ವಿಜಯನಗರ: ಹೊಸಪೇಟೆಯಲ್ಲಿ ನಡೆಯುತ್ತಿರುವ ಬಿಜೆಪಿ ರಾಜ್ಯ ಕಾರ್ಯ ಕಾರಣಿಯಲ್ಲಿ ಭಾಗವಹಿಸಲು ತೆರಳುವ ದಾರಿ ಮಧ್ಯೆ ಅಪಘಾತಕ್ಕೀಡಾಗಿ ಗಾಯಗೊಂಡಿದ್ದ ಕಾರು ಪ್ರಯಾಣಿಕರಿಗೆ ಸಹಾಯ ಹಸ್ತ ಚಾಚಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಮ್ಮದೇ ಕಾರನ್ನು ನೀಡಿ ಔದಾರ್ಯ ಪ್ರದರ್ಶಿಸಿದ್ದಾರೆ.
ಹೊಸಪೇಟೆ ಗ್ರಾಮೀಣ ಭಾಗದ ಹೊರವಲಯದಲ್ಲಿ ಎರಡು ಕಾರುಗಳ ಮಧ್ಯೆ ಅಪಘಾತ ಸಂಭವಿಸಿತ್ತು. ಅದೇ ದಾರಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಾಂದ್ಲಾಜೆ ಅವರು ಬಿಜೆಪಿ ಕಾರ್ಯಕಾರಣಿಯಲ್ಲಿ ಭಾಗವಹಿಸಲು ತೆರಳುತ್ತಿದ್ದರು. ಅಪಘಾತದಲ್ಲಿ ಗಾಯಗೊಂಡವರ ಪರಿಸ್ಥಿತಿ ಕಂಡು ಮರುಗಿದ ಸಚಿವೆ, ಗಾಯಾಳುಗಳ ಆರೋಗ್ಯ ವಿಚಾರಿಸಿದರಲ್ಲದೆ, ತಮ್ಮ ವಾಹನದ ಮೂಲಕ ಅವರನ್ನು ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದರು.
ಈ ನಡುವೆ, ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಪಾಲ್ಗೊಳ್ಳುವ ಧಾವಂತದಲ್ಲಿದ್ದ ಅವರು, ಘಟನಾ ಸ್ಥಳದಿಂದ ಸುಮಾರು 5 ಕಿ. ಮೀ ನಷ್ಟು ದೂರ ಬೈಕ್ ಮೂಲಕ ತೆರಳಿದರು. ಅಪಘಾತಕ್ಕೀಡಾದವರಿಗೆ ಸಹಾಯಹಸ್ತವನ್ನು ಚಾಚಿ, ಜನಸಾಮಾನ್ಯರಂತೆ ಬೈಕಿನಲ್ಲಿ ಸಮಾರಂಭದ ಸ್ಥಳಕ್ಕೆ ತೆರಳಿದ ಕೇಂದ್ರ ಸಚಿವರ ಈ ನಡೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.