ಬೆಂಗಳೂರು: ಕೊರೋನಾ ಸಂಕಟ ಕಾಲದಲ್ಲಿ ಖಾಸಗಿ ಜಿಂದಾಲ್ ಕಂಪನಿಗೆ ತರಾತುರಿಯಲ್ಲಿ 3367 ಎಕರೆ ಜಮೀನು ಮಂಜೂರಾತಿ ನಿರ್ಧಾರ ಕೈಗೊಂಡು ಬಿಎಸ್‌ವೈ ಸರ್ಕಾರ ಪೇಚಿಗೆ ಸಿಲುಕಿದೆ. ಈ ವಿಚಾರದಲ್ಲಿ ಅಗತ್ಯ ದಾಖಲೆಗಳನ್ನು ತಂದೊಪ್ಪಿಸುವಂತೆ ಹೈಕೋರ್ಟ್ ತಾಕೀತು ಮಾಡಿದ್ದು ಈ ಬೆಳವಣಿಗೆ ಸರ್ಕಾರವನ್ನು ಮತ್ತಷ್ಟು ಮುಜುಗರಕ್ಕೀಡುಮಾಡಿದೆ.
ಏನಿದು ಅಚ್ಚರಿಯ ಬೆಳವಣಿಗೆ..?
ಹಿಂದೆ ಬಳ್ಳಾರಿ ಜಿಲ್ಲೆಗೆ ಹೊಂದಿಕೊಂಡಿದ್ದ, ಇದೀಗ ನೂತನ ವಿಜಯನಗರ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಸಂಡೂರು ತಾಲೂಕಿನಲ್ಲಿ ಸುಮಾರು 3667 ಎಕರೆ ಜಮೀನನ್ನು ಜಿಂದಾಲ್ ಸಂಸ್ಥೆಗೆ ಪರಭಾರೆ ಮಾಡುವ ಸಂಬಂಧ ಬಿಎಸ್‌ವೈ ಸರ್ಕಾರ ತೀರ್ಮಾನ ಕೈಗೊಂಡಿತ್ತು. ಹಿಂದೆ ಜೆಡಿಎಸ್ ನೇತೃತ್ವದ ಸರ್ಕಾರ ಇದೇ ಜಮೀನನ್ನು ಇದೇ ಜಿಂದಾಲ್ ಕಂಪನಿಗೆ ನೀಡುವ ನಿರ್ಧಾರ ಕೈಗೊಂಡಾಗ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಬಿಜೆಪಿ ಪ್ರಸ್ತುತ ಅಧಿಕಾರಕ್ಕೆ ಬಂದ ನಂತರ ತಾನೂ ಕೂಡಾ ಅದೇ ನಿರ್ಧಾರ ಕೈಗೊಂಡು ವಿವಾದಕ್ಕೀಡಾಗಿದೆ. ಒಂದೆಡೆ ಬಿಜೆಪಿಯ ಬಹಳಷ್ಟು ಶಾಸಕರು ಬಿಎಸ್‌ವೈ ನಿರ್ಧಾರದ ವಿರುದ್ದ ಹೈಕಮಾಂಡ್‌ಗೆ ದೂರು ನೀಡಿದರೆ, ಇನ್ನೊಂದೆಡೆ ಆರೆಸ್ಸೆಸ್ ವಕೀಲರೆಂದೇ ಖ್ಯಾತರಾಗಿರುವ ಎಸ್.ದೊರೆರಾಜು ಮೂಲಕ ಸಾಮಾಜಿಕ ಹೋರಾಟಗಾರ ಕೆ.ಪಾಲ್ ಅವರು ಹೈಕೋರ್ಟ್, ಸುಪ್ರೀಂ ಕೋರ್ಟ್ ಹಾಗೂ ಗ್ರೀನ್ ಬೆಂಚ್‌ನಲ್ಲಿ ಕಾನೂನು ಹೋರಾಟಕ್ಕಿಳಿದಿದ್ದಾರೆ. ಇದರಿಂದ ಇಕ್ಕಟ್ಟಿನಲ್ಲಿ ಸಿಲುಕಿದ ಸಿಎಂ ಬಿಎಸ್‌ವೈ ಸರ್ಕಾರ ಇತ್ತೀಚಿನ ಸಂಪುಟ ಸಭೆಯಲ್ಲಿ ಜಿಂದಾಲ್‌ಗೆ ಜಮೀನು ನೀಡುವ ನಿರ್ಧಾರವನ್ನು ತಾತ್ಕಾಲಿಕವಾಗಿ ಕೈ ಬಿಡಲು ನಿರ್ಧರಿಸಿತೆಂದು ಹೇಳಲಾಗುತ್ತಿದೆ.
ಈ ನಡುವೆ, ದೊರೆರಾಜು ಮೂಲಕ ಸಲ್ಲಿಕೆಯಾಗಿರುವ ಪರಿಷ್ಕೃತ ಸಾರ್ವಜನಿಕ ಹಿತಾಸಕ್ತಿ ಧಾವೆ ಬಗ್ಗೆ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿಯನ್ನೊಳಗೊಂಡ ಪೀಠವು ಸೋಮವಾರ ರಾಜ್ಯ ಸರ್ಕಾರದಿಂದ ಸ್ಪಷ್ಟನೆ ಕೇಳಿದೆ. ಸರ್ಕಾರದ ಪರವಾಗಿ ಹಾಜರಾಗಿದ್ದ ವಕೀಲ ವಿಜಯಕುಮಾರ್, ಈ ಧಾವೆಯಲ್ಲಿ ಅರ್ಜಿದಾರರು ಉಲ್ಲೇಖಿಸಿರುವ ಸಂಗತಿಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಆದರೆ, ಅರ್ಜಿದಾರರ ಪರ ವಕೀಲ ದೊರೆರಾಜು ಅವರ ಸಮರ್ಥಿಸಿರುವ ಸಂಗತಿಗಳು ನ್ಯಾಯಮೂರ್ತಿಗಳ ಗಮನಸೆಳೆದಿದ್ದು, ರಾಜ್ಯ ಸಂಪುಟವು ಏಪ್ರಿಲ್ 26ರಂದು ಹಾಗೂ ಮೇ 27ರಂದು ಕೈಗೊಂಡಿರುವ ತೀರ್ಮಾನ, ಆದೇಶದ ದಾಖಲೆಗಳನ್ನು ಹಾಗೂ ಜಮೀನು ನೀಡುವ ಪ್ರಕ್ರಿಯೆಯನ್ನು ತಡೆಹಿಡಿದ ಆದೇಶದ ದಾಖಲೆಗಳು ಹಾಗೂ ಅದಕ್ಕೆ ಸಂಬಂಧಿಸಿದ ಕಡತಗಳನ್ನು ಜೂನ್ 15ರಂದು ನ್ಯಾಯಲಯಕ್ಕೆ ನೀಡಬೇಕೆಂದು ಸರ್ಕಾರಕ್ಕೆ ನ್ಯಾಯಮೂರ್ತಿಗಳು ನಿರ್ದೇಶನ ನೀಡಿದರು.
ಈ ವಿಚಾರಣೆ ವೇಳೆ, ಸರ್ಕಾರದ ಪರ ವಕೀಲರು, ರಿಟ್ ಅರ್ಜಿಯಲ್ಲಿ ಮುಖ್ಯಮಂತ್ರಿಗಳ ಬಗ್ಗೆ ಆಧಾರವಿಲ್ಲದ ಆರೋಪ ಮತ್ತು ನಿಂದನೆ ಮಾಡಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ. ಅರ್ಜಿದಾರರ ಪರ ವಕೀಲ ದೊರೆರಾಜು ಅವರು ಸರ್ಕಾರದ ಲೋಪಗಳತ್ತ ಬೊಟ್ಟು ಮಾಡಿದರಲ್ಲದೆ, ನಾವು ಕೇಳಿದ ದಾಖಲೆಗಳನ್ನು ಸರ್ಕಾರವು ಉದ್ದೇಶ ಪೂರ್ವಕವಾಗಿ ನೀಡುತ್ತಿಲ್ಲ, ಸರ್ಕಾರ ಈ ಸತ್ಯವನ್ನು ಮರೆಮಾಚಲು ಪ್ರಯತ್ನಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ ಜಿಂದಾಲ್ ಸಂಸ್ಥೆಗೂ ನೋಟೀಸ್ ನೀಡಿ ವಿಚಾರಣೆಯನ್ನು ಜೂನ್ 15ಕ್ಕೆ ಮುಂದೂಡಿದೆ.
ಏನಿದು ಜಿಂದಾಲ್ ವಿವಾದ..?
ಜಿಂದಾಲ್‌ಗೆ ರಾಜ್ಯ ಸರ್ಕಾರ 3664 ಎಕರೆ ಜಮೀನು ಮಂಜೂರು ಮಾಡುವ ತೀರ್ಮಾನ ಕೈಗೊಂಡಿತ್ತು ಸರ್ಕಾರ ಜಿಂದಾಲ್ ಪರವಾಗಿ ಈ ಕೈಗೊಂಡಿರುವುದೇ ತಪ್ಪು ನಿರ್ಧಾರ. ಇದು ನ್ಯಾಯಾಲಯಗಳ ಈ ಹಿಂದಿನ ನಿಲುವುಗಳಿಗೂ ವಿರುದ್ದವಾಗಿದೆ ಎಂದು ದೊರೆರಾಜು ಮೂಲಕ ಅರ್ಜಿದಾರ ಕೆ.ಪಾಲ್ ಅವರು ನ್ಯಾಯಾಲಯದ ಗಮನಸೆಳೆದಿದ್ದಾರೆ. ಒರಿಸ್ಸಾದ ಪ್ಯಾರಾಡಿಪ್‌ನಲ್ಲಿ ಜಿಂದಾಲ್ ಕಂಪನಿಗೆ ಜಮೀನು ಮಂಜೂರಾತಿ ವಿಚಾರದಲ್ಲಿನ ಕೋರ್ಟ್‌ನ ನಿರ್ದೇಶನವನ್ನು ಗಮನಕ್ಕೆ ತಂದಿದ್ದಾರೆ. ಈ ಹಿಂದೆ ಟಾಟಾ ಸಂಸ್ಥೆಗೆ ಜಮೀನು ನೀಡಿರುವ ವಿವಾದದಲ್ಲಿ ಮಧ್ಯ ಪ್ರವೇಶಿಸಿದ್ದ ಕೋರ್ಟ್ ಸರ್ಕಾರದ ಕ್ರಮವನ್ನೇ ರದ್ದುಪಡಿಸಿ, ಜಮೀನನ್ನು ಮೂಲ ವ್ಯಕ್ತಿಗಳಿಗೇ ವಾಪಸ್ ಮಾಡಿಸಿರುವ ಬೆಳವಣಿಗೆಯನ್ನೂ ವಕೀಲರು ಮೂಲ ಅರ್ಜಿಯ ವಿಚಾರಣೆ ಸಂದರ್ಭದಲ್ಲೇ ಉದಾಹರಿಸಿದ್ದರು. ಸ್ವ ಪಕ್ಷೀಯರ ವಿರೋಧವಿದ್ದರೂ ಪಕ್ಷದ ನಿಲುವು ಹಾಗೂ ಸಿದ್ಧಾಂತಗಳನ್ನು ಮೀರಿ, ಜಿಂದಾಲ್ ಸಂಸ್ಥೆಗೆ ಜಮೀನು ಒದಗಿಸುವ ನಿರ್ಧಾರ ಕೈಗೊಂಡಿದೆ ಎಂಬುದು ಅರ್ಜಿದಾರರ ವಾದ.
ಹಿಂದೆ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಯಡಿಯೂರಪ್ಪ ಹಾಗೂ ಬಿಜೆಪಿ ಶಾಸಕರೇ ಪ್ರತಿಭಟನೆ ಹಾಗೂ ರ್ಯಾಲಿ ನಡೆಸಿದ್ದರು. ಆದರೆ ಆಗಿನ ಸರ್ಕಾರ ಪತನಗೊಂಡು, ಈಗ ಬಿಎಸ್‌ವೈ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ, ತಾವು ಹಿಂದೆ ವಿರೋಧಿಸಿದ್ದ ಕ್ರಮವನ್ನು ಇವರು ಮುಂದುವರಿಸಿದ್ದರು ಎಂಬುದು ಅರ್ಜಿದಾರರ ವಾದ.
ಅಷ್ಟೇ ಅಲ್ಲ, ಕೋಟ್ಯಾಂತರ ರೂಪಾಯಿ ಆದಾಯ ಬರಬಲ್ಲ ಜಮೀನನ್ನು ಪ್ರತೀ ಎಕರೆಗೆ 1,22,195 ರೂಪಾಯಿ ದರದಲ್ಲಿ ಮಾರಾಟ ಮಾಡುವುದು ಕಾನೂನು ಬಾಹಿರ ಕ್ರಮ ಎಂದು ಅರ್ಜಿದಾರರು ದೂರಿದ್ದಾರೆ. ಸಿಎಂ ಯಡಿಯೂರಪ್ಪ, ಕ್ಯಾಬಿನೆಟ್ ಸಬ್‌ಕಮಿಟಿ ಮುಖ್ಯಸ್ಥರಾದ ಸಚಿವ ಜಗದೀಶ್ ಶೆಟ್ಟರ್ ಹಾಗೂ ಅಧಿಕಾರಿಗಳ ಕ್ರಮ ಪ್ರಶ್ನಾರ್ಹ ಎಂಬುದೂ ಅರ್ಜಿದಾರರ ಅಭಿಪ್ರಾಯವಾಗಿದೆ.
ಈ ಹಿಂದೆ ಮೂಲ ಅರ್ಜಿಯಲ್ಲಿ ಕೆಲವೊಂದು ದಾಖಲೆಗಳ ಕೊರತೆ ಹಾಗೂ ಅಂಶಗಳ ಪರಿಷ್ಕರಣೆಯ ಅಗತ್ಯವಿರುವ ಹಿನ್ನೆಲೆಯಲ್ಲಿ ಆ ಅರ್ಜಿಯನ್ನು ಇತ್ಯರ್ಥಗೊಳಿಸಿದ್ದ ಹೈಕೋರ್ಟ್, ಇದೀಗ ಪರಿಷ್ಕೃತ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿದೆ. ಈ ಮೂಲಕ ಜಿಂದಾಲ್ ಕುರಿತ ಕಾನೂನು ಸಮರ ಬಿಎಸ್‌ವೈ ಸರ್ಕಾರಕ್ಕೆ ಸವಾಲೆಂಬಂತಾಗಿದೆ.