ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನ ಆನೇಕಲ್ ಬಳಿಯ ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ಕನ್ನಡ ಭಾಷಾ ಕೇಂದ್ರ, ಭಾಷೆ ಮತ್ತು ಸಾಹಿತ್ಯ ವಿಭಾಗ, ಕನ್ನಡ ಸಂಘ ಹಾಗೂ ವಿದ್ಯಾರ್ಥಿ ಬೆಂಬಲ ಸೇವಾ ವಿಭಾಗಗಳ ಸಂಯುಕ್ತಾಶ್ರಯದಲ್ಲಿ 70ನೇ ಕನ್ನಡ ರಾಜ್ಯೋತ್ಸವವನ್ನು ವೈಭವದಿಂದ ಆಚರಿಸಲಾಯಿತು.
ರಾಜ್ಯೋತ್ಸವ ಸಂಭ್ರಮದ ಅಂಗವಾಗಿ ಅಕ್ಟೋಬರ್ 27ರಿಂದ ನವೆಂಬರ್ 1ರವರೆಗೆ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿವರ್ಗದವರಿಗಾಗಿ ಸಾಂಸ್ಕೃತಿಕ ವೇಷಭೂಷಣ, ಆಶುಭಾಷಣ, ಭಾಷಣ, ಪ್ರಬಂಧ, ಕವನ ರಚನೆ, ನೃತ್ಯ, ಗಾಯನ, ರಂಗೋಲಿ, ರಸಪ್ರಶ್ನೆ ಹಾಗೂ ಕನ್ನಡೇತರರಿಗಾಗಿ ಕನ್ನಡ ಸಂಭಾಷಣಾ ಸ್ಪರ್ಧೆ ಸೇರಿದಂತೆ ಹಲವು ಸ್ಪರ್ಧೆಗಳು ಹಮ್ಮಿಕೊಳ್ಳಲಾಯಿತು.

ನವೆಂಬರ್ 3ರಂದು ಬೆಳಿಗ್ಗೆ 9 ಗಂಟೆಗೆ ವಿಶ್ವವಿದ್ಯಾಲಯದ ಆಲ್ ಫ್ರೆಸ್ಕೋ ಸಭಾಂಗಣದಲ್ಲಿ ವಿಶೇಷ ಸಮಾರಂಭ ಗಮನಸೆಳೆಯಿತು. ವಿಶ್ವವಿದ್ಯಾಲಯದ ಸಂಸ್ಥಾಪಕ ಸದಸ್ಯೆ ಶೈಲಾ ಜಿ. ಚೆಬ್ಬಿ ಅವರು ಕನ್ನಡಾಂಬೆಗೆ ಪುಷ್ಪನಮನ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಕನ್ನಡ ನಾಡಗೀತೆ ಗಾಯನದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಅಲ್ಲದೇ ರಾಷ್ಟ್ರೀಯ ಜಾಗೃತಿ ಅರಿವು ಸಪ್ತಾಹದ ಅಂಗವಾಗಿ ಸಿಬ್ಬಂದಿಗೆ ಪ್ರತಿಜ್ಞಾವಿಧಿಯೂ ಬೋಧಿಸಲಾಯಿತು.
ಅದೇ ದಿನ ಮಧ್ಯಾಹ್ನ ನಡೆದ ಮುಖ್ಯ ಸಮಾರಂಭದಲ್ಲಿ ಹಿರಿಯ ಸಾಹಿತಿ, ಮಾಜಿ ರಾಜ್ಯಸಭಾ ಸದಸ್ಯ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಎಲ್.ಹನುಮಂತಯ್ಯ ಮಾತನಾಡಿ, “ಮಾತೃಭಾಷೆಯ ಮೂಲಕವೇ ನಮ್ಮ ಭಾವನೆಗಳು ಪರಿಣಾಮಕಾರಿಯಾಗಿ ವ್ಯಕ್ತವಾಗುತ್ತವೆ. ಕನ್ನಡ ಉಳಿಸಿ ಬೆಳೆಸಬೇಕಾದರೆ ಹೆಚ್ಚು ಜನರು ಅದರ ಬಳಕೆಯನ್ನು ಹೆಚ್ಚಿಸಬೇಕು. ಕನ್ನಡೇತರರಿಗೂ ಕನ್ನಡ ಕಲಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು,” ಎಂದು ಸಲಹೆ ನೀಡಿದರು.

ಹಿರಿಯ ಕಾನೂನು ಪ್ರಾಧ್ಯಾಪಕ ಡಾ. ಬಿ. ಎಸ್. ರೆಡ್ಡಿ ಅವರು ಕಾನೂನು ಕ್ಷೇತ್ರದಲ್ಲಿ ಕನ್ನಡದ ಬಳಕೆಯನ್ನು ವಿಸ್ತರಿಸಲು ಸೂಕ್ತ ಶಬ್ದಕೋಶ ರಚನೆಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಗ್ರಂಥಪಾಲಕ ಡಾ. ಪ್ರಕಾಶ ಐ.ಎನ್. ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಾಂಸ್ಕೃತಿಕ ಭಾಗದಲ್ಲಿ ಯಕ್ಷ ಸಂಭ್ರಮ ಕಲಾ ತಂಡದಿಂದ ಯಕ್ಷಗಾನ ಪ್ರದರ್ಶನ ಹಾಗೂ ಡೊಳ್ಳು ಚಂದ್ರು ಮತ್ತು ತಂಡದಿಂದ ಡೊಳ್ಳು ಕುಣಿತ ಹಾಗೂ ಹುಲಿವೇಷ ಪ್ರದರ್ಶನ ಜರುಗಿತು. ವಿದ್ಯಾರ್ಥಿಗಳಿಂದ ನೃತ್ಯ, ಗಾಯನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು. ಸಾಹಿತ್ಯ, ಕಲೆ ಹಾಗೂ ಸಂಸ್ಕೃತಿಯ ಸಂಯೋಜನೆಯಿಂದ ಕೂಡಿದ ಈ ಕಾರ್ಯಕ್ರಮವು ಪ್ರೇಕ್ಷಕರ ಮನಸೂರೆಗೊಂಡಿತು.
ರಾಜ್ಯೋತ್ಸವದ ಅಂಗವಾಗಿ ಆಯೋಜಿಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಬಹುಮಾನ ವಿತರಿಸಲಾಯಿತು. ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ವಿವೇಕಾನಂದ ಸಜ್ಜನ ಸಹಿತ ಶಿಕ್ಷಣ ತಜ್ಞರನೇಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕು. ಮೌಲ್ಯ ಮತ್ತು ಯಶಸ್ ಕಾರ್ಯಕ್ರಮ ನಿರೂಪಣೆ ನಡೆಸಿದರು. ಪ್ರೊ. ಕಸನಿಯಾ ನಾಯಕ್ ವಂದಿಸಿದರು


















































