ನವದೆಹಲಿ: ಭಾರತೀಯ ರೈಲ್ವೆ ಪ್ರತಿವರ್ಷ ಸರಾಸರಿ 58 ಕೋಟಿ ಊಟಗಳನ್ನು ಪ್ರಯಾಣಿಕರಿಗೆ ಪೂರೈಸುತ್ತಿದ್ದು, ಇದರಲ್ಲಿ ಕೇವಲ ಶೇ.0.0008ರಷ್ಟು ದೂರುಗಳು ಮಾತ್ರ ದಾಖಲಾಗುತ್ತಿವೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಆಹಾರದ ಗುಣಮಟ್ಟಕ್ಕೆ ಸಂಬಂಧಿಸಿದ ದೂರುಗಳ ಪರಿಶೀಲನೆಯ ನಂತರ ಕಳೆದ ನಾಲ್ಕು ವರ್ಷಗಳಲ್ಲಿ ಒಟ್ಟು ₹2.8 ಕೋಟಿ ದಂಡ ವಿಧಿಸಲಾಗಿದೆ ಎಂದು ಅವರು ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.
ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ, ಆರೋಗ್ಯಕರ ಆಹಾರ ಒದಗಿಸುವುದು ರೈಲ್ವೆಯ ನಿರಂತರ ಪ್ರಯತ್ನವಾಗಿದ್ದು, ಆಹಾರ ಮತ್ತು ಸೇವೆಗಳ ಗುಣಮಟ್ಟ ಸುಧಾರಣೆಗೆ ಕಾಲಕಾಲಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ಹೇಳಿದರು.
ಪ್ರಯಾಣಿಕರ ಪ್ರತಿಕ್ರಿಯೆ ಮತ್ತು ದೂರುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಉದ್ದೇಶದಿಂದ ‘ರೈಲ್ಮದದ್’ ಪೋರ್ಟಲ್ ಮೂಲಕ ದೂರು ನಿರ್ವಹಣಾ ವ್ಯವಸ್ಥೆಯನ್ನು ಬಲಪಡಿಸಲಾಗಿದ್ದು, ಇದು ಸರಳ, ವೇಗ ಮತ್ತು ಸುಲಭವಾಗಿ ಪ್ರವೇಶಿಸಬಹುದಾದ ಏಕ ವಿಂಡೋ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ರೈಲುಗಳಲ್ಲಿ ಆಹಾರದ ಗುಣಮಟ್ಟಕ್ಕೆ ಸಂಬಂಧಿಸಿದ ದೂರುಗಳು ದಾಖಲಾಗಿದರೆ, ಸೇವಾ ಪೂರೈಕೆದಾರರ ವಿರುದ್ಧ ತ್ವರಿತವಾಗಿ ಸೂಕ್ತ ದಂಡನಾತ್ಮಕ ಕ್ರಮ ಕೈಗೊಳ್ಳಲಾಗುತ್ತದೆ ಎಂದು ವೈಷ್ಣವ್ ಸ್ಪಷ್ಟಪಡಿಸಿದರು.
ಆಹಾರದ ಗುಣಮಟ್ಟ, ನೈರ್ಮಲ್ಯ ಮತ್ತು ಸುರಕ್ಷತೆ ಸುಧಾರಣೆಗೆ ಹಲವಾರು ಕ್ರಮಗಳನ್ನು ಜಾರಿಗೆ ತರಲಾಗಿದೆ. ಇದರಲ್ಲಿ ಗುರುತಿಸಲಾದ ಮೂಲ ಅಡುಗೆಮನೆಗಳಿಂದ ಆಹಾರ ಪೂರೈಕೆ, ಆಯ್ದ ಸ್ಥಳಗಳಲ್ಲಿ ಆಧುನಿಕ ಬೇಸ್ ಕಿಚನ್ಗಳ ಸ್ಥಾಪನೆ, ಆಹಾರ ತಯಾರಿಕೆಗೆ ಮೇಲ್ವಿಚಾರಣೆಯ ಸಲುವಾಗಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ಸೇರಿವೆ. ಜೊತೆಗೆ ಅಡುಗೆ ಎಣ್ಣೆ, ಅಕ್ಕಿ, ಆಟಾ, ಬೇಳೆಕಾಳು, ಮಸಾಲೆ, ಪನೀರ್, ಡೈರಿ ಉತ್ಪನ್ನಗಳು ಸೇರಿದಂತೆ ಜನಪ್ರಿಯ ಮತ್ತು ಬ್ರಾಂಡ್ ಕಚ್ಚಾ ವಸ್ತುಗಳ ಬಳಕೆಯನ್ನು ಕಡ್ಡಾಯಗೊಳಿಸಲಾಗಿದೆ.
ಆಹಾರ ಸುರಕ್ಷತೆ ಮತ್ತು ನೈರ್ಮಲ್ಯ ಪಾಲನೆ ಖಚಿತಪಡಿಸಿಕೊಳ್ಳಲು ಬೇಸ್ ಕಿಚನ್ಗಳಲ್ಲಿ ಆಹಾರ ಸುರಕ್ಷತಾ ಮೇಲ್ವಿಚಾರಕರ ನಿಯೋಜನೆ, ರೈಲುಗಳಲ್ಲಿ ಆನ್ಬೋರ್ಡ್ ಐಆರ್ಸಿಟಿಸಿ ಮೇಲ್ವಿಚಾರಕರ ನಿಯೋಜನೆ ಮಾಡಲಾಗಿದೆ. ಅಲ್ಲದೆ, ಆಹಾರ ಪ್ಯಾಕೆಟ್ಗಳಲ್ಲಿ ಕ್ಯೂಆರ್ ಕೋಡ್ಗಳನ್ನು ಪರಿಚಯಿಸಲಾಗಿದ್ದು, ಅಡುಗೆಮನೆಯ ಹೆಸರು, ಪ್ಯಾಕೇಜಿಂಗ್ ದಿನಾಂಕ ಸೇರಿದಂತೆ ಅಗತ್ಯ ಮಾಹಿತಿಯನ್ನು ಪ್ರಯಾಣಿಕರು ಪರಿಶೀಲಿಸಬಹುದು.
ಬೇಸ್ ಕಿಚನ್ಗಳು ಮತ್ತು ಪ್ಯಾಂಟ್ರಿ ಕಾರುಗಳಲ್ಲಿ ನಿಯಮಿತ ಆಳವಾದ ಶುಚಿಗೊಳಿಸುವಿಕೆ ಹಾಗೂ ಕೀಟ ನಿಯಂತ್ರಣ ಕ್ರಮಗಳನ್ನು ಸಹ ಜಾರಿಗೊಳಿಸಲಾಗಿದೆ. ಆಹಾರ ಸುರಕ್ಷತಾ ಮಾನದಂಡಗಳ ಪಾಲನೆಗಾಗಿ ಪ್ರತಿಯೊಂದು ಅಡುಗೆ ಘಟಕಕ್ಕೂ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (ಎಫ್ಎಸ್ಎಸ್ಎಐ) ಪ್ರಮಾಣೀಕರಣವನ್ನು ಕಡ್ಡಾಯಗೊಳಿಸಲಾಗಿದೆ ಎಂದು ಸಚಿವರು ಹೇಳಿದರು.





















































