್ರಯಾಣಿಸುವರು. ಈ ಸಂಬಂಧ https://www.irctctourism.com ವೆಬ್ ಸೈಟ್ ನಲ್ಲಿ ಮಾಹಿತಿ ಲಭ್ಯವಿದೆ. ಈ ಸೌಲಭ್ಯವನ್ನು ರಾಜ್ಯದ ಎಲ್ಲಾ ಆಸ್ತಿಕರು ಸದುಪಯೋಗ ಪಡಿಸಿಕೊಂಡು, ಶ್ರೀ ಕಾಶಿ ವಿಶ್ವನಾಥ ಸ್ವಾಮಿಗಳ ದರ್ಶನವನ್ನು ಪಡೆಯಬೇಕೆಂದು ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.