ಬೆಂಗಳೂರು: ಕರ್ನಾಟಕ ಕೌಶಲ್ಯ ಅಭಿವೃದ್ಧಿ ಇಲಾಖೆ ಮತ್ತು ಮೆಲ್ಬೋರ್ನ್ ಮೂಲದ ಆರ್ಎಂಐಟಿ ವಿಶ್ವವಿದ್ಯಾಲಯವು ರಾಜ್ಯದ ಕೌಶಲ್ಯಾಭಿವೃದ್ಧಿ ವಲಯದಲ್ಲಿ ವಿದ್ಯಾರ್ಥಿಗಳಿಗೆ ಮರು-ಕೌಶಲ್ಯ ಮತ್ತು ಉನ್ನತೀಕರಣಕ್ಕೆ ಹೆಚ್ಚು ಆದ್ಯತೆ ನೀಡಲು ಮುಂದಾಗಿವೆ.
ಈ ನಿಟ್ಟಿನಲ್ಲಿ ಕೆಲವು ಉಪಕ್ರಮಗಳನ್ನು ಜಾರಿಗೆ ತರುವ ಕುರಿತು ಸಮಾಲೋಚನೆ ನಡೆಸಲಾಗಿದೆ. ಕುಲಪತಿ ಮಿಶ್ ಈಸ್ಟ್ಮನ್ ನೇತೃತ್ವದ ಆರ್ಎಂಐಟಿ ವಿಶ್ವವಿದ್ಯಾಲಯದ ನಿಯೋಗವು ವೃತ್ತಿಪರ ಶಿಕ್ಷಣ ಕಾಲೇಜಿನ ನಿರ್ದೇಶಕ ಪ್ರಶೀಲ್ ಸಿಂಗ್; ವಿಕ್ಟೋರಿಯಾ ಸರ್ಕಾರದ (ಆಸ್ಟ್ರೇಲಿಯಾ) ವ್ಯವಸ್ಥಾಪಕ ಜಸ್ಟಿನ್ ಸ್ಮಿತ್ ಮತ್ತು ಪ್ರಾದೇಶಿಕ ನಿರ್ದೇಶಕಿ (ಶಿಕ್ಷಣ) ಆನಿ ಸಂತಾನ ಅವರೊಂದಿಗೆ ವಿಕಾಸಸೌಧದಲ್ಲಿ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣ್ ಪ್ರಕಾಶ್ ಪಾಟೀಲ್ ಚರ್ಚಿಸಿದರು. ಕೌಶಲ್ಯ ಅಭಿವೃದ್ಧಿಯಲ್ಲಿ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ಸರ್ಕಾರದ ನಡುವಿನ ಸಹಯೋಗವನ್ನು ಬಲಪಡಿಸುವ ಬಗ್ಗೆ ಸುದೀರ್ಘವಾಗಿ ಸಮಾಲೋಚನೆ ನಡೆಸಲಾಗಿದೆ ಎಂದವರು ತಿಳಿಸಿದರು.
ಕೌಶಲ್ಯ ಶಿಕ್ಷಣದಲ್ಲಿ ಕರ್ನಾಟಕ ಸರ್ಕಾರದ ಪ್ರಯತ್ನಗಳು ಉನ್ನತಮಟ್ಟದಲ್ಲಿವೆ ಎಂದು ಈಸ್ಟ್ಮನ್ ಶ್ಲಾಘಿಸಿದರು. ಇಲಾಖೆಯೊಂದಿಗೆ ದೀರ್ಘಕಾಲೀನ ಪಾಲುದಾರಿಕೆ ಹೊಂದಲು ಆರ್ಎಂಐಟಿ ಬದ್ಧವಾಗಿದೆ ಎಂದು ಹೇಳಿದರು.
ಆರ್ಎಂಐಟಿ ಈಗಾಗಲೇ ಕೆಲವು ಭಾರತೀಯ ವಿಶ್ವವಿದ್ಯಾಲಯಗಳೊಂದಿಗೆ ಸಹಯೋಗ ಹೊಂದಿದೆ ಮತ್ತು ಸಮಕಾಲೀನ, ಜಾಗತಿಕವಾಗಿ ಪ್ರಸ್ತುತವಾದ ಕೌಶಲ್ಯಾಭಿವೃದ್ಧಿ ಯೋಜನೆಗಳು, ತರಬೇತುದಾರರಿಗೆ ತರಬೇತಿ ನೀಡಲು ಉತ್ಸುಕವಾಗಿದೆ ಎಂದು ಈಸ್ಟ್ಮನ್ ಸ್ಪಷ್ಟಪಡಿಸಿದರು. ‘ಜಾಗತಿಕ ಮಾನದಂಡಗಳನ್ನು ಅಳವಡಿಸಲು, ತರಬೇತುದಾರರನ್ನು ಮೇಲ್ದರ್ಜೆಗೇರಿಸುವುದು ಕೌಶಲ್ಯ ಉದ್ಯಮಕ್ಕೆ ಗಮನಾರ್ಹ ಪ್ರಗತಿಗೆ ಕಾರಣವಾಗಲಿದೆ’ ಎಂದು ಈಸ್ಟ್ಮನ್ ಹೇಳಿದರು.
ಕೌಶಲ್ಯ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ ಕೌಶಲ್ಯ ತರಬೇತುದಾರರಿಗೆ ತರಬೇತಿ ನೀಡುವಲ್ಲಿ ಪರಿಣತಿ ಹೊಂದಿರುವ ಚಿಕ್ಕಬಳ್ಳಾಪುರದಲ್ಲಿರುವ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಸಂಸ್ಥೆಯ ಬಗ್ಗೆ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ವಿವರಿಸಿದರು.
“ನಮ್ಮಲ್ಲಿ ಕೌಶಲ್ಯ ತರಬೇತುದಾರರಿಗೆ ತರಬೇತಿ ನೀಡುವ ಮಾಸ್ಟರ್ ತರಬೇತುದಾರರು ಇದ್ದಾರೆ ಮತ್ತು ಈಗ ಜಾಗತಿಕ ಮಾನದಂಡಗಳನ್ನು ಪೂರೈಸಲು ಮಾಸ್ಟರ್ ತರಬೇತುದಾರರ ಪರಿಣತಿಯನ್ನು ಮತ್ತಷ್ಟು ಹೆಚ್ಚಿಸಲು ಸೂಪರ್ ತರಬೇತುದಾರರನ್ನು ಕರೆತರುವತ್ತ ನಮ್ಮ ಆಲೋಚನೆ ಇದೆ” ಎಂದು ಅವರು ಹೇಳಿದರು.
ಆರೋಗ್ಯ ರಕ್ಷಣೆಯಲ್ಲಿ ಹೆಚ್ಚಿನ ಸಂಶೋಧನೆ ಮತ್ತು ತರಬೇತಿ, ನಾವೀನ್ಯತೆಯಲ್ಲಿ ಪರಿಣತಿಗೆ ಹೆಸರುವಾಸಿಯಾದ ಆರ್ಎಂಐಟಿ ವಿಶ್ವವಿದ್ಯಾಲಯವು ಕರ್ನಾಟಕದ ಕೌಶಲ್ಯ ಪರಿಸರ ವ್ಯವಸ್ಥೆಗೆ ಕೊಡುಗೆ ನೀಡಲು ಆಸಕ್ತಿ ವ್ಯಕ್ತಪಡಿಸಿದೆ. ಕರ್ನಾಟಕವು ನರ್ಸಿಂಗ್ ಮತ್ತು ಸಂಬಂಧಿತ ಆರೋಗ್ಯ ವಿಜ್ಞಾನ ವೃತ್ತಿಪರರ ವಿಶಾಲ ಗುಂಪನ್ನು ಹೊಂದಿದೆ ಮತ್ತು ಪಠ್ಯಕ್ರಮದ ಭಾಗವಾಗಿ ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳಿಗೆ ವಿದ್ಯಾರ್ಥಿಗಳನ್ನು ಕಳುಹಿಸಲಾಗುತ್ತದೆ ಎಂದು ಡಾ. ಪಾಟೀಲ್ ಮಾಹಿತಿ ನೀಡಿದರು.
ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸಿನ್, ಆಯುಕ್ತರಾದ ಡಾ. ಆರ್. ರಾಗಪ್ರಿಯ, ನಿರ್ದೇಶಕರಾದ ಡಾ. ಬಿ.ಎಲ್. ಸುಜಾತಾ ರಾಥೋಡ್, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ. ಭವನ, ಮತ್ತು ರಿಜಿಸ್ಟ್ರಾರ್ ಪಿ.ಆರ್. ಶಿವ ಪ್ರಸಾದ್, ಆಸ್ಟ್ರೇಲಿಯಾದ ನಿಯೋಗ ಸಂಯೋಜಕ ದಿಲೀಪ್ ಇಬ್ರಾಹಿಂ ಹಾಗೂ ಇತರ ಅಧಿಕಾರಿಗಳು ಭಾಗವಹಿಸಿದ್ದರು.