ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡುವ ಸಾಧ್ಯತೆಗಳ ಬಗ್ಗೆ ಸುಳಿವು ಸಿಗುತ್ತಿದ್ದಂತೆಯೇ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಡಿ.ವಿ.ಸದಾನಂದ ಗೌಡ ಅಚ್ಚರಿಯ ಸಂದೇಶ ರವಾನಿಸಿದ್ದಾರೆ.
ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿರುವ ಸದಾನಂದ ಗೌಡ ಅವರು, ‘ನನಗೆ ಕಳೆದ ಹತ್ತು ವರ್ಷಗಳ ಕಾಲ ಈ ಕ್ಷೇತ್ರದ ಲೋಕಸಭಾ ಸದಸ್ಯನಾಗಿ, ನಿಮ್ಮ ಕೆಲಸ ಮಾಡುವ ಅವಕಾಶವನ್ನು ಮಾಡಿಕೊಟ್ಟು ಆಶೀರ್ವಾದವನ್ನು ಮಾಡಿದ್ದೀರಿ’ ಎಂದು ಬಿಜೆಪಿ ಕಾರ್ಯಕರ್ತರಿಗೆ ಹಾಗೂ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
‘ನಾನು ನನ್ನ ಶಕ್ತಿಮೀರಿ ನಿಮ್ಮ ಸೇವೆಯನ್ನು ಮಾಡುವ ಪ್ರಯತ್ನವನ್ನು ಮಾಡಿದ್ದೇನೆ. ನಿಮ್ಮ ಆಶೀರ್ವಾದದಿಂದ ಕೇಂದ್ರದಲ್ಲಿ ನಮ್ಮೆಲ್ಲರ ಪ್ರೀತಿಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜೊತೆಯಲ್ಲಿ 7 ವರ್ಷಗಳ ಕಾಲ ಕ್ಯಾಬಿನೆಟ್ ಮಂತ್ರಿಯಾಗಿ ಕೆಲಸ ಮಾಡುವ ಅವಕಾಶವನ್ನು ಕೂಡ ಕಲ್ಪಿಸಿದ್ದೀರಿ. ನಾನು ನಿಮ್ಮೆಲ್ಲರಿಗೂ ಚಿರೃಣಿ’ ಎಂದು ಡಿವಿಎಸ್ ಹೇಳಿದ್ದಾರೆ.
‘ನಿಮ್ಮ ಜೊತೆಗೆ ಇನ್ನು ಮುಂದೆಯೂ ಇರುತ್ತೇನೆ. ಎಲ್ಲರಿಗೂ ನನ್ನ ಅಂತರಾಳದ ಹೃದಯ ತುಂಬಿದ ಧನ್ಯವಾದಗಳು’ ಎಂದು ಡಿ.ವಿ. ಸದಾನಂದ ಗೌಡರು ಹಾಕಿರುವ ಪೋಸ್ಟ್ ರಾಜಕಾರಣದಲ್ಲಿ ಹಲವಾರು ರೀತಿಯ ಚರ್ಚೆಗಳನ್ನು ಹುಟ್ಟು ಹಾಕಿದೆ.