ಗದಗ: ನಾಡಿನ ಜನ ಚುನಾವಣಾ ಸಡಗರದಲ್ಲಿ ತಲ್ಲೀನವಾಗಿದ್ದರೆ ಮತ್ತೊಂದೆಡೆ ಹಂತಕರು ಅಟ್ಟಹಾಸ ಮೆರೆದಿರುವ ಕ್ರೌರ್ಯದ ಘಟನೆ ಗದಗದಲ್ಲಿ ನಡೆದಿದೆ. ಗದಗ ನಗರದ ದಾಸರ ಓಣಿಯಲ್ಲಿ ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆಮಾಡಲಾಗಿದೆ.
ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಪುತ್ರ 27 ವರ್ಷ ವಯಸ್ಸಿನ ಕಾರ್ತಿಕ್, 55 ವರ್ಷ ವಯಸ್ಸಿನ ಪರಶುರಾಮ, 45 ವರ್ಷ ವಯಸ್ಸಿನ ಲಕ್ಷ್ಮೀ , 16 ವರ್ಷ ವಯಸ್ಸಿನ ಆಕಾಂಕ್ಷಾ ಅವರನ್ನು ತಡರಾತ್ರಿ ಹಂತಕರು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಪುತ್ರ ಕಾರ್ತಿಕ್’ಗೆ ಮದುವೆ ನಿಗದಿಯಾಗಿದ್ದು, ವಿವಾಹ ತಯಾರಿ ಸಂಬಂಧ ಕೊಪ್ಪಳದ ಪರಶುರಾಮ, ಪತ್ನಿ ಲಕ್ಷ್ಮೀ, ಪುತ್ರಿ ಆಕಾಂಕ್ಷಾ ಅವರು ಬಂದಿದ್ದರು. ಗುರುವಾರ ರಾತ್ರಿ ಪರಶುರಾಮ ಪತ್ನಿ ಲಕ್ಷ್ಮೀಯವರ ಹುಟ್ಟಿದ ಹಬ್ಬವನ್ನು ಆಚರಿಸಲಾಗಿತ್ತು. ಕಾರ್ಯಕ್ರಮ ಮುಗಿದು ಎಲ್ಲರೂ ಮಲಗಿದ್ದ ಸಂದರ್ಭದಲ್ಲಿ ಕಿಟಕಿ ಗಾಜನ್ನು ಒಡೆದು ಒಳ ನುಗ್ಗಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಮೂವರನ್ನು ಕೊಲೆ ಮಾಡಿದ್ದಾರೆ. ಕಿರಿಚಾಟದ ಸದ್ದು ಕೇಳಿ ಸ್ಥಳಕ್ಕೆ ಧಾವಿಸಿದ ಕಾರ್ತಿಕ್’ನ ನ್ನೂ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.
ಈ ಭೀಬತ್ಸ ಕೃತ್ಯವನ್ನು ಕಂಡ ಮನೆ ಸದಸ್ಯರು ಕೋಣೆಯೊಳಗೆ ಅವಿತುಕೊಂಡು ಪೊಲೀಸರಿಗೆ ಕರೆ ಮಾಡಿದ್ದಾರೆ. ಆದರೆ, ಪೊಲೀಸರು ಸ್ಥಳಕ್ಕಾಗಮಿಸುವ ಮುನ್ನವೇ ಹಂತಕರು ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಶ್ವಾನದಳದೊಂದಿಗೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯ ತಂಡವನ್ನೂ ಕರೆಸಿ ತನಿಖೆ ಕೈಗೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಬಲೇ ಬೀಸಿದ್ದಾರೆ.






















































