ಬೆಂಗಳೂರು: ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಸಲು ರಾಜ್ಯ ಸರ್ಕಾರವು ಈಗಾಗಲೇ ಮೂರು ಬಾರಿ ಗಡುವು ನೀಡಿದ್ದು, ಇದೀಗ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಇದೇ ವೇಳೆ, HSRP ನಂಬರ್ ಪ್ಲೇಟ್ ಅಳವಡಿಸಲು ಮೇ 31 ಕೊನೆಯ ದಿನಾಂಕವಾಗಿ ನಿಗದಿಪಡಿಸಲಾಗಿತ್ತಾದರೂ ಇದೀಗ ಜೂನ್ 12ರ ವರೆಗೆ ಗಡುವು ವಿಸ್ತರಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಸುಮಾರು ಎರಡು ಕೋಟಿ ವಾಹನಗಳಿಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸುವ ಉದ್ದೇಶ ಹೊಂದಲಾಗಿದೆ. ಹೀಗಿದ್ದರೂ 2 ಕೋಟಿ ವಾಹನಗಳ ಪೈಕಿ, ಕೇವಲ 35 ಲಕ್ಷ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಲಾಗಿದೆ. ಹೀಗಾಗಿ ಇದೀಗ ಕರ್ನಾಟಕ ಸರಕಾರವು ದಂಡ ಪ್ರಯೋಗಕ್ಕೆ ಮುಂದಾಗಿದೆ ಎಂದವರು ತಿಳಿಸಿದ್ದಾರೆ.
ವಾಹನಗಳ ಹಾಗೂ ಸವಾರರ ಭದ್ರತಾ ದೃಷ್ಟಿಯಿಂದ ಹೈ ಸೆಕ್ಯೂರಿಟಿ ರೆಜಿಸ್ಟ್ರೇಷನ್ ನಂಬರ್ ಪ್ಲೇಟ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಈ ನೋಂದಣಿ ಫಲಕವು ಅಲುಮಿನಿಯಂನಿಂದ ತಯಾರಿಸಲಾಗಿದ್ದು, ಒಮ್ಮೆ ಅಳವಡಿಸಿಕೊಂಡರೆ ಯಾವುದೇ ಕಾರಣಕ್ಕೂ ಮರುಬಳಕೆ ಅಸಾಧ್ಯ.
ವಾಹನದ ನೋಂದಣಿ ಫಲಕದ ಮುಂಭಾಗ ಮತ್ತು ಹಿಂಭಾಗದ ಮೇಲಿನ ಎಡ ಮೂಲೆಯಲ್ಲಿ 20X20 MM ಗಾತ್ರದ ಕ್ರೋಮಿಯಂ ಆಧಾರಿತ ಹೋಲೊಗ್ರಾಮ್ ಅಳವಡಿಸಲಾಗುತ್ತದೆ. ಇದು ಅತ್ಯಂತ ಸುರಕ್ಷಿತವಾಗಿರುತ್ತದೆ.
2019ರ ಏಪ್ರಿಲ್ 1ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ ಎಲ್ಲಾ ವಾಹನೆಗಳಿಗೂ ಈ ಹೊಸ ಮಾದರಿಯ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ.
ಈ ನಂಬರ್ ಪ್ಲೇಟ್ ಅವವಾದಿಸಲು ಜೂನ್ 12 ಕೊನೆಯ ದಿನ. ಒಂದು ವೇಳೆ ಅಳವಡಿಸದ ವಾಹನ ರಸ್ತೆಯಲ್ಲಿ ಸಿಕ್ಕಿಬಿದ್ದರೆ ಮೊದಲ ಬಾರಿಗೆ ಒಂದು ಸಾವಿರ ರೂಪಾಯಿ ದಂಡ ಹಾಗೂ ಎರಡನೇ ಬಾರಿ ಸಿಕ್ಕಿ ಬಿದ್ದರೆ 2000 ರೂಪಾಯಿ ದಂಡವನ್ನು ವಿಧಿಸುವ ಸಾಧ್ಯತೆ ಇದೆ.
ಈ ಹೊಸ ಮಾದರಿಯ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್’ನಲ್ಲಿ ವಾಹನದ ಎಲ್ಲಾ ಮಾಹಿತಿಯು ಸರ್ಕಾರಿ ಕಚೇರಿಯಲ್ಲಿ ಸಂಗ್ರಹವಾಗಿರುತ್ತದೆ. ಇದರಿಂದ ಒಂದು ವೇಳೆ ನಿಮ್ಮ ವಾಹನ ಕಳ್ಳತನವಾದರೂ ಕೂಡ ಬೇಗನೆ ಹುಡುಕಲು ಸಹಾಯವಾಗುತ್ತದೆ.
ಅದೇ ರೀತಿ ಒಮ್ಮೆ ವಾಹನಕ್ಕೆ ಈ ಹೊಸ ಮಾದರಿಯ ನಂಬರ್ ಪ್ಲೇಟ್ ಅಳವಡಿಸಿದರೆ ಅನಧಿಕೃತವಾಗಿ ಬದಲಾವಣೆ ಮಾಡಿಕೊಳ್ಳುವುದು ಮರುಬಳಕೆ ಮಾಡುವುದು ಅಸಾಧ್ಯವಾಗಿದೆ. ವಿಶೇಷವೇನೆಂದರೆ ಈ ನಂಬರ್ ಪ್ಲೇಟ್’ನಲ್ಲಿರುವ ಮಾಹಿತಿಯನ್ನು ತಿದ್ದಲು ಮತ್ತು ಬದಲಾಯಿಸಲು ಸಾಧ್ಯವಿಲ್ಲ.
ಈ ಹೊಸ ಮಾದರಿಯ ನಂಬರ್ ಪ್ಲೇಟ್’ಗಳು ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮನುಫಾಕ್ಟರ್ (SIAM) ಅಧಿಕೃತ ವೆಬ್’ಸೈಟ್’ನಿಂದ ಮಾತ್ರ ಬುಕ್ ಮಾಡಿಕೊಳ್ಳಲು ಅವಕಾಶವಿದೆ. ಆನ್ಲೈನ್ ಮುಖಾಂತರ ಅರ್ಜಿ ಹಾಕಲು ವಾಹನದ ನಂಬರ್, ಮಾಲೀಕರ ಹೆಸರು, ಮೊಬೈಲ್ ನಂಬರ್ ಹಾಗೂ ರಾಜ್ಯ ಸೇರಿದಂತೆ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಬೇಕಾಗುತ್ತದೆ.
ಅರ್ಜಿ ಸಲ್ಲಿಕೆಯ ಬಳಿಕ ನಂಬರ್ ಪ್ಲೇಟನ್ನು ಹತ್ತಿರದ ಶೋ ರೂಂಗೆ ಡೆಲಿವರಿ ಮಾಡಿಸಿಕೊಂಡು, ಅಲ್ಲಿಂದ ಪಡೆದುಕೊಳ್ಳಬಹುದಾಗಿದೆ. ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಯಾವುದೇ ರೀತಿಯ ತೊಂದರೆಯಾದಲ್ಲಿ ಸಮೀಪದ ಆರ್ಟಿಓ ಕಚೇರಿಗೆ ಅಥವಾ ಶೋರೂಂಗೆ ಭೇಟಿ ನೀಡಿ ಸುಲಭವಾಗಿ ಪಡೆದುಕೊಳ್ಳಬಹುದು.
ಆನ್ಲೈನ್ ಅರ್ಜಿ ಸಲ್ಲಿಸುವವರು ಎಚ್ಚರ ವಹಿಸಿ:
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವವರಿಗೆ ನಡೆಯುತ್ತಿರುವ ವಂಚನೆಯ ಬಗ್ಗೆ ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯು ವಿವರಣೆ ನೀಡಿದೆ. ಹಲವಾರು ಸೈಬರ್ ವಂಚಕರು ನಕಲಿ ಲಿಂಕ್’ಗಳನ್ನೂ ಕ್ರಿಯೇಟ್ ಮಾಡಿ QR CODE ಸ್ಕ್ಯಾನ್ ಮಾಡಿಸಿಕೊಂಡು ಹಣ ಪಡೆಯು ವಂಚನೆಗೆ ಇಳಿದಿದ್ದಾರೆ. ಎಚ್ಎಸ್ಆರ್ಪಿ ಪ್ಲೇಟ್ ನೋಂದಣಿಯ ಹೆಸರಿನಲ್ಲಿ ಲಿಂಕ್ ಸೃಷ್ಟಿ ಮಾಡಿ ಜನರಿಗೆ ಮೋಸ ಮಾಡುವ ವಂಚಕರಿಂದ ಸುರಕ್ಷಿತವಾಗಿರಲು ಸರ್ಕಾರವು ಸೂಚಿಸಿದೆ.
ಮೊಬೈಲ್’ನಲ್ಲೇ HSRP ನಂಬರ್ ಪ್ಲೇಟ್ ನೋಂದಣಿ ಸಾಧ್ಯವಿದೆ. HSRP ನಂಬರ್ ಪ್ಲೇಟ್ ನೋಂದಣಿಗೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು SIAMನ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅಥವಾ ಕೆಳಗಿನ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಮುಂದುವರೆಯಿರಿ. ಜಾಲತಾಣದಲ್ಲಿ ಕೇಳಲಾಗುವ ನಿಮ್ಮ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ ಕೊನೆಯ ದಿನಾಂಕದ (ಜೂನ್ 12) ಒಳಗಾಗಿ ಅರ್ಜಿ ಸಲ್ಲಿಸಬಹುದು. ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.